ರಾಜಕೀಯ ರಂಗಕ್ಕೆ ರಂಗನಾಯಕಿ ? ಅಕೌಂಟಿಗೆ ಬಂದ ಹಣಕ್ಕೆ ಕೌಂಟೇ ಇಲ್ಲ

ನಟಿ ರಾಧಿಕಾ ಆಲಿಯಾಸ್ ರಾಧಿಕಾ ಕುಮಾರಸ್ವಾಮಿ ಈಗ ಸುದ್ದಿಯಲ್ಲಿದ್ದಾರೆ. ಇಲ್ಲಿ ರಾಧಿಕಾ ಕುಮಾರಸ್ವಾಮಿ ಅಂತ ಉಲ್ಲೇಖ ಮಾಡಿರೋದಕ್ಕೆ ಕಾರಣವಿದೆ. ಈಗ ಆಗಿರುವ ಒಂದು ಬೆಳವಣಿಗೆ ಬಗ್ಗೆ ಈ ನಟಿ ರಾಧಿಕಾ ಆಗಿಯೂ, ರಾಧಿಕಾ ಕುಮಾರಸ್ವಾಮಿ ಆಗಿಯೂ ಮಾತನಾಡಿರೋದು ಇದಕ್ಕೆ ಕಾರಣ.

ರಾಧಿಕಾ ಅವರ ತಂದೆಗೆ ಆಪ್ತರಾಗಿದ್ದ ಸ್ವಾಮಿ ಎಂಬುವವರು ಈಗ ಪೊಲೀಸರ ಅತಿಥಿಯಾಗಿದ್ದು ಅವರ ಹಣಕಾಸು ವಿಚಾರದಲ್ಲಿ ರಾಧಿಕಾ ಅವರ ಹೆಸರು ಕೂಡ ಪ್ರಸ್ತಾಪವಾಗಿದೆ. ಈ ವ್ಯವಹಾರದಲ್ಲಿ ಸ್ವಾಮಿ ಅವರು ಒಟ್ಟು 75 ಲಕ್ಷ ಹಣವನ್ನು ರಾಧಿಕಾ ಅವರ ಅಕೌಂಟಿಗೆ ಹಾಕಿದ್ದಾರೆ. ಆದರೆ ಆ ಹಣದಲ್ಲಿ 15 ಲಕ್ಷ ಮಾತ್ರ ನನಗೆ ಅವರ ಅಕೌಂಟಿನಿಂದ ಬಂದಿದ್ದು ಇನ್ನುಳಿದ 60 ಲಕ್ಷ ಇನ್ಯಾರದೋ ಅಕೌಂಟಿನಿಂದ ಬಂದಿದೆ. ಅದು ಯಾರಂತ ಗೊತ್ತಿಲ್ಲ ಎಂದು ರಾಧಿಕಾ ಹೇಳಿರುವುದು ಎಲ್ಲರ ಹುಬ್ಬೇರಿಸಿದೆ.
ಈ ಸೋ ಕಾಲ್ಡ್ ಹಗರಣ ಎಲ್ಲರಿಗೂ ರಾಧಿಕಾ ಅವರ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಅದರಲ್ಲಿ ಮುಖ್ಯವಾದದ್ದು ರಾಧಿಕಾ ಅವರಿಗೆ ರಾಜಕೀಯದ ಆಸೆ ಹುಟ್ಟಿದೆಯಾ ಅನ್ನೋದು. ಅದರ ಜೊತೆಗೆ ಈಗ ರಾಜಕೀಯದ ಅವ್ಯವಹಾರಗಳಲ್ಲಿ ರಾಧಿಕಾ ಅವರು ಇಲ್ಲೀಗಲ್ ಆಗಿ ಮತ್ತು ಇನ್ ಡೈರೆಕ್ಟ್ ಆಗಿ ಇನ್ ವಾಲ್ವ್ ಆಗಿದ್ದಾರಾ ಅನ್ನೋ ಪ್ರಶ್ನೆಯೂ ಇದೆ.
ಆದರೆ ರಾಧಿಕಾ ಕುಮಾರಸ್ವಾಮಿ ಪತ್ರಿಕಾಗೋಷ್ಠಿ ಕರೆದು ಅದರಲ್ಲಿ ಈ ವಿಷಯದಲ್ಲಿ ನನಗೂ ರಾಜಕೀಯಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ. ಅಲ್ಲದೆ ಈ ಹಣ ಅವರ ಅಕೌಂಟಿಗೆ ಬಂದಿರೋದು ಅವರ ಸಿನಿಮಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಎಂದಿದ್ದಾರೆ. ನಾನು ಸ್ವಾಮಿ ಅವರ ಜೊತೆ ಸಿನಿಮಾ ಮಾಡುವ ಪ್ಲ್ಯಾನ್ ಇತ್ತು. ನಾಟ್ಯರಾಣಿ ಶಾಂತಲೆ ಸಿನಿಮಾ ಮಾಡೋಕೆ ನಾನು ಈ ಹಣ ಪಡೆದಿದ್ದು ಅಂತಲೇ ರಾಧಿಕಾ ಹೇಳಿದ್ದಾರೆ.
ಆದರೆ ವಿಷಯದ ಬಗ್ಗೆ ಬರುವ ಅನುಮಾನ ಅಂದರೆ ತಮ್ಮ ಅಕೌಂಟಿಗೆ ಬಂದ 60 ಲಕ್ಷ ಹಾಕಿದ್ದು ಯಾರು ಅಂತ ನಂಗೆ ಗೊತ್ತಿಲ್ಲ ಅಂತಾರೆ ರಾಧಿಕಾ. ಈ ಮಾತು ಕೇಳಿದರೆ ರಾಧಿಕಾ ಅವರು ನಾಟ್ಯರಾಣಿ ಶಾಂತಲೆ ಅನಿಸದಿದ್ದರೂ ಅಭಿನಯ ಶಾರದೆ ಎನ್ನಿಸುವುದು ಮಾತ್ರ ಸುಳ್ಳಲ್ಲ. ತಮ್ಮ ಅಕೌಂಟಿಗೆ 60 ಲಕ್ಷ ಹಣ ಬಂದರೂ ಅದು ಯಾರು ಹಾಕಿದ್ದು ನಂಗೆ ಗೊತ್ತಿಲ್ಲ ಅಂತ ಹೇಳಿದ್ರೆ ಅದು ಯಾರಾದ್ರೂ ಅದು ನಂಬುವ ಮಾತಾ? ಹಾಗಾಗಿಯೇ ಇದು ಸಿನಿಮಾ ವ್ಯವಹಾರ ಅಲ್ಲ. ರಾಧಿಕಾ ಅವರಿಗೆ ಆಪ್ತರಾಗಿರುವ ರಾಜಕಾರಣಿಗಳು ಅವ್ಯವಹಾರದ ಹಣವನ್ನು ಡೆಪಾಸಿಟ್ ಮಾಡಲು ರಾಧಿಕಾ ಅವರ ಅಕೌಂಟ್ ಅನ್ನು ಇಲ್ಲೀಗಲ್ ಆಗಿ ಬಳಸಿಕೊಳ್ಳುತ್ತಿದ್ದಾರಾ ಎಂಬ ಅನುಮಾನ ಮೂಡುತ್ತದೆ. ಹಾಗಾಗಿ ಟಿವಿ ಚಾನೆಲ್ ಗಳ ಮುಂದೆ ರಾಧಿಕಾ ಅದ್ಭುತವಾಗಿ ಅಭಿನಯಿಸಿದ್ದಾರೆ ಎಂದೇ ಇದನ್ನು ವಿಮರ್ಶೆ ಮಾಡಲಾಗುತ್ತಿದೆ.
ಹಾಗಾಗಿ ಈಗ ರಾಧಿಕಾ ಅವರ ಈ ಹಣಕಾಸಿನ ರಾಜಕಾರಣದ ಪರ್ವ ಈಗ ಕುಮಾರಸ್ವಾಮಿ ಅವರ ಮೇಲೆ ನೇರವಾಗಿ ಅನುಮಾನ ಪಡುವಂತಾಗಿದೆ. ಇದಕ್ಕೆ ಪೂರಕವಾಗಿ ರಾಧಿಕಾ ಕುಮಾರಸ್ವಾಮಿ ನನಗೆ ರಾಜಕೀಯ ಸೇರಲು ಮನೆಯಲ್ಲಿ ಒತ್ತಡ ಇದೆ. ರಾಜಕಾಯಕ್ಕೆ ಬಾ ಬಾ ಅಂತ ಕರೆಯುತ್ತಿದ್ದಾರೆ ಅಂತಾರೆ. ಆದರೆ ಅದು ಯಾವ ಮನೆ ಅಂತ ರಾಧಿಕಾ ಹೇಳಿಲ್ಲ. ಆದರೆ ರಾಜಕಾರಣಕ್ಕೆ ಹೋಗು ಅಂದಿದ್ದರೆ ಅದು ಆಕೆಯ ತಾಯಿಯ ಮನೆಯವರು ಹೇಳಿರಬಹುದು ಎಂದುಕೊಳ್ಳಬಹುದಿತ್ತು. ಆದರೆ ಬಾ ಅಂತ ಕರೆದರೆ ಅದು ಈಗಾಗಲೇ ರಾಜಕಾರಣದಲ್ಲಿ ಇರುವವರೇ ಆಗಬೇಕು ಅಲ್ಲವೇ. ಹಾಗಾಗಿ ಈಗ ರಾಜಕಾರಣಕ್ಕೆ ಸೇರಲು ರಾಧಿಕಾ ಕುಮಾರಸ್ವಾಮಿ ಅವರಿಗೆ ನೇರವಾಗಿ ಕುಮಾರಸ್ವಾಮಿ ಅವರಿಂದಲೇ ಆಫರ್ ಮತ್ತು ಒತ್ತಡ ಬರುತ್ತಿದೆಯಾ ಎಂಬ ಅನುಮಾನಗಳೂ ಸಹಜ.
ಅಲ್ಲದೆ ರಾಧಿಕಾ ಕೂಡ ತಮಗೂ ರಾಜಕೀಯದ ಆಸ ಇದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಸದ್ಯಕ್ಕೆ ಸಿನಿಮಾ ಮಾಡುವ ಆಸೆ ಮಾತ್ರ ಇದೆ. ರಾಜಕಾರಣ ಆಮೇಲೆ ನೋಡೋಣ ಅಂತಿದ್ದಾರೆ. ಅದು ಸಹಜ ಬಿಡಿ. ಎಲ್ಲ ಸಿನಿಮಾ ನಟಿಯರ ಬಾಳೂ ಇಷ್ಟೆ. ಚಾರ್ಮ್ ಇರೋವರೆಗೂ ಸಿನಿಮಾರಂಗದಲ್ಲಿ ಸಾಧ್ಯವಾದಷ್ಟು ಹೆಸರು, ಹಣ ಮಾಡದು, ನಂತರ ವಯಸ್ಸಾಗಿ ಮಾರ್ಕೆಟ್ ಇಲ್ಲ ಅಂತಾದಾಗ ರಾಜಕಾರಣದಲ್ಲಿ ದಾಳ ಉರುಳಿಸೋದು ಎಲ್ಲ ಸಿನಿಮಾ ನಟ ನಟಿಯರು ಮಾಡೋ ಕೆಲಸವೇ. ಅದನ್ನೇ ರಾಧಿಕಾ ಕೂಡ ಉಚ್ಚರಿಸಿದ್ದಾರೆ.
ರಾಜಕಾರಣಕ್ಕೆ ರಾಧಿಕಾ ಯಾವಾಗ ಬೇಕಾದರೂ ಬರಬಹುಹು, ಆದರೆ ಸದ್ಯಕ್ಕೆ ಅವರ ತಂದೆಯವರ ಆಪ್ತರಾದ ಸ್ವಾಮಿ ಎಂಬುವವರ ಹಣಕಾಸಿನ ವಿಷಯದಲ್ಲಿ ಅನುಮಾನ ಮೂಡಿಸುವ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಹೊರಬರೋದೇನು ಅವರಿಗೆ ಕಷ್ಟವಾಗಲ್ಲ ಬಿಡಿ. ಚೆಕ್, ಕ್ಯಾಷ್ ಗಳಲ್ಲಿ ಲಂಚ ತಗೊಂಡವರು ರಾಜಾರೋಷವಾಗಿ ಮಂತ್ರಿ, ಮುಖ್ಯಮಂತ್ರಿಗಳಾಗಿರುವ ಕಾಲದಲ್ಲಿ ಕುಮಾರಸ್ವಾಮಿ ಅವರ ಕೃಪಾ ಕಟಾಕ್ಷ ಇರೋ ರಾಧಿಕಾ ಈ ವಿಷಯದಲ್ಲಿ ಸಲೀಸಾಗಿ ಎಸ್ಕೇಪ್ ಆಗುತ್ತಾರೆ. ಈಗೇನಿದ್ದರೂ ರಾಧಿಕಾ ಕುಮಾರಸ್ವಾಮಿ ಅಧಿಕೃತವಾಗಿ ರಾಜಕೀಯ ಪ್ರವೇಶಿಸುತ್ತಾರೆ ಎನ್ನುವುದೊಂದೇ ಈಗ ಉಳಿದಿರುವ ಕುತೂಹಲ. ಆದರೂ ರಾಜಕೀಯ ಸೇರುವ ಮೊದಲೇ ಹಗರಣದಲ್ಲಿ ಅವರ ಹೆಸರು ಕೇಳಿಬಂದಿರೋದು ನೋಡಿದರೆ ಅವರು ಮುಂದೆ ಒಳ್ಳೆಯ ರಾಜಕಾರಣಿ ಆಗಬಹುದು ಅನ್ನೋದು ಮಾತ್ರ ಕುಹಕದ ಮಾತು.

@ಹರಿ ಪರಾಕ್

Be the first to comment

Leave a Reply

Your email address will not be published. Required fields are marked *

Translate »
error: Content is protected !!