Rajanikanth: ‘ಲಾಲ್​ ಸಲಾಂ’ ಫಸ್ಟ್​ ಲುಕ್​

ಸೂಪರ್‌ ಸ್ಟಾರ್‌ ರಜನಿಕಾಂತ್​ ನಟಿಸುತ್ತಿರುವ ‘ಲಾಲ್​ ಸಲಾಂ’ ಚಿತ್ರದ ಫಸ್ಟ್​ ಲುಕ್​ ಬಿಡುಗಡೆಯಾಗಿದೆ.

ಈ ಸಿನಿಮಾವನ್ನು ರಜನಿ ಪುತ್ರಿ ಐಶ್ವರ್ಯಾ ರಜನಿಕಾಂತ್​ ನಿರ್ದೇಶಿಸುತ್ತಿದ್ದು, ಸದ್ಯ ಚಿತ್ರದ ಫಸ್ಟ್​ ಲುಕ್​ ಬಿಡುಗಡೆಯಾಗಿದೆ. 1993 ರಲ್ಲಿ ಬಾಂಬೆನಲ್ಲಿ (ಈಗ ಮುಂಬೈ) ನಡೆದ ಕೋಮುಗಲಭೆಗಳ ಮಧ್ಯೆ ತಲೈವಾ ನಡೆದುಕೊಂಡು ಹೋಗುತ್ತಿರುವುದು ಪೋಸ್ಟರ್​ನಲ್ಲಿ ತೋರಿಸಲಾಗಿದೆ. ಈ ಪೋಸ್ಟರ್​ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

“ಎಲ್ಲರ ನೆಚ್ಚಿನ ಭಾಯ್​ ಮುಂಬೈಗೆ ಮರಳಿದ್ದಾರೆ. ರಜನಿ ಮೊಯ್ದಿನ್​ ಭಾಯ್​ ಆಗಿ ಬರುತ್ತಿದ್ದಾರೆ” ಎಂದು ಚಿತ್ರತಂಡ ಪೋಸ್ಟರ್​ ಹಂಚಿಕೊಂಡಿದೆ. ರಜನಿಕಾಂತ್​ ಡಿಫರೆಂಟ್‌ ಆಗಿ ಕಾಣಿಸಿಕೊಂಡಿದ್ದಾರೆ.

‘ಲಾಲ್​ ಸಲಾಂ’ ಚಿತ್ರದಲ್ಲಿ ರಜನಿ ಜೊತೆ ಯುವ ನಟರಾದ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಟಾಲಿವುಡ್ ತಾರೆ ಜೀವತಾ ರಾಜಶೇಖರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈ ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತ ನೀಡುತ್ತಿದ್ದಾರೆ. ಈ ಚಿತ್ರಕ್ಕಾಗಿ ರಜಿನಿ ಮುಂಬೈನಲ್ಲಿದ್ದಾರೆ. ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಈ ವರ್ಷದ ಕೊನೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಯೋಜನೆ ರೂಪಿಸಿದ್ದಾರೆ.

ರಜನಿ ನಾಯಕ ಆಗಿ ನಟಿಸಿರುವ ‘ಜೈಲರ್​’ ತೆರೆ ಕಾಣಲು ಸಜ್ಜಾಗಿದೆ. ಈ ಚಿತ್ರವನ್ನು ಕಲಾನಿಧಿ ಮಾರನ್ ದೊಡ್ಡ ಬಜೆಟ್‌ನಲ್ಲಿ ನಿರ್ಮಿಸಿದ್ದಾರೆ. ತಮಿಳಿನ ಸ್ಟಾರ್ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.​

ನಾಯಕಿಯಾಗಿ ಸೌತ್​ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ನಟಿಸಿದ್ದಾರೆ. ​ ಹ್ಯಾಟ್ರಿಕ್​ ಹೀರೋ ಶಿವ ರಾಜ್​​ಕುಮಾರ್​, ಮಲಯಾಳಂ ಸೂಪರ್​ ಸ್ಟಾರ್​ ಮೋಹನ್​ ಲಾಲ್​, ಜಾಕಿ ಶ್ರಾಫ್​, ರಮ್ಯಾ ಕೃಷ್ಣ, ಹಾಸ್ಯನಟ ಸುನೀಲ್​ ಮುಂತಾದವರು ಪ್ರಮುಖ ಪಾತ್ರದಲ್ಲಿದ್ದಾರೆ.
——

Be the first to comment

Leave a Reply

Your email address will not be published. Required fields are marked *

Translate »
error: Content is protected !!