ರವಿಚಂದ್ರನ್

ಗೋಳಾಡಿದರೆ ಜನ ಸಿನಿಮಾ ನೋಡಲ್ಲ: ರವಿಚಂದ್ರನ್

ಚೆನ್ನಾಗಿದ್ದಾಗ ಜನ ಹುಡುಕಿಕೊಂಡು ಬಂದು ಚಿತ್ರಗಳನ್ನು ನೋಡಿದ್ದಾರೆ. ಜನ ಚಿತ್ರ ನೋಡುತ್ತಿಲ್ಲ ಎಂದು ಗೋಳಾಡಿದರೆ ಅವರು ಯಾವತ್ತೂ ಸಿನಿಮಾ ನೋಡುವುದಿಲ್ಲ  ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಹೇಳಿದ್ದಾರೆ.

ಪೃಥ್ವಿ ಅಂಬಾರ್ ಮತ್ತು ಪ್ರಮೋದ್‍ ಅಭಿನಯದ ‘ಭುವನಂ ಗಗನಂ’ ಚಿತ್ರ  25 ದಿನಗಳನ್ನು ಪೂರೈಸಿದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರವಿಚಂದ್ರನ್ , ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ನಗುವಿಲ್ಲ. ಜನ ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಇದರ ನಡುವಲ್ಲೇ ಚಿತ್ರವೊಂದು ಯಶಸ್ವಿ 25 ದಿನ ಪ್ರದರ್ಶನವಾಗಿರುವುದು ಖುಷಿಯ ವಿಚಾರ. ಜನ ಚಿತ್ರ ನೋಡುವುದಿಲ್ಲ ಎಂದು ಆರೋಪ ಮಾಡುವುದು ಸರಿಯಲ್ಲ. ಸಿನಿಮಾ ಚೆನ್ನಾಗಿದ್ದರೆ ಜನ ಬರುತ್ತಾರೆ. ಅದಕ್ಕೆ ಬೇರೆ ಕಾರಣಗಳೇ ಇಲ್ಲ ಎಂದು ಹೇಳಿದರು.

ಚಿತ್ರ ಚೆನ್ನಾಗಿದ್ದರೆ ಜನ ಚಿತ್ರಮಂದಿರಕ್ಕೆ ನುಗ್ಗುತ್ತಾರೆ ಎನ್ನುವುದಕ್ಕೆ ‘ಪ್ರೇಮ ಲೋಕ’ ಚಿತ್ರವೇ ಸಾಕ್ಷಿ. ಚಿತ್ರ 100 ದಿನ ಆಗುವವರೆಗೂ ನಿಧಾನಕ್ಕೆ ಸಾಗಿತು. 100ನೇ ದಿನಕ್ಕೆ ಚಿತ್ರ ಸೂಪರ್‍ ಹಿಟ್ ಆಯಿತು. ಚಿತ್ರ ಚೆನ್ನಾಗಿದ್ದಾಗ ಜನ ಹುಡುಕಿಕೊಂಡು ಬಂದು ಚಿತ್ರಗಳನ್ನು ನೋಡಿದ್ದಾರೆ. ಜನ ಚಿತ್ರ ನೋಡುತ್ತಿಲ್ಲ ಎಂದು ಗೋಳಾಡಿದರೆ ಅವರು ಯಾವತ್ತೂ ಸಿನಿಮಾ ನೋಡುವುದಿಲ್ಲ ಎಂದರು.

ಇತ್ತೀಚಿನ ವರ್ಷಗಳಲ್ಲಿ ನಾವು ಶೀಲ್ಡ್‌ಗಳನ್ನು ನೋಡುವುದನ್ನೇ ಮರೆತುಬಿಟ್ಟಿದ್ದೇವೆ. ಈ ಹಿಂದೆ  ಚಿತ್ರ 25 ವಾರಗಳು ಪೂರೈಸಿದರೆ ಶೀಲ್ಟ್ ಕೊಡುವ ಪರಿಪಾಠವಿತ್ತು. ಈಗ ಅದು 25 ದಿನಕ್ಕೆ ಬಂದು ನಿಂತಿದೆ. ಜನ 25 ದಿನ ಸಿನಿಮಾ ನೋಡಿದರೆ ಸಾಕು ಎನ್ನುವಂತಾಗಿದೆ. ಅದರಲ್ಲಿ ತಪ್ಪೇನಿಲ್ಲ. ಆಗ ಚಿತ್ರ ಬಿಡುಗಡೆ ಮಾಡುತ್ತಿದ್ದುದಕ್ಕೂ, ಈಗ ಮಾಡುತ್ತಿರುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಆಗ ಕೆಲವು ಚಿತ್ರಮಂದಿರಗಳಲ್ಲಿ ಮಾತ್ರ ಚಿತ್ರ ಬಿಡುಗಡೆಯಾಗುತ್ತಿತ್ತು. ಈಗ ಏಕಕಾಲಕ್ಕೆ ಸಾವಿರಾರು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ 25 ದಿನ ಓಡುವುದು ದೊಡ್ಡ ವಿಷಯ ಎಂದು ತಿಳಿಸಿದರು.

ಭುವನಂ ಗಗನಂ ಸಿನಿಮಾ ಲವ್, ರೋಮ್ಯಾನ್ಸ್, ಫ್ಯಾಮಿಲಿ ಎಮೋಷನ್ ಕಥಾಹಂದರದ ಸಿನಿಮಾ.  ಪ್ರಮೋದ್ ಗೆ ಜೋಡಿಯಾಗಿ ಲವ್ ಮಾಕ್ಟೇಲ್ ಖ್ಯಾತಿಯ ರೆಚೆಲ್ ಡೇವಿಡ್, ಪೃಥ್ವಿಗೆ ಜೋಡಿಯಾಗಿ ಅಶ್ವಥಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ಸ್ಪರ್ಶ ರೇಖಾ, ಪ್ರಜ್ವಲ್ ಶೆಟ್ಟಿ, ಚೇತನ್ ದುರ್ಗ ತಾರಾಬಳಗದಲ್ಲಿದ್ದಾರೆ.

ಉದಯ್ ಲೀಲಾ ಕ್ಯಾಮೆರಾ ಕೈಚಳಕ, ಗುಮ್ಮಿನೇನಿ ವಿಜಯ್, ಮ್ಯೂಸಿಕ್ ಕಿಕ್, ಸುನೀಲ್ ಕಶ್ಯಪ್ ಸಂಕಲನ, ಗಿರೀಶ್ ಮೂಲಿಮನಿ, ಪ್ರಸನ್ನ ವಿ ಸಂಭಾಷಣೆ ಸಿನಿಮಾಕ್ಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!