ಸ್ಯಾಂಡಲ್‌ವುಡ್‌ನ ಹಿರಿಯ ನಟರಾದ ದತ್ತಣ್ಣ, ಅವಿನಾಶ್ , ಸಿಹಿಕಹಿ ಚಂದ್ರು ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ.
ದತ್ತಣ್ಣ ಸುಮಾರು ನಾಲ್ಕು ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ಕನ್ನಡ, ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವಿನಾಶ್ ನಾಲ್ಕು ದಶಕಗಳ ಕಾಲ ಕನ್ನಡ ಸೇರಿದಂತೆ ತಮಿಳು, ತೆಲುಗು ಭಾಷೆಯ ಸಿನಿಮಾಗಳಲ್ಲಿ ಪೋಷಕ ನಟ ಆಗಿ ನಟಿಸಿದ್ದಾರೆ.
ಸಿನಿಮಾ ಹಾಗೂ ಕಿರುತೆರೆ ಎರಡೂ ವಿಭಾಗಗಳಲ್ಲಿಯೂ ಗುರುತಿಸಿಕೊಂಡಿರುವ ಸಿಹಿ ಕಹಿ ಚಂದ್ರು ಟಿವಿ ವಾಹಿನಿಯಲ್ಲಿ ಅಡುಗೆ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಕಿರುತೆರೆಯಲ್ಲಿ ‘ಪಾಪ ಪಾಂಡು’, ‘ಸಿಲ್ಲಿ-ಲಲ್ಲಿ’ಯಂತಹ ಹಾಸ್ಯ ಧಾರಾವಾಹಿಗಳನ್ನು ನಿರ್ಮಿಸಿದ್ದಾರೆ. ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಸಿಹಿಕಹಿ ಚಂದ್ರು ಗುರುತಿಸಿಕೊಂಡಿದ್ದಾರೆ.
ಸಿನಿಮಾ ಕ್ಷೇತ್ರದಿಂದ ದತ್ತಣ್ಣ ಹಾಗೂ ಅವಿನಾಶ್, ಕಿರುತೆರೆ ವಿಭಾಗದಿಂದ ಸಿಹಿಕಹಿ ಚಂದ್ರು ಅವರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
67 ಮಂದಿ ಸಾಧಕರನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಂಕೀರ್ಣ, ಸೈನಿಕ, ಪತ್ರಿಕೋದ್ಯಮ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಪೌರಕಾರ್ಮಿಕ, ಆಡಳಿತ, ಹೊರನಾಡು, ಹೊರದೇಶ, ವೈದ್ಯಕೀಯ, ರಂಗಭೂಮಿ, ಸಂಗೀತ, ಜಾನಪದ ಸೇರಿದಂತೆ ಸಿನಿಮಾ ಕ್ಷೇತ್ರದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನ.1ರಂದು ನೀಡಲಾಗುತ್ತಿದೆ.
ನವೆಂಬರ್ 1ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಶಸ್ತಿ ನೀಡಲಿದ್ದಾರೆ. ಪ್ರಶಸ್ತಿ ಗೆದ್ದವರಿಗೆ 5 ಲಕ್ಷ ರೂ. ನಗದು, 25 ಗ್ರಾಂ ಬಂಗಾರ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ.
__
Be the first to comment