ಉತ್ತರ ಕರ್ನಾಟಕದ ಪ್ರತಿಭೆ ರೋಹಿತ್ ನಟನೆಯ ರಕ್ತಾಕ್ಷ ಚಿತ್ರ ಜುಲೈ 26ರಂದು ತೆರೆಗೆ ಬರಲಿದೆ.
ರೋಹಿತ್ ಅವರು ಚಿತ್ರದಲ್ಲಿ ನಾಯಕನಾಗಿ ನಟಿಸುವ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಕೂಡ ಹೊತ್ತಿದ್ದಾರೆ. ಇದು ಆಕ್ಷನ್ ಥ್ರಿಲ್ಲರ್ ಕಥೆ ಹೊಂದಿರುವ ಸಿನಿಮಾ ಆಗಿದೆ. ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ರಕ್ತಾಕ್ಷ ವಾಸುದೇವ ಎಸ್ಎನ್ ಇವರ ಚೊಚ್ಚಲ ನಿರ್ದೇಶನದ ಸಿನಿಮಾವಾಗಿದೆ.
ಚಿತ್ರದಲ್ಲಿ ರೋಹಿತ್ ಹಾಗೂ ಪ್ರಮೋದ್ ಶೆಟ್ಟಿ ನಡುವಿನ ಆಕ್ಷನ್ ಸನ್ನಿವೇಶ ಹೈಲೈಟ್ ಆಗಿದೆ. ನಟ ವಸಿಷ್ಠ ಸಿಂಹ ಅವರು ಹಾಡಿರುವ ಟೈಟಲ್ ಟ್ರ್ಯಾಕ್ ಬಿಡುಗಡೆಗೊಂಡಿದ್ದು ಸಾಕಷ್ಟು ಮೆಚ್ಚುಗೆ ಬೆಳೆದಿದೆ.
ಮೂಲತಃ ಉತ್ತರ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯ ಮುದ್ಗಲ್ ಎಂಬ ಪುಟ್ಟ ಪಟ್ಟಣದ ರೋಹಿತ್ ಮಾಡಲಿಂಗ್ ಜತೆಗೆ ಎರಡು ವರ್ಷಗಳ ರಂಗಭೂಮಿ ಅನುಭವ ಪಡೆದಿದ್ದಾರೆ. ಇದೀಗ ರಕ್ತಾಕ್ಷ ಸಿನಿಮಾ ಮೂಲಕ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.
ರೂಪಾ ರಾಯಪ್ಪ, ಅರ್ಚನಾ ಕೊಟ್ಟಿಗೆ, ಪ್ರಮೋದ್ ಶೆಟ್ಟಿ, ರಚನಾ ದಶರತ್, ಗುರುದೇವ್ ನಾಗರಾಜ, ವಿಲಾಸ್ ಕುಲಕರ್ಣಿ, ಶಿವಮೊಗ್ಗ ರಾಮಣ್ಣ ಸೇರಿದಂತೆ ಹಲವರು ತಾರಾಬಗಳದಲ್ಲಿದ್ದಾರೆ. ಧೀರೇಂದ್ರ ಡಾಸ್ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಕಲಾವಿದರಿದ್ದರೂ ಹೀರೋಗಳಿಲ್ಲ. ಈ ಚಿತ್ರದ ಮೂಲಕ ರೋಹಿತ್ ಹೀರೋಗಳ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
—-

Be the first to comment