ರಾಜತಂತ್ರ ಚಿತ್ರದ ಟೀಸರ್ ಬಿಡುಗಡೆ ಮಾಡಿದ ಪುನೀತ್ -ಜನವರಿ 1ಕ್ಕೆ ಚಿತ್ರಮಂದಿರಗಳಲ್ಲಿ ರಿಲೀಸ್

ರಾಜ್ಯ ಪ್ರಶಸ್ತಿ ವಿಜೇತ ರಾಘವೇಂದ್ರ ರಾಜಕುಮಾರ್ ನಟಿಸಿರುವ ರಾಜತಂತ್ರ ಚಿತ್ರದ ಟೀಸರ್ ಬಿಡುಗಡೆಯನ್ನೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅತಿಥಿಯಾಗಿ ಆಗಮಿಸಿ ಟೀಸರ್ ಬಿಡುಗಡೆ ಮಾಡಿದರು. ಪುನೀತ್ ಅಣ್ಣನ ಚಿತ್ರಕ್ಕೆ ಆಲ್ ದಿ ಬೆಸ್ಟ್ ಹೇಳಿದರು. ಇಡೀ ತಂಡ ತುಂಬ ಶ್ರಮ ಹಾಕಿ ಈ ಸಿನಿಮಾ‌ ಮಾಡಿದೆ. ಕೊರೊನಾ ಲಾಕ್ ಡೌನ್ ಸಡಿಲಿಕೆ ಆಗುತ್ತಿದ್ದಂತೆ ಈ ಸಿನಿಮಾ ಶುರುವಾಗಿತ್ತು.‌ ಇದೀಗ ರಿಲೀಸ್ ಗೆ ರೆಡಿಯಾಗಿದೆ. ಒಳ್ಳೆಯದಾಗಲಿ ಎಂದರು.

ಅದಕ್ಕೂ ಮೊದಲು ರಾಘಣ್ಣ ಅವರ ಕುಟುಂಬ ಮತ್ತು ಚಿತ್ರತಂಡ ವೇದಿಕೆ ಮೇಲೆ ದೀಪ ಬೆಳಗಿಸುವ‌ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದ ಜೆ ಎಂ ಪ್ರಹ್ಲಾದ್ ಮಾತನಾಡಿ ‘ಕಥೆ ಹೇಳಿದ ತಕ್ಷಣ ಇದು ರಾಘಣ್ಣನಿಗೆ ಸೂಟ್ ಆಗಲಿದೆ ಎಂದೆನಿಸಿದಾಗ ನೇರವಾಗಿ ಅವರನ್ನು ಭೇಟಿಯಾಗಿ ಕಥೆ ಹೇಳಿದೆ. ಅವರಿಂದ ಒಪ್ಪಿಗೆಯೂ ಸಿಕ್ಕಿತು.

ಟೆಂಟೆನಲ್ಲಿ ಅಣ್ಣಾವ್ರ ಸಿನಿಮಾಗಳನ್ನು ನೋಡುತ್ತಿದ್ದೆ. ಸಾಮಾಜಿಕ ಸಂದೇಶವೇ ಅವರ ಸಿನಿಮಾದ ಹೈಲೈಟ್ ಆಗಿತ್ತು. ಹೀಗಿರುವಾಗ ಅಣ್ಣಾವ್ರಿಗೆ ಸಿನಿಮಾ ಮಾಡುವ ಅವಕಾಶ ಸಿಗಲಿಲ್ಲ. ಆ ಕನಸನ್ನು ರಾಘಣ್ಣನ ರಾಜತಂತ್ರ ಸಿನಿಮಾ ಮೂಲಕ ಈಡೇರಿಸಿಕೊಂಡಿದ್ದೇನೆ ಎಂದರು ಜೆ.ಎಂ ಪ್ರಹ್ಲಾದ್. ನಿರ್ಮಾಪಕ ವಿಜಯ ಭಾಸ್ಕರ್ ಮಾತನಾಡಿ, ಒಳ್ಳೆಯ ಕಥೆ ಜತೆಗೆ ಆಗಮಿಸುತ್ತಿದ್ದೇವೆ. ನೋಡಿ ಹರಸಿ ಎಂದರು.

ರಾಘಣ್ಣ ಸಹ ಅಷ್ಟೇ ಖುಷಿಯಲ್ಲಿ ಒಂದಷ್ಟು ಅನಿಸಿಕೆ ಹಂಚಿಕೊಂಡರು. ನನ್ನ ಲೈಫ್ ನಲ್ಲಿ ಈ ಥರದ ಪಾತ್ರಮಾಡಿರಲಿಲ್ಲ. ಇದು ನನಗೆ ಹೊಸ ಅನುಭವ. ನಾನು ಮಾಡಿದ್ದೇನೆ ಎಂಬುದಕ್ಕಿಂತ ಇವರೆಲ್ಲ ನನ್ನ ಕಡೆ ಮಾಡಿಸಿದ್ದಾರೆ ಎಂದರು.

ಚಿತ್ರದ ನಿರ್ದೇಶಕ ಪಿವಿಆರ್ ಸ್ವಾಮಿ ಮಾತನಾಡಿ, ಅಮ್ಮನ ಮನೆ ಸಿನಿಮಾದಲ್ಲಿ ರಾಘಣ್ಣ ಜತೆ‌ ಕೆಲಸ ಮಾಡಿದ್ದೆ. ಈ ಚಿತ್ರದಲ್ಲಿ ನಿವೃತ್ತ ಆರ್ಮಿ ಆಧಿಕಾರಿಯಾಗಿ ಕ್ಯಾಪ್ಟನ್ ರಾಜಾರಾಮ್ ಆಗಿ ಕಾಣಿಸಿಕೊಂಡಿದ್ದಾರೆ. ಸಮಾಜದೊಳಗಿನ ಲೋಪಗಳನ್ನು ತಮ್ಮದೆ ಶೈಲಿಯಲ್ಲಿ ಸರಿಪಡಿಸುತ್ತಾರೆ. ಅದೇಗೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಿ. ಅಷ್ಟೇ ಅಲ್ಲ ಈ ಸಿನಿಮಾದಲ್ಲಿ ರಾಘಣ್ಣ ಅವರ ಕಡೆಯಿಂದ ಫೈಟ್ ಸಹ ಮಾಡಿಸಿದ್ದೇವೆ ಎಂದರು ನಿರದೇಶಕರು.

ವಿಶ್ವಂ ಡಿಜಿಟಲ್ ಮೀಡಿಯಾ ಪ್ರೈ ಲಿ ಲಾಂಛನದಲ್ಲಿ ಜೆ.ಎಂ.ಪ್ರಹ್ಲಾದ್, ವಿಜಯ್ ಭಾಸ್ಕರ್ ಹರಪನಹಳ್ಳಿ ಹಾಗೂ ಪಿ.ಆರ್.ಶ್ರೀಧರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪತ್ರ ನೀಡಿದೆ.

ಜೆ.ಎಂ.ಪ್ರಹ್ಲಾದ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ಬರೆದಿರುವ ಈ ಚಿತ್ರದ ನಿರ್ದೇಶಕರು ಪಿ.ವಿ.ಆರ್ ಸ್ವಾಮಿ ಗೂಗರದೊಡ್ಡಿ. ಶ್ರೀಸುರೇಶ್ ಸಂಗೀತ ನಿರ್ದೇಶನ, ಪಿ.ವಿ.ಆರ್ ಸ್ವಾಮಿ ಛಾಯಾಗ್ರಹಣ, ನಾಗೇಶ್ ಸಂಕಲನ, ಚಂದನ್ ಕಲಾ ನಿರ್ದೇಶನ ಹಾಗೂ ವೈಲೆಂಟ್ ವೇಲು, ರಾಮ್ ದೇವ್, ಅಲ್ಟಿಮೆಟ್ ಶಿವುಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ರಾಘವೇಂದ್ರ ರಾಜಕುಮಾರ್, ದೊಡ್ಡಣ್ಣ, ಶ್ರೀನಿವಾಸ ಮೂರ್ತಿ, ಭವ್ಯ, ಶಂಕರ್ ಅಶ್ವಥ್, ನೀನಾಸಂ ಅಶ್ವಥ್, ಮುನಿರಾಜು, ವಿಜಯಭಾಸ್ಕರ್, ಪ್ರತಾಪ್ ಸಿಂಹ ಅಗರ, ಶಿವಾನಂದ, ಪ್ರಕಾಶ್ ಕಾರಿಯಪ್ಪ, ವೆಂಕಟೇಶ್ ಪ್ರಸಾದ್, ಹೋಳಿ‌ ವೆಂಕಟೇಶ್, ಸ್ವಾತಿ ಅಂಬರೀಶ್, ವಲ್ಲಭ್, ಪ್ರವೀಣ್, ಉಮೇಶ್, ಕುಮಾರ್, ಕನ್ನಡ ಪ್ರೇಮ್, ಲಕ್ಷ್ಮಣ್, ಭೀಮ, ಆನಂದ್ ಪನ್ನೇದೊಡ್ಡಿ, ಹೇರಂಭ, ಸತೀಶ್ ಗೌಡ, ಮೀರಾ ಶ್ರೀ ಗೌಡ ಮುಂತಾದವರು ರಾಜತಂತ್ರ ದ ತಾರಾಬಳಗದಲ್ಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!