‘ರಂಗಾದ ಹುಡುಗರು’ ಆಡಿಯೋ ಬಿಡುಗಡೆ

ರಂಗಿನ ಲೋಕದಲ್ಲಿ ಎಲ್ಲವೂ ರಂಗೇ. ಆದರೆ ಹೊಸಬರ ಚಿತ್ರವೊಂದರಲ್ಲಿ   ಯುವಕರು ಯಾಕೆ ರಂಗಾಗಿದ್ದಾರೆ ಎನ್ನುವುದನ್ನು ತೋರಿಸುವಂಥ ಚಿತ್ರವೇ ರಂಗಾದ ಹುಡುಗರು. ಕತೆ, ಚಿತ್ರಕತೆ ಬರೆದು ಯುವ ನಿರ್ದೇಶಕ ತೇಜೇಶ್ ಕುಮಾರ್  ಡೈರೆಕ್ಟ್ ಮಾಡಿರುವ ಚಿತ್ರ ಇದು. ಈ ಸಿನಿಮಾದ ಧ್ವನಿ ಸಾಂದ್ರಿಕೆ ಬಿಡುಗಡೆ ಕಾರ್ಯಕ್ರಮ ನಗರದ ರೇಣುಕಾಂಬ ಸ್ಟುಡಿಯೋದಲ್ಲಿ ನೆರವೇರಿತು.

ಹಲವು ಸಂಗೀತ ನಿರ್ದೇಶಕರ ಕೈಕೆಳಗೆ ಕೆಲಸ ಮಾಡಿ ಗುರುತಿಸಿಕೊಂಡಿರುವ ಪಳನಿಯವರುವ ಪ್ರಸ್ತುತ ಸೇನಾಪತಿ ಎನ್ನುವ  ಹೆಸರಲ್ಲಿ‌ ಸಂಗೀತ ನಿರ್ದೇಶಕರಾಗಿದ್ದಾರೆ. ”ನನಗೆ ಹಲವಾರು ಗುರುಗಳು. ಲಕ್ಷ್ಮೀಕಾಂತ್ ಪ್ಯಾರೇಲಾಲ್ ಅವರಿಂದ ಹಿಡಿದು ಗುರುಕಿರಣ್ ಅವರ ತನಕ ಜೊತೆಗೆ ಕುಳಿತು ಕೆಲಸ ಮಾಡುವ ಅವಕಾಶ ದೊರಕಿದೆ. ಅದರಲ್ಲಿಯೂ ಗುರುಗಳಾದ ಹಂಸಲೇಖ ಅವರ ಪ್ರಭಾವ ನನ್ನ ಮೇಲೆ ದಟ್ಟವಾಗಿದೆ. ನಾನು ಅವರ ಮೆಲೊಡಿ ಗೀತೆಗಳಿಗೆ  ಸೋತು ಹೋದವನು. ಇಲ್ಲಿ ಕೂಡ ‘ಏನಾಗಿದೆಯೋ..’ ಎನ್ನುವ ಮೆಲೊಡಿ ಹಾಡು ಇದೆ..” ಎಂದರು ಸೇನಾಪತಿ.

ಚಿತ್ರದಲ್ಲಿ ಮೂರು ಹಾಡುಗಳಿವೆ. ಅವುಗಳಲ್ಲಿ ಒಂದನ್ನು ಮೂವರು ಸಂ ಗೀತ ನಿರ್ದೇಶಕರೇ ಸೇರಿ ಹಾಡಿದ್ದಾರೆ. ಗುರುಕಿರಣ್, ಸಾಧುಕೋಕಿಲ ಮತ್ತು ಇಂದ್ರ ಸೇರಿ ಹಾಡಿದಂಥ ಗೀತೆ ಅದು. ಸಮಾರಂಭದಲ್ಲಿ ಉಪಸ್ಥಿತರಿದ್ದ ಗುರುಕಿರಣ್ ಅಲ್ಲಿ ಪ್ರದರ್ಶನಗೊಂಡ ಹಾಡುಗಳನ್ನು ನೋಡಿ, ತುಂಬ ಚೆನ್ನಾಗಿ ಮೂಡಿ ಬಂದಿದೆ ಎಂದರು. ಆದರೆ ಸಿ.ಡಿಯ ಕವರ್ ಮೇಲೆ ಸಾಹಿತಿ ದಿಲ್ಸೇ ದಿಲೀಪ್ ಹೆಸರು ಹಾಕದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

ಹಂಸಲೇಖ ಮತ್ತು ರವಿಚಂದ್ರನ್ ಅವರ ಜೊತೆಗೆ ಅಭಿಮಾನಿಯಾಗಿ, ಅನುಯಾಯಿಯಾಗಿ ಗುರುತಿಸಿಕೊಂಡವರು ದಿಲ್ಸೇ ದಿಲೀಪ್. ಸಾಹಿತ್ಯ ಮತ್ತು ನಿರ್ದೇಶನ ವಿಭಾಗದಲ್ಲಿ ಪರಿಣತಿ ಹೊಂದಿರುವ ಅವರು ಚಿತ್ರದ ಮೂರು ವಿಭಿನ್ನ ಹಾಡುಗಳಿಗೆ ಅಕ್ಷರ ನೀಡಿದ್ದಾರೆ. ಸಮಾರಂಭವನ್ನು ನಿರೂಪಿಸಿದ ಅವರು, ಗುರುಕಿರಣ್ ಎಷ್ಟು ಸರಳವಾಗಿ ‌ಬಂದು ಹಾಡಿದರು ಮತ್ತು ವಿಶೇಷ ಅತಿಥಿಯಾಗಿ ಆಗಮಿಸಿದಂಥ ನಿರ್ದೇಶಕ ಎಸ್ ಮಹೇಂದರ್ ಅವರು ಗ್ರಾಮೀಣ ಸೊಗಡಿನ ಹಾಡುಗಳಿಗೆ ಹೇಗೆಲ್ಲ ಸ್ಪೂರ್ತಿಯಾದರು ಎಂದು ವಿವರಿಸಿದರು.ಸಿ.ಡಿ ಬಿಡುಗಡೆಗೊಳಿಸಿ ಚಿತ್ರದ ಸಂಗೀತದೊಂದಿಗೆ ಹಾಡಿನ‌ ಸಾಹಿತ್ಯವನ್ನು ಮೆಚ್ಚಿದ ಎಸ್ ಮಹೇಂದರ್, ವಿಶೇಷವಾಗಿ “ಮಣ್ಣಾಗೋ ಮೊದಲು ಮಣ್ಣಿಗಿಳಿದು ಆಡು ಕಬಡಿ..” ಎಂಬ ಸಾಲುಗಳನ್ನು ಉಲ್ಲೇಖಿಸಿ ಪ್ರಶಂಸಿಸಿದರು. ಮುಖ್ಯವಾಗಿ ಹಾಡುಗಳಲ್ಲಿ ನಟಿಸಿರುವ.ಯಾರೂ ಹೊಸಬರಂತೆ ಕಾಣಿಸಿಲ್ಲ. ಕನ್ನಡ ಚಿತ್ರರಂಗದ ತೇರನ್ನು ಎಳೆದು ಮುನ್ನುಗ್ಗುವಲ್ಲಿ ಆಯಾ ಕಾಲಕ್ಕೆ ಚಿತ್ರೋದ್ಯಮದೊಂದಿಗೆ ಹೊಸ ಕಲಾವಿದರ ಕೊಡುಗೆ ಇದ್ದೇ ಇದೆ. ತಮಗೂ ಅದರಲ್ಲಿ ಬಹುಪಾಲು ದೊರೆಯುವಂತಾಗಲಿ ಎಂದು ನವನಟರಿಗೆ ಅವರು ಹಾರೈಸಿದರು.

ಕರಾವಳಿಯ ಸುಂದರಿ ಆ ಎರಡು ವರ್ಷಗಳು, ಜಗತ್ ಕಿಲಾಡಿ ಚಿತ್ರಗಳಲ್ಲಿ ನಾಯಕಿಯಾಗಿ ಗಮನ ಸೆಳೆದಂಥ ಕರಾವಳಿಯ ಸುಂದರಿ ಅಮಿತಾ ಕುಲಾಲ್ ಈ ಚಿತ್ರದ ನಾಯಕಿಯರಲ್ಲೊಬ್ಬರು.‌ ಅವರೊಂದಿಗೆ ನವ  ನಟರಾದ ಪ್ರಖ್ಯಾತ್ ಮತ್ತು ಸಾಗರ್ ಸೇರಿದಂತೆ ಛಾಯಾಗ್ರಾಹಕ ಸಿನಿಟೆಕ್ ಸೂರಿ , ನೃತ್ಯನಿರ್ದೇಶಕ ಕಲೈ ಮಾಸ್ಟರ್, ಹರೀಶ್ ನಿಂಜೂರು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!