ನಿನ್ನೆ ತಡರಾತ್ರಿ ನಿಧನ ಹೊಂದಿದ ಜನಪ್ರಿಯ ಉದ್ಯಮಿ ರತನ್ ಟಾಟಾ ಒಂದು ಸಿನಿಮಾ ನಿರ್ಮಾಣ ಮಾಡಿದ್ದರು.
ಅಮಿತಾಬ್ ಬಚ್ಚನ್ ನಟಿಸಿದ್ದ ‘ಏತಬಾರ್’ ಸಿನಿಮಾಕ್ಕೆ ರತನ್ ಟಾಟಾ ನಿರ್ಮಾಪಕರಾಗಿದ್ದರು. ಆ ಸಿನಿಮಾಕ್ಕೆ ನಾಲ್ಕು ಮಂದಿ ನಿರ್ಮಾಪಕರಲ್ಲಿ ರತನ್ ಟಾಟಾ ಮುಖ್ಯ ನಿರ್ಮಾಪಕರಾಗಿದ್ದರು. ಸಿನಿಮಾಕ್ಕೆ ಜತಿನ್ ಕುಮಾರ್, ಖುಷ್ರು ಬುದ್ರಾ, ಮನ್ದೀಪ್ ಸಿಂಗ್ ಅವರು ಬಂಡವಾಳ ಹಾಕಿದ್ದರು.
‘ಏತಬಾರ್’ ಸಿನಿಮಾ 1992 ರ ಹಾಲಿವುಡ್ ಸಿನಿಮಾ ‘ಫಿಯರ್’ನಿಂದ ಸ್ಪೂರ್ತಿ ಪಡೆದು ನಿರ್ಮಿಸಲಾಗಿದ್ದ ಸಿನಿಮಾ ಆಗಿತ್ತು. 2004 ರಲ್ಲಿ ಸಿನಿಮಾ ಬಿಡುಗಡೆ ಆಗಿತ್ತು. ವಿಕ್ರಂ ಭಟ್ ಸಿನಿಮಾ ನಿರ್ದೇಶನ ಮಾಡಿದ್ದರು. ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಜೊತೆಗೆ ಜಾನ್ ಅಬ್ರಹಾಂ, ಬಿಪಾಶಾ ಬಸು, ಸುಪ್ರಿಯಾ ಪಿಳ್ಗಾಂವಕರ್ ಇದ್ದರು. ಸಿನಿಮಾ ಕ್ರೈಂ ಥ್ರಿಲ್ಲರ್ ಆಗಿತ್ತು. ಈ ಸಿನಿಮಾಕ್ಕೆ 9.50 ಕೋಟಿ ಬಜೆಟ್ ಹಾಕಲಾಗಿತ್ತು. ಆದರೆ ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ಗಳಿಸಿದ್ದು ಕೇವಲ 7.50 ಕೋಟಿ ಮಾತ್ರ. ರತನ್ ಟಾಟಾ ತಮ್ಮ ಮೊದಲ ಪ್ರಯತ್ನದಲ್ಲಿಯೇ ನಷ್ಟ ಅನುಭವಿಸಿ ಬಳಿಕ ಇನ್ಯಾವುದೇ ಸಿನಿಮಾ ನಿರ್ಮಾಣ ಮಾಡಲಿಲ್ಲ.
ಟಾಟಾ ಸಂಸ್ಥೆ ಮನೊರಂಜನಾ ಕ್ಷೇತ್ರದಲ್ಲಿ ಟಾಟಾ ಸ್ಕೈ, ಟಾಟಾ ನಿಯೋ ಒಟಿಟಿ, ಟಾಟಾ ಕಮ್ಯೂನಿಕೇಷನ್, ಟಾಟಾ ಪ್ಲೇ, ತೇಜಸ್ ನೆಟ್ವರ್ಕ್ ಮೂಲಕ ಗ್ರಾಹಕರಿಗೆ ಸೇವೆ ನೀಡುತ್ತಿದೆ. ಟಾಟಾ ಸಂಸ್ಥೆ ಉಪ್ಪು ತಯಾರಿಕೆಯಿಂದ ಹಿಡಿದು ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದೆ. ಆದರೆ ಚಿತ್ರರಂಗದಿಂದ ದೂರವೇ ಇದೆ.
ದೇಶ, ವಿದೇಶದ ಉದ್ಯಮಿಗಳು, ರಾಜಕಾರಣಿಗಳು ಚಿತ್ರರಂಗದ ಗಣ್ಯರು ರತನ್ ಟಾಟಾ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಟಾಟಾ ಗ್ರೂಪ್ ಹಾಗೂ ಟಾಟಾ ಸನ್ಸ್ನ ಮಾಜಿ ಚೇರ್ಮೆನ್ ಆಗಿದ್ದ ರತನ್ ಟಾಟಾ ಭಾರತದ ಶ್ರೇಷ್ಠ ಉದ್ಯಮಿ ಎಂದು ಹೆಸರಾಗಿದ್ದಾರೆ.
Be the first to comment