ಡಿಫರೆಂಟ್ ಡ್ಯಾನಿ ಸಾಹಸ ಸಂಯೋಜಿಸಿರುವ ಮೈ ಜುಂ ಎನಿಸುವ ರಾಜಣ್ಣನ ಮಗ ಚಿತ್ರದ ಧ್ವನಿಸುರುಳಿ ಹಾಗೂ ಟ್ರೈಲರ್ ಬಿಡುಗಡೆ ಕಾಯಕ್ರಮ ರಾಜ್ಯೋತ್ಸವ ದಿನದಂದು ನಡೆಯಿತು. ಟ್ರೈಲರ್‍ನಲ್ಲಿ ನಾಯಕ ಹರೀಶ್ ಜಲಗೆರೆ ಜಬರ್‍ದಸ್ತ್‍ಗಾಗಿ ಕಾಣಿಸಿಕೊಂಡಿದ್ದಾರೆ, ಕನ್ನಡ ಚಿತ್ರರಂಗದಲ್ಲಿ ತಮ್ಮ ಸಹಾಸ ಸಂಯೋಜನೆಯಿಂದಲೇ ಗುರುತಿಸಿಕೊಂಡಿರುವ ಥ್ರಿಲ್ಲರ್‍ಮಂಜು, ಜಾಲಿಬಾಸ್ಟಿನ್, ಮಾಸ್ ಮಾದ, ಕುಂಗೂ ಚಂದ್ರುಘಿ, ವಿನೋದ್, ವಿಕ್ರಂ ಅವರು ಬಂದು ಹಾಡುಗಳು ಹಾಗೂ ಟ್ರೈಲರ್ ಅನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದು ವಿಶೇಷವಾಗಿತ್ತು.
ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ ಮಾತನಾಡಿ, ಈ ಚಿತ್ರದ ಟೈಟಲ್ ಹೆಸರು ಕೇಳಿದರೆ ನನಗೆ ನಮ್ಮ ಭಾವ ಡಾ.ರಾಜ್‍ಕುಮಾರ್ ನೆನಪಾಗುತ್ತಾರೆ, ಈ ಚಿತ್ರದಲ್ಲಿ ರಾಜಣ್ಣನಾಗಿ ಚರಣ್‍ರಾಜ್ ನಟಿಸಿದ್ದಾರೆ, ಅವರು ತಮಿಳು ಭಾಷೆಯಲ್ಲಿ ಮಿಂಚಿದ್ದಾರೆ, ಕಲೆಗೆ ಯಾವುದೇ ಭಾಷೆಯ ಅಚ್ಚುಕಟ್ಟಿಲ್ಲ ಆದರೆ ಎಲ್ಲೇ ಹೋಗಲು ಕನ್ನಡತನವನ್ನು ಮರೆಯದಿರಲಿ. ರಾಜ್‍ಕುಮಾರ್ ಅವರು ಕೇವಲ ನಟನಾಗಿ ಗಮನ ಸೆಳೆಯದೆ, ತಮ್ಮ ಸರಳತನ, ವಿನಯ, ಕನ್ನಡ ಉಳುವಿಗಾಗಿ ನಡೆಸಿದ ಗೋಕಾಕ್ ಚಳುವಳಿ ಮೂಲಕ ಮಾದರಿಯಾಗಿದ್ದಾರೆ, ಅವರ ಗುಣವನ್ನು ಈಗಿನ ನಾಯಕನಟರು ಅಳವಡಿಸಿಕೊಳ್ಳುವಂತಾಗಲಿ ಎಂದು ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು. ನಟ ಚರಣ್‍ರಾಜ್ ಮಾತನಾಡಿ, ರಾಜ್ ಎಂಬ ಹೆಸರೇ ಚಿತ್ರದ ಗೆಲುವಿಗೆ ಟಾನಿಕ್‍ನಂತಿದೆ. ಅವರ ಹೆಸರಿನ ಪಾತ್ರದಲ್ಲಿ ನಟಿಸಿರುವುದೇ ನನ್ನ ಭಾಗ್ಯ, ನಾನು ನಟಿಸುವಾಗ ಅವರು ನನ್ನ ಕಣ್ಣ ಮುಂದೆ ಬರುತ್ತಿದ್ದರು ಎಂದು ಸಂತಸದಿಂದ ಹೇಳಿಕೊಂಡರು.
ನಾಯಕ ನಟ ಹರೀಶ್ ಜಲಗೆರೆ ಮಾತನಾಡಿ, ಸಿನಿಮಾದಲ್ಲಿ ಸಾಹಸ ಇದ್ದರೆ ಹೀರೋಗೆ ಕಳೆ ಬರುತ್ತದೆ, ಈ ಚಿತ್ರದಲ್ಲಿ ನಾನು ಅದ್ಭುತ ಸ್ಟಂಟ್‍ಗಳನ್ನು ಮಾಡಿದ್ದೇನೆ, ನಮ್ಮ ಚಿತ್ರದ ಧ್ವನಿಸುರುಳಿ ಹಾಗೂ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಕನ್ನಡ ಚಿತ್ರರಂಗದ ಎಲ್ಲಾ ಸಾಹಸ ನಿರ್ದೇಶಕರು ಬಂದಿರುವುದು ಸಂತಸವನ್ನು ಹೆಚ್ಚಿಸಿದೆ ಎಂದರು. ಚಿತ್ರದ ನಿರ್ದೇಶಕ ಕೋಲಾರ ಸೀನು ಚಿತ್ರದ ಕುರಿತಂತೆ ಸಂಕ್ಷಿಪ್ತವಾಗಿ ಮಾತನಾಡಿದರು. ಬೇರೆ ಚಿತ್ರದ ಷೂಟಿಂಗ್‍ನಲ್ಲಿದ್ದರಿಂದ ನಾಯಕಿ ಅಕ್ಷರಾ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಈ ಚಿತ್ರದ ನಾಲ್ಕು ಹಾಡುಗಳಿಗೆ ರವಿ ಬಸ್ರೂರು ಸಂಗೀತ ಒದಗಿಸಿದ್ದಾರೆ
Pingback: CICD