‘ರಾತ್ರೋರಾತ್ರಿ’ ತೆರೆಗೆ ಸಿದ್ಧ..!

ಕನ್ನಡ ಚಿತ್ರರಂಗದಲ್ಲಿ ಹಾರರ್ ಚಿತ್ರಗಳ ಸರದಿ ಮುಂದುವರೆದಿದೆ. ಕೋವಿಡ್ ನಂತರ ಹೊರ ಬರುತ್ತಿರುವ ಮೊದಲ ಹಾರರ್‍ಚಿತ್ರ ಎಂದರೆ ರಾತ್ರೋರಾತ್ರಿ. ಪವನ್‍ಕುಮಾರ್ ಚಿತ್ರದ ನಾಯಕ, 400ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿರುವ ದಾಸ್ ಅವರ ಪುತ್ರ. ಇವರು ಚಿತ್ರಕ್ಕೆ ಬಂಡವಾಳ ಕೂಡ ಹಾಕಿದ್ದಾರೆ.

ಒಂದೇ ರಾತ್ರಿಯಲ್ಲಿ ನಡೆಯುವ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಡೀಲ್ ಮುರಳಿ ಕಥೆ ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ನಾಯಕ ಒಬ್ಬ ಟಿಂಪೋ ಚಾಲಕ, ಅನಾರೋಗ್ಯದಿಂದ ಆಸ್ಪತ್ರೆಯಲ್ಲಿರುವ ತನ್ನ ತಾಯಿಯ ಚಿಕಿತ್ಸಾ ವೆಚ್ಚ ಕ್ಕಾಗಿ ಒಂದು ಕೆಲಸವನ್ನು ಒಪ್ಪಿಕೊಳ್ಳುತ್ತಾನೆ.

ತಾವು ಕೊಟ್ಟ ಶವವನ್ನು ಹೇಳಿದ ಸ್ಥಳಕ್ಕೆ ಸಾಗಿಸಿದರೆ ನಿನ್ನ ತಾಯಿಯ ಚಿಕಿತ್ಸಾ ವೆಚ್ಚದ ಹಣವನ್ನು ನೀಡುವುದಾಗಿ ಪರಿಚಯದವರೊಬ್ಬರು ಹೇಳುತ್ತಾರೆ, ಅದರಂತೆ ನಾಯಕ ಆ ಶವ ಸಾಗಿಸಲು ಹೊರಟಾಗ ಅದು ಆ ಊರಿಂದ ಹೊರಗೆ ಹೋಗದೆ ನಾಯಕನಿಗೆ ತೊಂದರೆ ಕೊಡುತ್ತದೆ.

ಮುಂದೆ ನಾಯಕ ತಾನು ಹಿಡಿದ ಕೆಲಸ ಸಾಸುತ್ತಾನಾ, ಆ ಶವ ಯಾಕೆ ಊರನ್ನು ಬಿಡಲು ಒಪ್ಪುತ್ತಿಲ್ಲ ಅದರ ಹಿನ್ನೆಲೆ ಏನು ಎಂದು ಹೇಳುವುದೇ ರಾತ್ರೋ ರಾತ್ರಿ ಚಿತ್ರದ ಸಾರಾಂಶ. ಈ ಚಿತ್ರದಲ್ಲಿ ನಾಯಕಿಯಾಗಿ ರಚಿಕಾ ನಟಿಸಿದ್ದಾರೆ. ಇನ್ನು ದೆವ್ವವಾಗಿ ಡಯಾನಾ ಎಂಬ ನಟಿ ಕಾಣಿಸಿಕೊಂಡಿದ್ದಾರೆ. ಖಳನಟರಾಗ ವಿನಯ್‍ಕುಮಾರ್ ವಿ. ನಾಯಕ್, ರಾಜ್‍ಕಾಂತ್ ನಟಿಸಿದ್ದಾರೆ. ಚಿತ್ರದಲ್ಲಿ ಒಂದೇ ಹಾಡಿದ್ದು ಅದಲ್ಲೆ ಸಾಹಿತ್ಯ ರಚಿಸಿ, ಸಂಗೀತ ಸಂಯೋಜನೆ ಮಾಡುವುದರೊಂದಿಗೆ ಅದಕ್ಕೆ ದನಿಯಾಗಿದ್ದಾರೆ ಶ್ರೀಧರ್ ನರಸಿಂಹನ್.

ನಿನ್ನೆ ನಡೆದ ಚಿತ್ರದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕ ಡೀಲ್ ಮುರುಳಿ ನನು ಈ ಹಿಂದೆ ಕೆಲ ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದೆ. ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಕಡಿಮೆ ಕಲಾವಿದರನ್ನು ಇಟ್ಟುಕೊಂಡು 25 ದಿನಗಳಲ್ಲಿ ಚಿತ್ರದ ಚಿತ್ರೀಕರಣ ಮುಗಿಸಿದ್ದೇವೆ.

ಒಂದೇ ಕಾರಿನಲ್ಲಿ ಸಂಜೆ 6ರಿಂದ ಬೆಳಿಗ್ಗೆ ಆರರವರೆಗೆ ನಡೆಯುವ ಕಥೆಯಿದು ಎಂದು ಹೇಳಿದರು. ನಂತರ ನಿರ್ಮಾಪಕ ಹಾಗೂ ನಾಯಕನಟ ಪವನ್‍ಕುಮಾರ ಮಾತನಾಡಿ ಒಂದೇ ರಾತ್ರಿಯಲ್ಲಿ ನಡೆಯುವ ಜರ್ನಿ ಕಥೆಯಿದು.

ಕಳೆದ ವರ್ಷವೇ ಚಿತ್ರರೆಡಿಯಾಗಿ ಸೆನ್ಸಾರ್ ಕೂಡ ಆಗಿತ್ತು, ಆದರೆ ಕೋವಿಡ್ ಬಂದ ಕಾರಣದಿಂದ ಚಿತ್ರವನ್ನು ರಿಲೀಸ್ ಮಾಡುವುದು ತಡವಾಗಿದೆ. ಇದೇ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಹೇಳಿದರು. ನಂತರ ಚಿತ್ರದ ನಾಯಕಿಯರಾದ ರಚಿಕಾ ಹಾಗೂ ಡಯಾನಾ ತಮ್ಮ ಪಾತ್ರಗಳ ಕುರಿತಂತೆ ಮಾತನಾಡಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!