ಶೀರ್ಷಿಕೆ ಮಾತ್ರ ಬಿಡುಗಡೆಗೊಳಿಸಿ ವರ್ಷವಾಗುತ್ತಾ ಬಂದ ಚಿತ್ರ ‘ರಂಗನಾಯಕ’. ಚಿತ್ರದ ಮುಹೂರ್ತ ಸಮಾರಂಭವನ್ನು ಬುಲ್ಟೆಂಪಲ್ ರಸ್ತೆಯಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನೆರವೇರಿಸಲಾಯಿತು.
‘ಮಠ’ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಹಾಗೂ ನವರಸನಾಯಕ ಜಗ್ಗೇಶ್ ಮರಳಿ ಒಂದಾಗಿ ಮಾಡುತ್ತಿರುವ ಚಿತ್ರವೇ ರಂಗನಾಯಕ. ಮುಹೂರ್ತ ದೃಶ್ಯದಲ್ಲಿ ಜಗ್ಗೇಶ್ ಅವರು ರಾಯರ ಮುಂದೆ ನಿಂತು ಪ್ರಾರ್ಥನೆ ಮಾಡುತ್ತಿರುವ ದೃಶ್ಯದ ಚಿತ್ರೀಕರಣ ನಡೆಸಲಾಯಿತು. ಚಿತ್ರದ ಪ್ರಥಮ ದೃಶ್ಯಕ್ಕೆ ನಿರ್ಮಾಪಕ ದೇವೇಂದ್ರ ರೆಡ್ಡಿ ಅವರು ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ವಿಖ್ಯಾತ್ ಫಿಲಂಸ್ ಬ್ಯಾನರ್ ಮೂಲಕ ಪುಷ್ಪಕವಿಮಾನ, ಇನ್ಸ್ಪೆಕ್ಟರ್ ವಿಕ್ರಂ ಚಿತ್ರಗಳ ನಂತರ ವಿಖ್ಯಾತ್ ನಿರ್ಮಿಸುತ್ತಿರುವ ಮೂರನೇ ಚಿತ್ರ ಇದಾಗಿದೆ. ಚಿತ್ರಕ್ಕೆ ಗುರುಪ್ರಸಾದ್ ನಿರ್ದೇಶನದ ಜೊತೆಗೆಕಥೆ, ಚಿತ್ರಕಥೆಯ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ.
ಬರೀ ಹೊಡಿಯೋದು, ಬಡಿಯೋದಷ್ಟೇ ಹೀರೋಯಿಸಂ ಅಲ್ಲ, ಪ್ರೇಕ್ಷಕರನ್ನು ನಗಿಸೋದು ಕೂಡ ಹೀರೋಯಿಸಂ ಎನ್ನುವ ಗುರುಪ್ರಸಾದ್ ತಮ್ಮ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ನಗಿಸುತ್ತಲೇ ಸಮಾಜದ ಅಂಕು ಡೊಂಕುಗಳನ್ನು, ಕಂದಾಚಾರಗಳನ್ನು ವಿಡಂಬನಾತ್ಮಕವಾಗಿ ಹೇಳುತ್ತಾರೆ. ಯಕ್ಷಗಾನ ಪ್ರಸಂಗದಲ್ಲಿ ಸಾಮಾನ್ಯವಾಗಿ ಬಳಸುವ ಪದ ರಂಗನಾಯಕ. ಈ ಚಿತ್ರದಲ್ಲಿ ರಂಗನಾಯಕ ಆಗಿರುವುದು ಜಗ್ಗೇಶ್ ಅಂತ ಎಲ್ಲರಿಗೂ ಗೊತ್ತು, ಆದರೆ ಈ ರಂಗನಾಯಕ ಆಡಿಸುವ ಸೂತ್ರದ ಗೊಂಬೆಗಳು ಯಾರಾಗಿರ್ತಾರೆ ಎನ್ನುವುದು ಮುಂದಿನ ದಿನಗಳಲ್ಲಷ್ಟೇ ಗೊತ್ತಾಗಬೇಕಿದೆ. ಜನವರಿ 15ರ ಸಂಕ್ರಾಂತಿಯ ದಿನದಿಂದ ರಂಗನಾಯಕನ ಚಿತ್ರೀಕರಣ ಪ್ರಾರಂಭಿಸುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.
ಚಿತ್ರದಲ್ಲಿ ರಂಗಾಯಣ, ನೀನಾಸಂ, ಬಿಂಬ ಸೇರಿದಂತೆ ಹಲವಾರು ರಂಗಶಾಲೆಯ ನೂರಾರು ಕಲಾವಿದರುಗಳು ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಅನೂಪ್ ಸೀಳಿನ್ ಅವರ ಸಂಗೀತ ನಿರ್ದೇಶನವಿದ್ದು, ಮನೋಹರ್ ಜೋಷಿ ಅವರ ಛಾಯಾಗ್ರಹಣವಿದೆ. ಚಿತ್ರದ ಕಥೆ, ಚಿತ್ರಕಥೆಯ ಜೊತೆ ಸಂಭಾಷಣೆ ಹಾಗೂ ಸಾಹಿತ್ಯ ಕೂಡ ಗುರುಪ್ರಸಾದ್ ಅವರೇ ರಚಿಸಿದ್ದಾರೆ. ವೀರಂ ಖ್ಯಾತಿಯ ಶಶಿಧರ್ ಹಾಗೂ ಉದ್ಯಮಿ ದೇವೇಂದ್ರ ರೆಡ್ಡಿ ಈ ಚಿತ್ರದ ಸಹನಿರ್ಮಾಪಕರು.
Be the first to comment