ಚಿತ್ರ: ರಕ್ಕಸಪುರದೋಳ್
ನಿರ್ದೇಶಕ: ರವಿ ಸಾರಂಗ
ನಿರ್ಮಾಪಕ: ರವಿವರ್ಮ
ತಾರಾಗಣ: ರಾಜ್ ಬಿ ಶೆಟ್ಟಿ, ಅರ್ಚನಾ ಕೊಟ್ಟಿಗೆ, ಸ್ವಾತಿಷ್ಟ ಕೃಷ್ಣನ್ ಮುಂತಾದವರು…
ರೇಟಿಂಗ್: 4/5
ಆ ಹಳ್ಳಿಗೆ ಹೊಸದಾಗಿ ಬರುವ ಪೊಲೀಸ್ ಅಧಿಕಾರಿ ಶಿವ. ಆದರೆ ಹೊಸದಾಗಿ ಬಂದವನನ್ನು ಸ್ವಾಗತಿಸುವುದು ದೆವ್ವ! ಯಾಕೆಂದರೆ ಆ ಊರಿನ ಮಕ್ಕಳಿಂದ ಹಿಡಿದು ಹಿರಿಯರ ತನಕ ಪ್ರತಿಯೊಬ್ಬರಿಗೂ ದೆವ್ವಗಳ ಬಗ್ಗೆ ಅಪಾರ ನಂಬಿಕೆ. ಈ ನಂಬಿಕೆಗೆ ಪೂರಕವಾಗಿ ಕೊಳ್ಳಿ ದೆವ್ವದ ಕಾಟ ಶುರುವಾಗುತ್ತದೆ.
ರಾತ್ರಿ ಹೊತ್ತಾಗುತ್ತಲೇ ಊರಿನ ಒಬ್ಬೊಬ್ಬರೇ ಯುವತಿಯರು ನಾಪತ್ತೆಯಾಗುತ್ತಾರೆ. ನಾಪತ್ತೆಯಾದ ಮಹಿಳೆಯರು ಬಳಿಕ ಶವವಾಗಿ ಪತ್ತೆಯಾಗುತ್ತಾರೆ. ಆ ಯುವತಿಯರ ಮುಖಗಳು ಬೆಂಕಿಯಿಂದ ಭಯಾನಕವಾಗಿ ಸುಟ್ಟು ಹೋಗಿರುತ್ತವೆ. ಶಿವ ಈ ಕೊಲೆಗಳ ಹಿಂದಿನ ಸತ್ಯವನ್ನು ಅನಾವರಣಗೊಳಿಸಲು ಮುಂದಾಗುತ್ತಾನೆ. ಈ ಪ್ರಯತ್ನದಲ್ಲಿ ಶಿವನ ದಾರಿ ತಪ್ಪಲು ಕಾರಣಗಳೇನು? ಮರಳಿ ಸರಿದಾರಿಗೆ ಬರಲು ಶಿವನಿಗೆ ಸಿಗುವ ಕ್ಲೂ ಯಾವುದು? ಇಂಥ ಎಲ್ಲ ಸಂದೇಹಗಳಿಗೆ ಈ ಸಿನಿಮಾದಲ್ಲಿ ಅದ್ಭುತವಾದ ಉತ್ತರಗಳಿವೆ.
ಪೊಲೀಸ್ ಅಧಿಕಾರಿ ಶಿವನಾಗಿ ರಾಜ್ ಶೆಟ್ಟಿ ಆಕರ್ಷಕ ಅಭಿನಯ ನೀಡಿದ್ದಾರೆ. ರಾಜ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿದ್ದರೂ ಯಾಕೆ ಗಡ್ಡಧಾರಿಯಾಗಿ ಕಾಣಿಸಿದ್ದಾರೆ ಎನ್ನುವುದಕ್ಕೆ ಚಿತ್ರದಲ್ಲಿ ಉತ್ತರವಿದೆ. ಕೊಲೆಗಾರನನ್ನು ಹುಡುಕುವ ಪೊಲೀಸ್ ಅಧಿಕಾರಿಗೆ ಶಾಲಾ ಶಿಕ್ಷಕನ ಪಾತ್ರದಲ್ಲಿರುವ ಗೋಪಾಲಕೃಷ್ಣ ದೇಶಪಾಂಡೆ, ಸಿದ್ದನ ಪಾತ್ರದಲ್ಲಿರುವ ಬಿ ಸುರೇಶ್, ಸಿದ್ದನ ಶಿಷ್ಯನ ಪಾತ್ರದಲ್ಲಿರುವ ಜಹಾಂಗೀರ್ ಹೀಗೆ ಹಲವರ ಬಗ್ಗೆ ಗುಮಾನಿ ಇರುತ್ತದೆ. ಆದರೆ ನಿಜವಾದ ಕೊಲೆಗಾರ ಯಾರು ಎಂದು ಪತ್ತೆ ಮಾಡುವ ರೋಮಾಂಚಕ ಕ್ಷಣವನ್ನು ಬೆಳ್ಳಿ ಪರದೆಯ ಮೇಲೆ ನೋಡುವುದೇ ಖುಷಿ.
ಚಿತ್ರದಲ್ಲಿ ಅರ್ಜುನ್ ಜನ್ಯ ಸಂಗೀತದ ಹಾಡುಗಳು ಮನದೊಳಗೆ ಸ್ಥಾನಪಡೆಯುತ್ತವೆ. ಅದರಲ್ಲೂ ಮಾದೇವನ ಹಾಡು ಹಾಡುವ ಸಿದ್ಧನಾಗಿ ಖುದ್ದು ಅರ್ಜುನ್ ಜನ್ಯ ಕಾಣಿಸಿಕೊಂಡಿರುವುದು ಮನಸಿಗೆ ಮುದ ನೀಡುತ್ತದೆ. ಶಿವು ಪತ್ನಿಯಾಗಿ ಸ್ವಾತಿಷ್ಟ ಕೃಷ್ಣನ್ ಆತ್ಮೀಯರಾಗುತ್ತಾರೆ. ಅರ್ಚನಾ ಕೊಟ್ಟಿಗೆ ನಿರ್ವಹಿಸಿರುವ ಪಾತ್ರಕ್ಕೂ ಪ್ರಾಧಾನ್ಯತೆ ಇದೆ.
ರಾಜ್ ಬಿ ಶೆಟ್ಟಿ ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಲೇ ಬಂದಿದ್ದಾರೆ. ರಾಜ್ ವೈವಿಧ್ಯತೆಯನ್ನು ಬಯಸುವವರಿಗೆ ಮಾತ್ರವಲ್ಲ, ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಪ್ರೇಮಿಗಳಿಗೆ ಕೂಡ ಈ ಸಿನಿಮಾ ತುಂಬಾನೇ ಇಷ್ಟವಾಗುವುದರಲ್ಲಿ ಸಂದೇಹವಿಲ್ಲ.





Be the first to comment