ಕಿರಿಕ್ ಪಾರ್ಟಿ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡ ಚಿತ್ರಗಳಲ್ಲಿ ನಟಿಸಲು ಸಮಯ ಇಲ್ಲ ಎಂದು ಹೇಳುವ ಮೂಲಕ ಕನ್ನಡ ಚಿತ್ರಪ್ರೇಮಿಗಳ ಕೆಂಗಣ್ಣಿಗೆ ಕಾರಣರಾಗಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಶ್ಮಿಕಾ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ” ತೆಲುಗು ಮತ್ತು ಹಿಂದಿ ಚಿತ್ರಗಳಿಗೆ ಡೇಟ್ಸ್ ಹೊಂದಿಸಿಕೊಳ್ಳಲು ಕಷ್ಟವಾಗುತ್ತಿದೆ. ಇದಲ್ಲದೇ ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಇದರ ಜೊತೆಗೆ ಕನ್ನಡ ಚಿತ್ರಗಳಲ್ಲಿ ನಟಿಸಿದರೆ ವರ್ಷದ 365 ದಿನವೂ ಸಾಕಾಗುವುದಿಲ್ಲ” ಎಂದು ಹೇಳಿದ್ದಾರೆ.
ಕನ್ನಡ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ರಶ್ಮಿಕಾ ಅವರ ಕನ್ನಡ ವಿರೋಧಿ ಧೋರಣೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ರಿಷಬ್ ಶೆಟ್ಟಿ ನಿರ್ದೇಶನದ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ರಶ್ಮಿಕಾ ಮಂದಣ್ಣ ಅವರು ಸಿನಿಮಾ ನಟನೆಯ ವೃತ್ತಿ ಜೀವನ ಆರಂಭ ಮಾಡಿದ್ದರು. ಅವರು ಈ ಚಿತ್ರದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರಿಗೆ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದ ಸಾನ್ವಿ ಪಾತ್ರದ ಮೂಲಕ ರಶ್ಮಿಕಾ ಅವರು ಜನಪ್ರಿಯತೆ ಗಳಿಸಿದ್ದರು.
‘ಕಿರಿಕ್ ಪಾರ್ಟಿ’ ಸಿನಿಮಾದ ಯಶಸ್ಸಿನ ಬಳಿಕ ರಶ್ಮಿಕಾ ಮಂದಣ್ಣ ಅವರು ತೆಲುಗು, ತಮಿಳು ಚಿತ್ರದ ಕಡೆಗೆ ಗಮನ ಹರಿಸಿದರು. ಅಲ್ಲದೇ ಯಾವುದೇ ಕನ್ನಡ ಚಿತ್ರಗಳಲ್ಲಿ ನಟಿಸಲು ಮುಂದಾಗಲಿಲ್ಲ.
ರಕ್ಷಿತ್ ಶೆಟ್ಟಿ ಜೊತೆಗೆ ಎಂಗೇಜ್ಮೆಂಟ್ ಮುರಿದು ಬಿದ್ದ ನಂತರ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಕನ್ನಡ ಚಿತ್ರಪ್ರೇಮಿಗಳಿಗೆ ಇದ್ದ ಭಾವನೆ ಬದಲಾಯಿತು. ರಕ್ಷಿತ್ ಶೆಟ್ಟಿ ಬಗ್ಗೆ ಅನುಕಂಪದ ಭಾವನೆ ತೋರಿದ ಚಿತ್ರಾಭಿಮಾನಿಗಳು ರಶ್ಮಿಕಾ ಮಂದಣ್ಣ ಬಗ್ಗೆ ಟೀಕೆಯ ಹೊಳೆಯನ್ನೇ ಹರಿಸಿದರು.
ರಶ್ಮಿಕಾ ಮಂದಣ್ಣ ಅವರು ಹಲವು ಬಾರಿ ಮಾಧ್ಯಮಗಳ ಸಂದರ್ಶನದಲ್ಲಿ ಕನ್ನಡದಲ್ಲಿ ಮಾತನಾಡದೆ ಇದ್ದದ್ದೂ ಕೂಡಾ ಕನ್ನಡ ಚಿತ್ರಪ್ರೇಮಿಗಳ ಕೆಂಗಣ್ಣಿಗೆ ಕಾರಣವಾಗಿತ್ತು.
ಈಗ ಮತ್ತೆ ರಶ್ಮಿಕಾ ಕನ್ನಡ ಚಿತ್ರಗಳಲ್ಲಿ ನಟಿಸುವ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಕೋಪಕ್ಕೆ ಕಾರಣರಾಗಿದ್ದಾರೆ.
_______
Be the first to comment