ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಮತ್ತೆ ಚಿತ್ರ ನಿರ್ದೇಶನಕ್ಕೆ ಇಳಿದಿದ್ದಾರೆ. ” ರಿಚರ್ಡ್ ಆಂಟನಿ ” ಹೆಸರಿನ ಈ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿದೆ.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ರಕ್ಷಿತ್ ಶೆಟ್ಟಿ, ‘ ಉಳಿದವರು ಕಂಡಂತೆ ‘ ಚಿತ್ರ ನಿರ್ದೇಶಿಸಿದ ಏಳು ವರ್ಷದ ಬಳಿಕ ಮತ್ತೆ ನಿರ್ದೇಶನಕ್ಕೆ ಕೈ ಹಾಕುತ್ತಿದ್ದೇನೆ. ಇದರ ಜೊತೆಗೆ ನಾಯಕ ನಟನಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ಮಾಹಿತಿ ನೀಡಿದರು.
ಭಾನುವಾರ ಚಿತ್ರದ ಟೀಸರ್ ಬಿಡುಗಡೆ ಯಾಗಿದ್ದು, ರೆಟ್ರೋ ಶೈಲಿಯ ಸಿನಿಮಾ ಇದು ಆಗಿರಬಹುದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಹಿರಿಯ ನಟ ಅಚ್ಚುತ್ ಕುಮಾರ್ ಟೀಸರ್ ನಲ್ಲಿ ಕಾಣಿಸಿಕೊಂಡಿದ್ದು ಚಿತ್ರದ ಕಥಾ ಹಂದರ ಸಾಕಷ್ಟು ಕುತೂಹಲ ಉಂಟು ಮಾಡಿದೆ.
ಖಾಸಗಿ ವಾಹಿನಿಯೊಂದು ತಮ್ಮ ವಿರುದ್ಧ ತೇಜೋವಧೆ ಕಾರ್ಯಕ್ರಮ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಈ ಬಗ್ಗೆ ಜುಲೈ 11ರಂದು ಉತ್ತರ ನೀಡುವುದಾಗಿ ಈ ಹಿಂದೆ ಹೇಳಿದ್ದ ರಕ್ಷಿತ್ ಶೆಟ್ಟಿ, ” ಪೆನ್ನು ಸಮಾಜವನ್ನು ಒಳ್ಳೆಯ ಕಡೆಗೆ ಹಾಗೆಯೇ ಕೆಟ್ಟ ಕಡೆಗೆ ಕರೆದುಕೊಂಡು ಹೋಗಬಲ್ಲದು. ಅರ್ಹತೆ ಇರುವವರಿಗೆ ಮಾತ್ರ ಮಾಧ್ಯಮ ಸಂಸ್ಥೆಗಳು ಜವಾಬ್ದಾರಿ ಕೊಡಬೇಕು. ಈ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿ ಕೊಳ್ಳುವುದಿಲ್ಲ. ಕೆಲಸದ ಮೂಲಕ ನಾವು ಮಾತನಾಡಬೇಕು.ಇಂದಿನ ಅಲೆ ಏನಿದ್ದರೂ “ರಿಚರ್ಡ್ ಆಂಟನಿ” ಎಂದರು.
ತನ್ನ ವಿರುದ್ಧ ಖಾಸಗಿ ವಾಹಿನಿಯಲ್ಲಿ ತೇಜೋವಧೆ ಮಾಡುವ ವರದಿ ಪ್ರಕಟ ವಾಗಲು ಶ್ರೀಮನ್ನಾರಾಯಣ ಚಿತ್ರದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಪಾತ್ರವಿದೆ. ಪುಷ್ಕರ್ ಅವರ ಬೆಂಬಲದಿಂದ ಪತ್ರಕರ್ತ ಮಹೇಶ್ ದೇವಶೆಟ್ಟಿ ಈ ಕಾರ್ಯಕ್ರಮ ಮಾಡಿದರು. ಶ್ರೀಮನ್ನಾರಾಯಣ ಚಿತ್ರಕ್ಕೆ ಪುಷ್ಕರ್ ಅವರು ಬಡ್ಡಿ ಲೆಕ್ಕದಲ್ಲಿ ಹಣ ಹೂಡಿದ ಕಾರಣ ಚಿತ್ರದ ಬಜೆಟ್ ಒಂದೂವರೆ ಪಟ್ಟು ಹೆಚ್ಚಾಯಿತು. ಸಿನಿಮಾ ಲಾಸ್ ಆದಾಗ ನಾನು 20 ಕೋಟಿ ರೂಪಾಯಿ ಸಾಲ ತಂದು ಪುಷ್ಕರ್ ಅವರಿಗೆ ಆಗಿದ್ದ ನಷ್ಟವನ್ನು ಭರ್ತಿ ಮಾಡಿದ್ದೇನೆ. ಅವರು ನನ್ನ ಬಗ್ಗೆ ಹಾಗೂ ಸಿನಿಮಾದ ಬಗ್ಗೆ ಗಾಳಿಸುದ್ದಿ ಹರಡಿಸುವ ಕೆಲಸ ಮಾಡಬಾರದು. ಆತ ಸಿನಿಮಾ ಸೋತಾಗ ಲೂಸ್ ಟಾಕ್ ಮಾಡುತ್ತಾನೆಂದರೆ ಸಿನಿಮಾವನ್ನು ನಿಜವಾಗಿಯೂ ಪ್ರೀತಿಸಲಿಲ್ಲ ಎಂದು ರಕ್ಷಿತ್ ಶೆಟ್ಟಿ ಹೇಳಿದರು.
Be the first to comment