ಗಮನ ಸೆಳೆಯುವ ‘ರವಿ ಬೋಪಣ್ಣ’ ಟ್ರೈಲರ್

ರವಿಚಂದ್ರನ್ ನಟನೆಯ ‘ರವಿ ಬೋಪಣ್ಣ’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು ಸಿನಿಪ್ರಿಯರಿಗೆ ಹೊಸ ಅನುಭವ ನೀಡಿದೆ.

ಈ ಟ್ರೈಲರ್ 7 ನಿಮಿಷ ಇದೆ. ‘ಕರ್ಮ ಈಸ್ ಕ್ರೇಜಿ’ ಅನ್ನುವ ವಿಭಿನ್ನ ಅಡಿಬರಹ ಇರುವ ‘ರವಿ ಬೋಪಣ್ಣ’ ಸಿನಿಮಾ ಇನ್‌ವೆಸ್ಟಿಗೇಷನ್ ಥ್ರಿಲ್ಲರ್ ಕಥೆ ಒಳಗೊಂಡಿದೆ. ನಾಯಕಿಯರಾಗಿ ರಾಧಿಕಾ ಕುಮಾರಸ್ವಾಮಿ, ಕಾವ್ಯಾ ಶೆಟ್ಟಿ ಮಿಂಚಿದ್ದಾರೆ. ತೆರೆಮೇಲೆ ಇವರಿಬ್ಬರನ್ನು ಬಹಳ ಸೊಗಸಾಗಿ ತೋರಿಸಿರುವುದು ಟ್ರೈಲರ್‌ನಲ್ಲಿ ಕಂಡು ಬಂದಿದೆ. ಕಾವ್ಯಾ ಬಹುತೇಕ ಮಾಡರ್ನ್ ಲುಕ್‌ನಲ್ಲಿ ಬೋಲ್ಡ್‌ ಆಗಿ ದರ್ಶನ ಕೊಟ್ಟಿದ್ದರೆ, ರಾಧಿಕಾ ಸೀರೆಯಲ್ಲಿ ಕಂಗೊಳಿಸಿದ್ದಾರೆ.

ಜಿ.ಎಸ್.ವಿ.ಸೀತಾರಾಮ್ ಛಾಯಾಗ್ರಹಣ ಚಿತ್ರಕ್ಕಿದೆ. ರಾಮಕೃಷ್ಣ, ಜೈ ಜಗದೀಶ್, ರವಿಶಂಕರ್ ಗೌಡ, ಮೋಹನ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಮೂರು ವಿಭಿನ್ನ ಶೇಡ್‌ಗಳಲ್ಲಿ ರವಿಚಂದ್ರನ್ ಕಾಣಿಸಿಕೊಂಡಿದ್ದಾರೆ. ಟ್ರೈಲರ್‌ನಲ್ಲಿ ಕಥೆಯ ಸಣ್ಣ ಎಳೆಯನ್ನೂ ಬಿಟ್ಟುಕೊಟ್ಟಿಲ್ಲ ಎನ್ನುವುದು ವಿಶೇಷ. ಚಿತ್ರದಲ್ಲಿ ‘ರವಿ ಬೋಪಣ್ಣ”ನ 30 ವರ್ಷ ವಯಸ್ಸಿನಿಂದ 60ವರ್ಷ ವಯಸ್ಸಿನ ನಡುವೆ ನಡೆಯುವ ಕಥೆಯನ್ನು ಹೇಳಲಾಗಿದೆ. 3 ಬೇರೆ ಬೇರೆ ಲುಕ್‌ನಲ್ಲಿ ಕ್ರೇಜಿಸ್ಟಾರ್ ಕಾಣಿಸಿಕೊಂಡಿದ್ದಾರೆ. ಒಮ್ಮೆ ಯಂಗ್‌ ಆಗಿ ಕ್ಲೀನ್‌ ಶೇವ್‌ ಲುಕ್‌ನಲ್ಲಿ, ಮತ್ತೊಂದು ಕಡೆ ಗಿರಿಜಾ ಮೀಸೆ ತಿರುವಿದ್ದಾರೆ. ಇನ್ನೊಮ್ಮೆ ಗಡ್ಡ ಬಿಟ್ಟು ರಗಡ್ ಲುಕ್‌ನಲ್ಲಿ ಬಹುತೇಕ ಸಿನಿಮಾ ಕಾಣಿಸಿಕೊಂಡಿರುವುದು ಗೊತ್ತಾಗುತ್ತಿದೆ.

‘ರವಿ ಬೋಪಣ್ಣ’ ಈಶ್ವರಿ ಪ್ರೊಡಕ್ಷನ್ಸ್ ಸಂಸ್ಥೆಯ 50ನೇ ಸಿನಿಮಾ. ಅದ್ಧೂರಿಯಾಗಿ ಚಿತ್ರವನ್ನು ರವಿಚಂದ್ರನ್ ನಿರ್ಮಾಣ ಮಾಡಿದ್ದಾರೆ. ಅವರು ಸಿನಿಮಾ ನಿರ್ಮಾಣ, ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ರಿಟೈರ್ಡ್ ಪೊಲೀಸ್ ಆಫೀಸರ್ ಹಾಗೂ ಅಂಗಾಂಗ ಕಳ್ಳ ಸಾಗಣೆ ದಂಧೆಯ ಕಥೆ ಸಿನಿಮಾದಲ್ಲಿದೆ.

ಸುದೀಪ್ ವಕೀಲನ ಪಾತ್ರದಲ್ಲಿ ನಟಿಸಿದ್ದಾರೆ. ಮಲಯಾಳಂನ ‘ಜೋಸೆಫ್’ ಸಿನಿಮಾದ ರೀಮೇಕ್‌ ಇದಾಗಿದೆ. ಆಗಸ್ಟ್ 12 ರಂದು ರವಿ ಬೋಪಣ್ಣ ಸಿನಿಮಾ ರಿಲೀಸ್ ಆಗಲಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!