ನವರಸ ನಾಯಕ ಜಗ್ಗೇಶ್ ಅಭಿನಯದ ಬಹು ನಿರೀಕ್ಷಿತ ‘ರಂಗನಾಯಕ’ ಚಿತ್ರ ಶಿವರಾತ್ರಿ ಹಬ್ಬದಂದು ನಾಳೆ ಬಿಡುಗಡೆಗೆ ಸಿದ್ಧವಾಗಿದೆ.
ಗುರುಪ್ರಸಾದ್ ನಿರ್ದೇಶನದ ಈ ಚಿತ್ರವನ್ನು ಎ ಆರ್ ವಿಕ್ಯಾತ್ ತಮ್ಮ ವಿಕ್ಯಾತ್ ಚಿತ್ರ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ. ನವರಸ ನಾಯಕ ಜಗ್ಗೇಶ್ ಅವರಿಗೆ ಜೋಡಿಯಾಗಿ ರಚಿತಾ ಮಹಾಲಕ್ಷ್ಮಿ ಅಭಿನಯಿಸಿದ್ದಾರೆ.
ಗುರುಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನಲ್ಲಿ ಮೂಡಿ ಬಂದಿದ್ದ ‘ಮಠ’, ‘ಎದ್ದೇಳು ಮಂಜುನಾಥ’ ಸಿನಿಮಾಗಳು ದಾಖಲೆ ಬರೆದಿದ್ದವು. 15 ವರ್ಷಗಳ ಬಳಿಕ ಮತ್ತೊಮ್ಮೆ ಕಮಾಲ್ ಮಾಡಲು ಈ ಜೋಡಿ ಸಜ್ಜಾಗಿದೆ.
ಉಮೇಶ್ ಆರ್ ಬಿ ಸಂಕಲನವಿದ್ದು, ಸಾಮ್ರಾಟ್ ಅಶೋಕ್ ಗೌತಮ್ ಛಾಯಾಗ್ರಹಣವಿದೆ. ಅನುಪ್ ಸೀಳಿನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಈ ಸಿನಿಮಾದಲ್ಲಿ ‘ಬಿಗ್ ಬಾಸ್’ ಖ್ಯಾತಿಯ ನಟಿ ಚೈತ್ರಾ ಕೊಟ್ಟೂರು ಅವರು ಜಗ್ಗೇಶ್ ಅವರ ತಾಯಿ ಪಾತ್ರ ಮಾಡಿದ್ದಾರೆ.
“ಈ ಸಿನಿಮಾದಲ್ಲಿ ಜಗ್ಗೇಶ್ ಅವರ ತಾಯಿ ಪಾತ್ರಕ್ಕಾಗಿ ಒಬ್ಬ ನಟಿ ನಮಗೆ ಬೇಕಾಗಿದ್ದರು. ಅದೊಂಥರ ವಿಭಿನ್ನವಾದ ಪಾತ್ರ. ಯಾರಾದರೂ ವಯಸ್ಸಾದವರನ್ನೇ ಹುಡುಕೋಣ ಎಂದುಕೊಂಡೆವು. ಆದರೆ ಅವರು ನಮ್ಮ ಕಾಮಿಡಿಗೆ ಹೊಂದಿಕೊಳ್ಳುತ್ತಾರೋ ಇಲ್ಲವೋ ಎಂಬ ಅನುಮಾನ ಬಂತು. ಕೊನೆಗೆ ಯುವತಿಯನ್ನೇ ತಾಯಿ ಪಾತ್ರಕ್ಕೆ ಸೆಲೆಕ್ಟ್ ಮಾಡುವುದು ಎಂದು ತೀರ್ಮಾನವಾಯ್ತು. ಆ ಪಾತ್ರಕ್ಕೆ ನ್ಯಾಯ ಒದಗಿಸುವಂತಹ ನಟಿ ಬೇಕು ಎಂದು ಹುಡುಕಲು ಹೊರಟಾಗ ನಮಗೆ ಚೈತ್ರಾ ಕೊಟ್ಟೂರು ಸಿಕ್ಕರು” ಎಂದು ನಿರ್ದೇಶಕ ಗುರುಪ್ರಸಾದ್ ಹೇಳಿದ್ದಾರೆ.
“ಇದು ಸಂಪೂರ್ಣ ಎಂಟರ್ಟೇನಿಂಗ್ ಸಿನಿಮಾ. ಥಿಯೇಟರ್ಗೆ ಬರುವ ಪ್ರೇಕ್ಷಕ ಬಾಯಿತುಂಬಾ ನಕ್ಕುಬಿಟ್ಟರೆ ನಮಗೆ ಖುಷಿಯಾಗುತ್ತದೆ. ಈ ಸಿನಿಮಾ ಸಂಪೂರ್ಣವಾಗಿ ಗುರುಪ್ರಸಾದ್ ಅವರ ಪ್ರಸಾದ ಎಂದೇ ಹೇಳಬಹುದು. ‘ಮಠ’, ‘ಎದ್ದೇಳು ಮಂಜುನಾಥ’ ಸಿನಿಮಾಗಳಂತೆ ಇದು ಕೂಡ ಯಶಸ್ಸು ಕಾಣಲಿದೆ” ಎಂದು ಜಗ್ಗೇಶ್ ಹೇಳಿದ್ದಾರೆ.
—–
Be the first to comment