Ranchi Movie Review : ನೈಜ ಅಪರಾಧ ಕಥೆ ‘ ರಾಂಚಿ ‘

ಚಿತ್ರ: ರಾಂಚಿ

ನಿರ್ದೇಶನ: ಶಶಿಕಾಂತ್ ಗಟ್ಟಿ
ನಿರ್ಮಾಣ: ರುದ್ರಾನಂದ್ ಮತ್ತು ಅರುಣ್ ಕುಮಾರ್, ಶಶಿಕಾಂತ್ ಮೋಶನ್ ಪಿಚ್ಚರ್ಸ್
ತಾರಾಗಣ: ಪ್ರಭು ಮುಂಡ್ಕೂರು, ಸಿಂಧೂ ಮೂರ್ತಿ, ಸಂಜನಾ ಪ್ರಕಾಶ್ ಇತರರು.

ರೇಟಿಂಗ್: 3.5/ 5

ನೈಜ ಘಟನೆ ಆಧಾರಿತ ಸಂಘಟಿತ ಅಪರಾಧ ಪ್ರಕರಣದ ಸಸ್ಪೆನ್ಸ್ ಥ್ರಿಲ್ಲರ್ ಕಥೆಯೇ ರಾಂಚಿ ಚಿತ್ರ.

ನಿಜ ಜೀವನದಲ್ಲಿ ನಡೆದ ಘಟನೆಯನ್ನು ನಿರ್ದೇಶಕರು ಈ ಚಿತ್ರದ ಮೂಲಕ ತೆರೆಯ ಮೇಲೆ ತರುವ ಯತ್ನವನ್ನು ಮಾಡಿದ್ದಾರೆ.

ರೈಲ್ವೇ ಇಲಾಖೆಯ ಡಾಕ್ಯುಮೆಂಟರಿ ಕೊಡಿಸುವ ಆಮಿಷವೊಡ್ಡಿ ದಕ್ಷಿಣ ಭಾರತದ ಅನೇಕ ಸಿನಿಮಾ ನಿರ್ದೇಶಕರನ್ನು ಜಾರ್ಖಂಡ್‌ನ‌ “ರಾಂಚಿ’ಗೆ ಉಪಾಯವಾಗಿ ಕರೆಸಿಕೊಳ್ಳುತ್ತಿದ್ದ ಡಕಾಯಿತರ ತಂಡ, ಅಲ್ಲಿ ಅವರಿಂದ ಲಕ್ಷಾಂತರ ರೂಪಾಯಿ ಸುಲಿಗೆ ಮಾಡುತ್ತಿದ್ದ ಪ್ರಕರಣ ಕೆಲ ವರ್ಷಗಳ ಹಿಂದೆ ಸಾಕಷ್ಟು ಸುದ್ದಿಯಾಗಿತ್ತು. ಪೊಲೀಸ್‌ ಇಲಾಖೆಗೆ ತಲೆ ನೋವಾಗಿದ್ದ ಈ ಡಕಾಯಿತರ ಗ್ಯಾಂಗ್‌ ಅನ್ನು ಹೆಡೆಮುರಿ ಕಟ್ಟಲು ಸಾಕಷ್ಟು ವರ್ಷಗಳೇ ಬೇಕಾಯಿತು. ಇದೇ ನೈಜ ಘಟನೆಯನ್ನು ಆಧರಿಸಿ ಈ ವಾರ ತೆರೆಗೆ ಬಂದಿರುವ ಸಿನಿಮಾ “ರಾಂಚಿ’.

ಡಾಕ್ಯುಮೆಂಟರಿ ಮಾಡಲು ಹೊರಡುವ ನಿರ್ದೇಶಕರಿಗೆ, ಅಪರಿಚಿತರು ರಾಂಚಿಯಿಂದ ಕರೆ ಮಾಡಿ ದಾರಿ ತಪ್ಪಿಸಲು ಹೋಗುವಾಗ ಈ ಘಟನೆಯ ಹಿಂದಿನ ಅಪರಾಧ ಕೃತ್ಯ ಬೇಧಿಸುವ ಪೊಲೀಸ್ ಆಯಾಮಗಳು ಈ ಚಿತ್ರದಲ್ಲಿವೆ. ಅಪರಾಧ ಜಗತ್ತಿನ ಹಿಂದಿನ ಶಕ್ತಿಗಳ ಅನಾವರಣದ ವೇಳೆ ಪ್ರೇಕ್ಷಕರಿಗೆ ಸಂಘಟಿತ ಅಪರಾಧ ಗುಂಪುಗಳ ಕೃತ್ಯಗಳು ಬಯಲಿಗೆ ಬರುತ್ತವೆ.

ಚಿತ್ರದಲ್ಲಿ ಸಾಕಷ್ಟು ಟ್ವಿಸ್ಟ್ ಹಾಗೂ ಟರ್ನ್ ಗಳಿವೆ. ಇದರಿಂದ ಕೊನೆಯವರೆಗೂ ಚಿತ್ರ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಚಿತ್ರಕಥೆ ಬರೆದಿರುವ ನಿರ್ದೇಶಕರು ಹಾಗೂ ಪವನ್ ಭಟ್ ಅವರು ಪ್ರೇಕ್ಷಕರಿಗೆ ನಿರಾಸೆ ಆಗದಂತೆ ನೋಡಿಕೊಂಡಿದ್ದಾರೆ. ಚಿತ್ರದಲ್ಲಿ ನಟಿಸಿರುವ ಕಲಾವಿದರು ಕೂಡ ಉತ್ತಮ ನಟನೆ ತೋರುವ ಮೂಲಕ ಪ್ರೇಕ್ಷಕರಿಗೆ ಅಪರಾಧ ಜಗತ್ತಿನ ಹೊಸ ಅನುಭವಕ್ಕೆ ಕಾರಣವಾಗುತ್ತಾರೆ.

ನಾಯಕ ನಟ ಪ್ರಭು ಮುಂಡ್ಕೂರ್‌ ತಮ್ಮ ಅಭಿನಯದಲ್ಲಿ ಫ‌ುಲ್‌ ಮಾಕ್ಸ್‌ ಪಡೆದುಕೊಳ್ಳುತ್ತಾರೆ. ನಾಯಕಿ ದಿವ್ಯಾ ಉರುಡುಗ ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಉಳಿದಂತೆ ಸಿನಿಮಾದಲ್ಲಿ ಬರುವ ಬಹುತೇಕ ಕಲಾವಿದರು ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ಸಂಘಟಿತ ಅಪರಾಧ ಜಗತ್ತಿನ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ರಾಂಚಿ ಚಿತ್ರ ಗಮನ ಸೆಳೆಯುತ್ತದೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!