ಡೈರೆಕ್ಟರ್ ಸಚಿನ್ ಅಂದ್ರೆ ಹೆಚ್ಚಿನವರಿಗೆ ಗೊತ್ತಾಗ್ಲಿಕ್ಕಿಲ್ಲ. ಅದರೆ, ‘ಅವನೇ ಶ್ರೀಮನ್ನಾರಯಣ’ ಚಿತ್ರದ ನಿರ್ದೇಶಕ ಎಂದರೆ, ‘ಹೋ.. ಅವ್ರಾ.. ಗೊತ್ತು ಬಿಡಿ’ ಅನ್ನುತ್ತಾರೆ. ಅಷ್ಟರ ಮಟ್ಟಿಗೆ ‘ಏ.ಎಸ್.ಎನ್’ ಮೂಲಕ ಸಚಿನ್ ಸೆಂಚುರಿ ಬಾರಿಸಿದ್ರು. ನಿರ್ಮಾಪಕ ಪುಷ್ಕರ್ ಚಿತ್ರಕ್ಕೆ ಮಾಡಿದ ಪಬ್ಲಿಸಿಟಿ ಆ ಮಟ್ಟಕ್ಕಿತ್ತು. ಚಿತ್ರತಂಡ ಚಿತ್ರ ‘ಗೆದ್ದಿದೆ’ ಎಂದು ಬೀಗಿದರೂ.. ಗಾಂಧಿನಗರದ ಗಲ್ಲಿಯಲ್ಲಿ ಪುಷ್ಕರ್, ಸಚಿನ್‌ನ ‘ನಾರಾಯಣ’ ಭಜನೆಯಿಂದ ಪುಸ್ಕ ಆಗಿದ್ದಾರೆ ಅನ್ನುವ ಮಾತು ಹರಿದಾಡುತ್ತಿದೆ.
‘ನಾರಾಯಣ’ನ ಕಥೆ ಹೀಗಿರುವಾಗ, ಪುಷ್ಕರ್ ಅದೇ ಸಚಿನ್ ನಂಬಿಕೊಂಡು ಈಗ ‘ಅಶ್ವಥ್ಥಾಮ’ನ ಬೆನ್ನು ಬಿದ್ದಿದಾರೆ. ಹೌದು, ಮಹಾಭಾರತದ ‘ಅಶ್ವಥ್ಥಾಮ’ನ ಪಾತ್ರ ಬಾಲಿವುಡ್ ಮತ್ತು ಸ್ಯಾಂಡಲ್‌ವುಡ್‌ನ ಹಲವು ಚಲನಚಿತ್ರ ನಿರ್ಮಾಪಕರ ಕಣ್ಣಿಗೆ ಅದಾಗಲೇ ಬಿದ್ದಿತ್ತು. ಬಾಲಿವುಡ್‌ನಲ್ಲಿ ಈಗಾಗಲೇ ಸೇಮ್ ಕಥಾಹಂದರದ ಚಿತ್ರವನ್ನು ನಿರ್ಮಾಪಕ ರೋನಿ ಅನೌನ್ಸ್ ಮಾಡಿಯಾಗಿದೆ. ಇದನ್ನರಿತ ಚಾಣಾಕ್ಷ ಪುಷ್ಕರ್, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅವರ ಮನವೊಲಿಸಿ, ಕನಿ ಸ್ಟುಡಿಯೋ ವಿಶೇಷವಾಗಿ ವಿನ್ಯಾಸಗೊಳಿಸಿದ ಪೋಸ್ಟರ್ ಅನಾವರಣಗೊಳಿಸುವುದರ ಮೂಲಕ ಅನೌನ್ಸ್ ಮಾಡೇಬಿಟ್ರು. ಒಂದು ಹಂತದಲ್ಲಿ ಸಚಿನ್ ಅನ್ನು ನಂಬಿಕೊಂಡು, ರಕ್ಷಿತ್ ಅನ್ನು ‘ನಾರಾಯಣ’ ಮಾಡಿ ಕೈ ಸುಟ್ಟುಕೊಂಡಿದ್ದ ಪುಷ್ಕರ್, ಅಲ್ಲಿ ಕಳೆದುಕೊಂಡದ್ದನ್ನು ‘ಅಶ್ವಥ್ಥಾಮ’ನ ಮೂಲಕ ಪಡೆದುಕೊಳ್ಳುವ ಮಾಸ್ಟರ್‌ಪ್ಲಾನ್ ಮಾಡಿರುವ ಸಾಧ್ಯತೆ ಇದೆ.
ಇದೆಲ್ಲದರ ನಡುವೆ ಶಿವಣ್ಣ ಮತ್ತ ಸುದೀಪ್ ಅಭಿಮಾನಿಗಳ ಮಧ್ಯೆ ‘ಅಶ್ವಥ್ಥಾಮ’ನಿಗಾಗಿ ಸ್ಟಾರ್‌ವಾರ್ ಶುರುವಾಗಿದೆ. ಇದಕ್ಕೆ ಕಾರಣ ಅನೂಪ್ ಬಂಢಾರಿ ಸುದೀಪ್‌ಗಾಗಿ ‘ಅಶ್ವಥ್ಥಾಮ’ನ ಕಥೆಯ ಚಿತ್ರ ಅನೌನ್ಸ್ ಮಾಡಿದ್ದರು. ಆದರೀಗ ಆ ಕಥೆಯನ್ನು ಶಿವಣ್ಣ ಮಾಡ್ತಿದ್ದಾರೆ ಅನ್ನೋದು ಅಭಿಮಾಗಳ ತಕರಾರು. ಚಿತ್ರ ತಯಾರಿಕೆಗೆ ಬೇಕಾದ ದುಡ್ಡುಹೊಂದಿಸುವ ಜಂಜಾಟದಲ್ಲಿರುವ ಪುಷ್ಕರ್ ಈ ಅಭಿಮಾನಗಳ ಮನಸ್ಸನ್ನು ತಣಿಸುವ ಕೆಲಸವನ್ನು ಮಾಡಬೇಕಾಗಿರೋದು ಅನಿವಾರ್ಯ.ಇನ್ನು,’ನಾರಾಯಣ’ ಪುಷ್ಕರ್ ಮತ್ತು ಸಚಿನ್‌ಗೆ ಹೆಸರು ತಂದುಕೊಟ್ಟರೂ, ದುಡ್ಡು ತಂದು ಕೊಟ್ಟಿಲ್ಲ ಅನ್ನುವ ಮಾತಿದ್ದರೂ.. ಇನ್ನೊಂದು ಬಿಗ್‌ಬಜೆಟ್ ಸಿನಿಮಾಗೆ ಪುಷ್ಕರ್ ಸಚಿನ್‌ಗೇ ಡೈರೆಕ್ಟರ್ ಪಟ್ಟ ಕಟ್ಟಿದ್ದರ ಹಿಂದಿನ ಲಾಜಿಕ್ ಸೋ ಸಿಂಪಲ್. ಹೇಗಿದ್ದರೂ ಅಶ್ವತ್ಥಾಮ ಸಿನಿಮಾ ಕಂಪ್ಲೀಟ್ ಆಗಲು ಕನಿಷ್ಟ ಎರಡು-ಮೂರು ವರ್ಷವಾದರೂ ಬೇಕಾಗಬಹುದು, ಬೇರೆ ನಿರ್ದೇಶಕರನ್ನು ಅಷ್ಟು ಸಮಯ ಯಾವುದೇ ತಕರಾರಿಲ್ಲದೆ ಸಾಕುವುದು ಒಬ್ಬ ನಿರ್ಮಾಪಕನಿಗೆ ಸುಲಭದ ಮಾತಲ್ಲ. ಆದರೆ, ಸಚಿನ್ ಸಿನಿಮಾವನ್ನು ಒಂದು ಪ್ಯಾಶನ್ ಎಂದು ಪರಿಗಣಿಸಿ ಮಾಡುವವರು. ಸೋ, ಪುಷ್ಕರ್ ಈ ವಿಚಾರದಲ್ಲೂ ಸೇಫ್ ಅಲ್ಲವೇ?. ಒಟ್ಟಿನಲ್ಲಿ, ಸಚಿನ್ ಮತ್ತು ಪುಷ್ಕರ್ ಅವರ ಎರಡನೇ ಸಾಹಸದಲ್ಲಿ, ಅಶ್ವತ್ಥಾಮನ ವೇಷತೊಡಲಿರುವ ಶಿವಣ್ಣ ಪುಷ್ಕರ್ ‘ನಾರಾಯಣ’ದಲ್ಲಿ ಕಳೆದುಕೊಂಡದ್ದನ್ನು ಇಲ್ಲಿ ಪಡೆಯುವಂತೆ ಮಾಡಲಿ. ರಕ್ಷಿತ್ ಅನ್ನು ನಂಬಿಕೊಂಡಿದ್ದ ಪುಷ್ಕರ್ ‘ನಾರಾಯಣ’ನಿಗೆ ಬೇರೆ ಭಾಷೆಯಿಂದ ಸಿಕ್ಕ ನೀರಸ ಪ್ರತಿಕ್ರಿಯೆಯನ್ನು ಶಿವಣ್ಣ ನೀಗಿಸಲಿ. ಈಗಾಲಾದರೂ ಪುಷ್ಕರ್&ಟೀಮ್‌ನಿಂದ ಕನ್ನಡಕ್ಕೊಂದು ಅಪರೂಪದ ಚಿತ್ರ ಬರಲಿ ಎಂಬುದೇ ಆಶಯ.
Be the first to comment