ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಚಿತ್ರರಂಗಕ್ಕೆ ಮರಳಲು ಸಿದ್ಧತೆ ನಡೆಸಿದ್ದಾರೆ.
ಈ ಬಗ್ಗೆ ರಮ್ಯಾ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ” ನಟಿಸಲು ಸಾಕಷ್ಟು ಅವಕಾಶಗಳು ಬರುತ್ತಲೇ ಇವೆ. ಕೆಲವು ಚಿತ್ರಕತೆಗಳನ್ನು ಓದುತ್ತಿದ್ದೇನೆ. ಮುಂದಿನ ಸಿನಿಮಾದ ಬಗ್ಗೆ ಮಾರ್ಚ್‌ನಲ್ಲಿ ಮಾಧ್ಯಮಗಳೊಟ್ಟಿಗೆ ಮಾಹಿತಿ ಹಂಚಿಕೊಳ್ಳುತ್ತೇನೆ” ಎಂದು ರಮ್ಯಾ ಹೇಳಿದ್ದಾರೆ.
“ಶಸ್ತ್ರಚಿಕಿತ್ಸೆಯ ಬಳಿಕ ನಾನು ದೇಹ ತೂಕ ಹೆಚ್ಚಿಸಿಕೊಂಡಿದ್ದೇನೆ. ಅದನ್ನು ಕಡಿಮೆ ಮಾಡಬೇಕಿದೆ. ನಟನೆಗೆ ಬೇಕಾದ ದೇಹ ಸ್ಥಿತಿಯನ್ನು ಮರಳಿ ಪಡೆದುಕೊಳ್ಳಲು ಸಿದ್ಧತೆ ಮಾಡುತ್ತಿದ್ದೇನೆ” ಎಂದು ರಮ್ಯಾ ಸಿನಿಮಾ ಕಮ್ ಬ್ಯಾಕ್ ಬಗ್ಗೆ ಮಾತನಾಡಿದ್ದಾರೆ.
ಪುನೀತ್ ರಾಜ್‌ಕುಮಾರ್ ಹೀರೋ ಆಗಿದ್ದ ‘ಅಭಿ’ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ರಮ್ಯಾ ಒಂದೂವರೆ ದಶಕ ಚಿತ್ರರಂಗದಲ್ಲಿ ಸಕ್ರಿಯ ನಟಿಯಾಗಿದ್ದರು. ಕನ್ನಡ ಅಲ್ಲದೇ ತೆಲುಗು, ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದರು.
2012 ರಲ್ಲಿ ರಾಜಕೀಯ ಪ್ರವೇಶಿಸಿದ ಬಳಿಕ ರಮ್ಯಾ ಚಿತ್ರರಂಗದಿಂದ ದೂರ ಸರಿದರು. 2012 ರಲ್ಲಿ 4 ಸಿನಿಮಾ, 2014 ರಲ್ಲಿ ಒಂದು ಹಾಗೂ 2016 ರಲ್ಲಿ ಒಂದು ಸಿನಿಮಾದಲ್ಲಿ ಅವರು ನಟಿಸಿದರು.
ರಮ್ಯಾ ಅವರಿಗೆ ಈಗಲೂ ಅಭಿಮಾನಿಗಳಿದ್ದಾರೆ. ಹಲವು ನಿರ್ಮಾಪಕರು ಅವರನ್ನು ಕನ್ನಡ ಚಿತ್ರರಂಗಕ್ಕೆ ಮತ್ತೆ ಸೆಳೆಯಲು ಯತ್ನಿಸುತ್ತಿದ್ದಾರೆ. ಈ ಯತ್ನದಲ್ಲಿ ಯಾರು ಯಶಸ್ವಿಯಾಗುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
__
Be the first to comment