ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ವಿಭಿನ್ನ ಅವತಾರದಲ್ಲಿ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ರಾಕ್ಷಸ. ಚಿತ್ರದ ಟೈಟಲ್ ಕೇಳಿದ್ ತಕ್ಷಣ ಇದು ಬರೀ ಹಾರರ್ ಸಿನಿಮಾ ಅಂದುಕೊಳ್ಳುವುದು ಸಹಜ. ಆದರೆ ರಾಕ್ಷಸನಿಗೆ ಭಾವನಾತ್ಮಕ ಕಥೆಯ ಜೊತೆಗೆ ಟೈಮ್ ಲೂಪ್ ಕಾನ್ಸೆಪ್ಟ್ ಟಚ್ ಕೊಟ್ಟಿದ್ದಾರೆ ನಿರ್ದೇಶಕ ಲೋಹಿತ್. ಮಮ್ಮಿ, ದೇವಕಿ ಚಿತ್ರಗಳ ಖ್ಯಾತಿಯ ಲೋಹಿತ್ ಸಾರಥ್ಯದ ರಾಕ್ಷಸ ಸಿನಿಮಾವೀಗ ತೆರೆಗೆ ಬರಲು ರೆಡಿಯಾಗಿದೆ.
ರಾಕ್ಷಸ ಸಿನಿಮಾ ಶಿವರಾತ್ರಿಯಂದು ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದೆ. ಪ್ರಜ್ವಲ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಶೋಭಾರಾಜ್, ವತ್ಸಲಾಮೋಹನ್, ಸಿದ್ಲಿಂಗು ಶ್ರೀಧರ್, ಆರ್ನ ರಾಥೋಡ್ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ. ರಾಕ್ಷಸ ಸಿನಿಮಾದ 80ರಷ್ಟು ಶೂಟಿಂಗ್ ರಾಮೋಜಿ ಫಿಲ್ಮಂ ಸಿಟಿಯಲ್ಲಿ ನಡೆದಿರುವುದು ವಿಶೇಷ. ರಾಮೇಶ್ವರಂ, ಗೋವಾ, ಬೆಂಗಳೂರಿನಲ್ಲಿ ಉಳಿದ ಭಾಗದ ಚಿತ್ರೀಕರಣ ನಡೆಸಲಾಗಿದೆ.
ಶಾನ್ವಿ ಎಂಟರ್‌ಟೈನ್ವೆಂಟ್ ನಡಿ ದೀಪು ಬಿ.ಎಸ್ ನಿರ್ಮಾಣ ಮಾಡುತ್ತಿದ್ದು, ನವೀನ್ ಹಾಗೂ ಮಾನಸ ಕೆ ಸಹ ನಿರ್ಮಾಣ ಮಾಡಿದ್ದಾರೆ. ಜೇಬಿನ್ ಪಿ ಜೋಕಬ್ ಛಾಯಾಗ್ರಹಣ, ವಿನೋದ್ ಸಾಹಸ ನಿರ್ದೇಶನ, ವರುಣ್ ಉನ್ನಿ ಸಂಗೀತ ನಿರ್ದೇಶಕ, ಅವಿನಾಶ್ ಬಸುತ್ಕರ್ ಹಿನ್ನಲೆ ಸಂಗೀತ, ರವಿಚಂದ್ರನ್ ಸಿ ಸಂಕಲನ ರಾಕ್ಷಸ ಸಿನಿಮಾಕ್ಕಿದೆ. ಈವರೆಗೆ 36ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಪ್ರಜ್ವಲ್, ಇವೆಲ್ಲಕ್ಕಿಂತಲೂ ವಿಭಿನ್ನವಾಗಿ ‘ರಾಕ್ಷಸ’ ಚಿತ್ರದಲ್ಲಿ ಕಾಣಿಸಿಕೊಂಡಿರುವುದು ಸಿನಿರಸಿಕರಲ್ಲಿ ಕುತೂಹಲ ಹೆಚ್ಚಿಸಿದೆ.
Be the first to comment