ರಕ್ಷಿತ್ ಶೆಟ್ಟಿ “ಮಿಥ್ಯ” ಹೆಸರಿನ ಹೊಸ ಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಈ ಚಿತ್ರದ ಮೂಲಕ ಸುಮಂತ್ ಭಟ್ ಸ್ವತಂತ್ರ ನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ. ಸಿನಿಮಾದ ಮೂಲಕ 11 ವರ್ಷದ ಬಾಲಕನ ನೋವು ಮತ್ತು ವಿಮೋಚನೆಯ ಕಥೆಯನ್ನು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ.
ತಂದೆ-ತಾಯಿಯ ನಿಧನದ ನಂತರ ಅವರ ನೆನಪುಗಳಿಂದ ಹೊರಬರಲಾರದ ಪುಟ್ಟ ಬಾಲಕನೊಬ್ಬ ಹೊಸ ಪ್ರಪಂಚವನ್ನು ಹುಡುಕಿಕೊಂಡು ಹೊರಡುತ್ತಾನೆ. ಹಳೆಯ ಸಂಬಂಧಗಳಲ್ಲಿ ಹೊಸತನ ಕಾಣುವ ಹಾಗೂ ಹೊಸ ಸ್ನೇಹಿತರಲ್ಲಿ ಹಳೆಯ ಗೆಳೆತನ ಹುಡುಕುವ ಪಯಣವೇ ‘ಮಿಥ್ಯ’ ಆಗಿದೆ.
ಮೂಲತಃ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಸುಮಂತ್ ಭಟ್ ಈ ಮುನ್ನ ಪರಂವಃ ಸ್ಟುಡಿಯೋಸ್ ನಿರ್ಮಾಣದ ‘ಏಕಂ’ ಎಂಬ ವೆಬ್ಸೀರೀಸ್ನ ನಾಲ್ಕು ಕಂತುಗಳನ್ನು ಬರೆದು ನಿರ್ದೇಶಿಸಿದ್ದಾರೆ. ಈಗ ಅವರು ಸ್ವತಂತ್ರ ನಿರ್ದೇಶಕರಾಗಿ ‘ಮಿಥ್ಯ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಈ ಹಿಂದೆ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು’ ಮತ್ತು ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬಾಲನಟ ಆತಿಶ್ ಶೆಟ್ಟಿ ಇಲ್ಲಿ ಮಿಥುನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಕಾಶ್ ತುಮ್ಮಿನಾಡು, ರೂಪಾ ವರ್ಕಾಡಿ ಮುಂತಾದವರು ನಟಿಸುತ್ತಿದ್ದಾರೆ.
‘ಮಿಥ್ಯ’ ಚಿತ್ರಕ್ಕೆ ಉದಿತ್ ಖುರಾನ ಛಾಯಾಗ್ರಹಣ, ಮಿಥುನ್ ಮುಕುಂದನ್ ಅವರ ಸಂಗೀತವಿದೆ. ಭುವನೇಶ್ ಮಣಿವಣ್ಣನ್ ಸಂಕಲನ, ಶ್ರೇಯಾಂಕ್ ನಂಜಪ್ಪ ಸೌಂಡ್ ಡಿಸೈನರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ.
__
Be the first to comment