ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಸಿನಿಮಾ ಈಸ್ಟ್ಮನ್ ಕಲರಲ್ಲಿದ್ದಂಥ ಚಿತ್ರ. ಅದನ್ನು ಫುಲ್ ಕಲರ್ ಮಾಡಿ ಡಿಜಿಟಲ್ನಲ್ಲಿ ಬಿಡುಗಡೆಗೊಳಿಸುವ ತನಕ ಆ ಚಿತ್ರದ ಬಗ್ಗೆ ಸಾಕಷ್ಟು ಪ್ರಯೋಗಗಳು ನಡೆದು ಹೋಗಿವೆ. ಆದರೆ ಇದೀಗ ಆ ಚಿತ್ರದ ನಾಯಕನ ಅಪ್ಡೇಟೆಡ್ ವರ್ಶನ್ ತೆರೆಗೆ ತರುವುದಾಗಿ ಮುಂದೆ ಬಂದಿದ್ದಾರೆ ನಿರ್ದೇಶಕ ತೇಜ್.
ದಶಕದಿಂದ ಕನ್ನಡ ಚಿತ್ರರಂಗದಲ್ಲಿ ಕಲಾವಿದನಾಗಿ ಗುರುತಿಸಿಕೊಂಡಿರುವ ತೇಜ್ ಅವರ ‘ರಿವೈಂಡ್’ ಚಿತ್ರ ಇನ್ನೇನು ತೆರೆಗೆ ಬರಲು ಸಿದ್ಧವಾಗಿದೆ ಎನ್ನುವ ಹಂತದಲ್ಲಿ ತಮ್ಮ ನಿರ್ದೇಶನದ ‘ರಾಮಾಚಾರಿ 2.0’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಸುದ್ದಿಯಾಗಿದ್ದಾರೆ ತೇಜ್.
ಚಿತ್ರದ ನಾಯಕ ರಾಮಾಚಾರಿಗೆ ಮತ್ತು ಪುಟ್ಟಣ್ಣನ ನಾಗರ ಹಾವು ಚಿತ್ರದ ರಾಮಾಚಾರಿಯ ನಡುವೆ ಒಂದಷ್ಟು ಹೋಲಿಕೆಗಳಿವೆ. ಅದು ಹೆಸರಿನ ಹೋಲಿಕೆ ಮಾತ್ರವಲ್ಲ, ಇಲ್ಲಿ ಕೂಡ ನಾಯಕ ಮುಂಗೋಪಿ, ಜತೆಗೆ ಗುರು ಭಕ್ತಿಯ ವಿಚಾರವೂ ಹೋಲುತ್ತದೆ. ಅಕಾಡೆಮಿಕ್ ವಿಚಾರಗಳನ್ನು ಹೊರತು ಪಡಿಸಿದರೆ ಈ ಹುಡುಗ ತುಂಬ ಬುದ್ಧಿವಂತ ಕೂಡ ಆಗಿರುತ್ತಾನೆ. ಈ ಕಾಲಘಟ್ಟದ ರಾಮಾಚಾರಿ ಆಗಿರುವ ಕಾರಣ, ಹಳೆಯ ರಾಮಾಚಾರಿಯ ಅಪ್ಡೇಟೆಡ್ ವರ್ಶನ್ ಇವನು ಎನ್ನುವುದನ್ನು ಶೀರ್ಷಿಕೆಯ ಮೂಲಕವೇ ಹೇಳಿರುವುದಾಗಿ ನಿರ್ದೇಶಕ ಮತ್ತು ನಾಯಕರಾಗಿರುವ ತೇಜ್ ತಿಳಿಸಿದರು.
ಕಪ್ಪು ಬಿಳುಪು ಬಣ್ಣದಲ್ಲಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ನಾಯಕ ತೇಜ್ ನ ಫಸ್ಟ್ ಲುಕ್ ಫೊಟೋ ತೆಗೆದಿರುವ ಖ್ಯಾತ ಛಾಯಾಗ್ರಾಹಕ ಪ್ರವೀಣ್ ನಾಯಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ‘ಓಂ’ ಚಿತ್ರಕ್ಕೆ ಶಿವಣ್ಣನ ಫಸ್ಟ್ ಲುಕ್ ಫೊಟೋ ಶೂಟ್ ಮಾಡಿದವರು ಕೂಡ ಪ್ರವೀಣ್ ನಾಯಕ್ ಅವರೇ ಆಗಿದ್ದು, ಅಲ್ಲದೆ ತಮ್ಮನ್ನು ಚಿತ್ರರಂಗಕ್ಕೆ ಪರಿಚಯಿಸಿದವರು ಕೂಡ ಅವರೇ. ಹಾಗಾಗಿ ಅವರಿಂದಲೇ ತಮ್ಮ ಚಿತ್ರದ ಫಸ್ಟ್ ಲುಕ್ ಫೊಟೋ ಶೂಟ್ ನಡೆಸಲಾಯಿತು ಎಂದು ತೇಜ್ ತಿಳಿಸಿದರು.ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನಟ ನಿರ್ದೇಶಕ ಸಂದೀಪ್ ಮಲಾನಿಯವರು ಕೂಡ ಪ್ರವೀಣ್ ನಾಯಕ್ ಅವರ ಛಾಯಾಗ್ರಹಣವನ್ನು ಅಭಿನಂದಿಸುವ ಜತೆಗೆ ತುಳು ಚಿತ್ರರಂಗದಲ್ಲಿದ್ದ ತಮ್ಮನ್ನು ಕನ್ನಡಕ್ಕೆ ಪರಿಚಯಿಸಿದವರು ಅವರೇ ಎನ್ನುವ ಮಾಹಿತಿ ನೀಡಿದರು. ರಾಮಾಚಾರಿ 2.0 ಚಿತ್ರದಲ್ಲಿ ಕೂಡ ತಾವು ಒಂದು ಪಾತ್ರ ನಿರ್ವಹಿಸಿದ್ದು, ಅದರ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ನೀಡುವಂತಿಲ್ಲ ಎಂದರು.
ಮೇಘ ಕ್ರಿಯೇಶನ್ಸ್ ಸಹಯೋಗದೊಂದಿಗೆ ಪನೊರಾಮಿಕ್ ಸ್ಟುಡಿಯೋ ಮೂಲಕ ತೆರೆಗೆ ಬರಲಿರುವ ಈ ಚಿತ್ರದ ಫಸ್ಟ್ ಲುಕ್ ಬಗ್ಗೆ ಈಗಾಗಲೇ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ.
Pingback: sex stores