ಚಲನಚಿತ್ರ ಕ್ಷೇತ್ರದಿಂದ ಹಿರಿಯ ನಟರಾದ ಬ್ಯಾಂಕ್ ಜನಾರ್ಧನ್, ಡಿಂಗ್ರಿ ನಾಗರಾಜ್ ಅವರಿಗೆ 2022-23ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಸಂಗೀತ, ಸಿನಿಮಾ, ಕ್ರೀಡೆ, ನ್ಯಾಯಾಂಗ, ರಂಗಭೂಮಿ, ಶಿಕ್ಷಣ, ಪರಿಸರ, ಮಾಧ್ಯಮ, ತಂತ್ರಜ್ಞಾನ ಸೇರಿದಂತೆ ಹಲವು ವಿಭಾಗಗಳಲ್ಲಿ ಒಟ್ಟು 68 ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ನೀಡಲಾಗುತ್ತಿದೆ.
ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಬ್ಯಾಂಕ್ ಜನಾರ್ಧನ್, ಡಿಂಗ್ರಿ ನಾಗರಾಜ್ ಸಕ್ರಿಯರಾಗಿದ್ದಾರೆ. ನೂರಾರು ಸಿನಿಮಾಗಳ ಮೂಲಕ ಅವರು ಜನರನ್ನು ರಂಜಿಸಿದ್ದಾರೆ.ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಆಗಿರುವುದಕ್ಕೆ ಚಿತ್ರರಂಗ, ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
‘ಶ್’, ‘ಅಜಗಜಾಂತರ’, ‘ತರ್ಲೆ ನನ್ಮಗ’, ‘ಗೌರಿ ಗಣೇಶ’ ಮುಂತಾದ ಸಿನಿಮಾಗಳಲ್ಲಿ ಬ್ಯಾಂಕ್ ಜನಾರ್ದನ್ ತಮ್ಮ ನಟನೆಯ ಮೂಲಕ ಗಮನ ಸೆಳೆದಿದ್ದಾರೆ. ಕೆಲ ದಿನಗಳ ಹಿಂದೆ ಅವರಿಗೆ ಹೃದಯಾಘಾತ ಆದ ಸುದ್ದಿ ಕೇಳಿ ಬಂದಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಸದ್ಯ ಬ್ಯಾಂಕ್ ಜನಾರ್ದನ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಡಿಂಗ್ರಿ ನಾಗರಾಜ್ ಮೂಲತಃ ಬೆಂಗಳೂರಿನವರು. ಅವರ ತಂದೆ ನಾಟಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಾಲ ನಟನಾಗಿಯೇ ಡಿಂಗ್ರಿ ನಾಗರಾಜ್ ಅವರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ನಂತರ ಅವರಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ಹಲವಾರು ಸಿನಿಮಾಗಳಲ್ಲಿ ಸ್ಯಾಂಡಲ್ವುಡ್ನ ಅನೇಕ ಸ್ಟಾರ್ ಹೀರೋಗಳ ಜೊತೆ ನಟಿಸಿ ಅವರು ಜನಪ್ರಿಯತೆ ಪಡೆದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ 5 ಲಕ್ಷ ರೂ. ನಗದು, 25 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ.
Be the first to comment