ಆರು ವರ್ಷಗಳ ಹಿಂದೆ ಕನ್ನಡದಲ್ಲಿ ತೆರೆಕಂಡ ರಂಗಿತರಂಗ ಸಿನಿಮಾ ಬಾಲಿವುಡ್‌ಗೆ ರಿಮೇಕ್ ಆಗುತ್ತಿದೆ. ಈಗಾಗಲೇ ‘ರಂಗಿತರಂಗ’ ಚಿತ್ರದ ಹಿಂದಿ ರಿಮೇಕ್ ಹಕ್ಕು ಮಾರಾಟ ಆಗಿದೆ.
ಹಿಂದಿಯಲ್ಲಿ ‘ಒನ್ ವೇ ಟಿಕೆಟ್’ ಮತ್ತು ‘ಬೈಸಿಕಲ್ ಬಾಯ್ಸ್’ ಚಿತ್ರಗಳನ್ನು ನಿರ್ಮಿಸಿರುವ ನಿರ್ಮಾಪಕಿ ಮತ್ತು ನಟಿ ಕೋಮಲ್ ಉನವಾನೆ ಅವರು ‘ರಂಗಿತರಂಗ’ದ ಅಧಿಕೃತ ರಿಮೇಕ್ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಸಿನಿಮಾ ಆರಂಭಿಸಲು ಚಿತ್ರ ತಂಡ ಯೋಜನೆ ರೂಪಿಸಿದೆ.
“ನಿರ್ದೇಶಕ ಲಕ್ಕಿ ಹಂಸರಾಜ್ ನನಗೆ ಕಥೆಯನ್ನು ಹೇಳಿದಾಗ, ಅದನ್ನು ತಕ್ಷಣ ಇಷ್ಟಪಟ್ಟೆ. ಇದು ಭಯಾನಕ, ಮಿಸ್ಟರಿ ಕಥೆ ಆಗಿರುವುದರಿಂದ ಟ್ರೆಂಡ್ ಚೇಂಜರ್ ಆಗಿರಲಿದೆ” ಎಂದು ಕೋಮಲ್ ಉನವಾನೆ ಹೇಳಿದ್ದಾರೆ.
ಚಿತ್ರದ ಶೂಟಿಂಗ್ ಆದಷ್ಟು ಬೇಗ ಮುಗಿಸಿ ಮುಂದಿನ ವರ್ಷದ ಅಂತ್ಯದೊಳಗೆ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಚಿತ್ರದ ಪಾತ್ರ ವರ್ಗವನ್ನು ಸದ್ಯದಲ್ಲೇ ಚಿತ್ರತಂಡ ಘೋಷಿಸಲಿದೆ.
2015ರಲ್ಲಿ ‘ರಂಗಿತರಂಗ’ ಬಿಡುಗಡೆ ಆಗಿತ್ತು. ಅನುಪ್ ಭಂಡಾರಿ ನಿರ್ದೇಶನದ ಮೊದಲ ಚಿತ್ರ ಆಗಿದ್ದ ಇಲ್ಲಿ ರಾಧಿಕಾ ನಾರಾಯಣ್, ಆವಂತಿಕಾ ಶೆಟ್ಟಿ ಜೊತೆಗೆ ಅನುಪ್ ಭಂಡಾರಿ ಸಹೋದರ ನಿರೂಪ್ ಭಂಡಾರಿ ನಾಯಕನಾಗಿ ಅಭಿನಯಿಸಿದ್ದರು.
ರಂಗಿತರಂಗ ಆರಂಭದಲ್ಲಿ ಅಷ್ಟಾಗಿ ಗಮನ ಸೆಳೆಯದೇ ಇದ್ದರೂ, ಕೆಲ ದಿನಗಳ ಬಳಿಕ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುವ ಮೂಲಕ ಸೂಪರ್ ಹಿಟ್ ಆಗಿತ್ತು. ಈ ಚಿತ್ರ ಈಗ ಹಿಂದಿಯಲ್ಲಿ ಯಾವ ರೀತಿ ಮೋಡಿ ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
Be the first to comment