ಚಿನ್ನ ಕಳ್ಳಸಾಗಣೆ ಆರೋಪದಲ್ಲಿ ಬಂಧನವಾಗಿರುವ ನಟಿ ರನ್ಯಾ ರಾವ್ ಮತ್ತು ಇತರ ಆರೋಪಿಗಳ ಬಂಧನವನ್ನು ಅಕ್ರಮವೆಂದು ಘೋಷಿಸಿ ಅವರನ್ನು ಬಿಡುಗಡೆ ಮಾಡುವಂತೆ ಸಲ್ಲಿಸಿದ್ದ ಹೇಬಿಯಾಸ್ ಕಾರ್ಪಸ್ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ವಿಜಯ್ ಕುಮಾರ್ ಎ.ಪಾಟೀಲ್ ಅವರ ನ್ಯಾಯಪೀಠ, ರನ್ಯಾ ರಾವ್ ಅವರ ತಾಯಿ ಹೆಚ್.ಪಿ. ರೋಹಿಣಿ, ತರುಣ್ ರಾಜು ಅವರ ತಾಯಿ ರಮಾ ರಾಜು ಹಾಗೂ ಪ್ರಿಯಾಂಕಾ ಸರ್ಕಾರಿಯಾ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ವಜಾಗೊಳಿಸಿದೆ.
ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ನಟಿ ರನ್ಯಾ ರಾವ್, ತರುಣ್ ರಾಜ್ ಹಾಗೂ ಸಾಹಿಲ್ ಜೈನ್ ಅವರ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿ ಬಂಧನ ಅಕ್ರಮವಾಗಿದೆ ಎಂಬ ಆರೋಪವನ್ನು ತಳ್ಳಿ ಹಾಕಿದೆ. ಈ ಮೂಲಕ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿಗಳಿಗೆ ಯಾವುದೇ ತಾತ್ಕಾಲಿಕ ರಿಲೀಫ್ ಸಿಕ್ಕಿಲ್ಲ. ತನಿಖಾ ಸಂಸ್ಥೆಗಳು ಪ್ರಕರಣದ ವಿಚಾರಣೆಯನ್ನು ಮುಂದುವರಿಸಲಿವೆ ಎಂದು ತಿಳಿದು ಬಂದಿದೆ.
2025ರ ಮಾರ್ಚ್ 3ರಂದು ದುಬೈನಿಂದ ಬಂದ ವೇಳೆ ರನ್ಯಾ ರಾವ್ ಅವರನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 14.8 ಕೆಜಿ ಚಿನ್ನದೊಂದಿಗೆ ಬಂಧಿಸಲಾಗಿತ್ತು. ಡಿಆರ್‌ಐ ತನಿಖೆಯಲ್ಲಿ ಒಟ್ಟು 127 ಕೆಜಿ ಚಿನ್ನ ಅಕ್ರಮವಾಗಿ ಸಾಗಾಟ ಮಾಡಿರುವುದು ಪತ್ತೆಯಾಗಿದೆ. ಈ ಸಂಬಂಧ ಡಿಆರ್‌ಐ 250 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದೆ.
ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ 34 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದೆ. ಈ ಪ್ರಕರಣದಲ್ಲಿ ಹೋಟೆಲ್ ಉದ್ಯಮಿ ತರುಣ್ ಕೊಂಡರಾಜು, ಆಭರಣ ವ್ಯಾಪಾರಿಗಳಾದ ಸಾಹಿಲ್ ಮತ್ತು ಭರತ್ ಜೈನ್ ಸಹ-ಆರೋಪಿಗಳಾಗಿದ್ದಾರೆ.
—–





Be the first to comment