ಅಶ್ಲೀಲ ವಿಡಿಯೋ ನಿರ್ಮಾಣ, ಪ್ರಸಾರ ಸಂಬಂಧ ಬಂಧನಕ್ಕೊಳಗಾಗಿರುವ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಮುಂಬೈ ಪೊಲೀಸರು ಗುರುವಾರ ಚಾರ್ಜ್ ಶೀಟ್ ದಾಖಲಿಸಿದ್ದು, ಹಾಟ್‌ಶಾಟ್ಸ್ ಆಪ್ ಮೂಲಕ ಪ್ರತಿದಿನ ಲಕ್ಷಾಂತರ ರೂ. ಹಣವನ್ನು ರಾಜ್ ಕುಂದ್ರಾ ಗಳಿಸುತ್ತಿದ್ದರು ಎಂದು ಪೊಲೀಸರು ಆರೋಪ ಮಾಡಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರು 1467 ಪುಟಗಳ ದೋಷಾರೋಪ ಪಟ್ಟಿಯನ್ನು ಕೋರ್ಟ್ ಗೆ ಸಲ್ಲಿಸಿದ್ದಾರೆ. ಇದರಲ್ಲಿ 43 ಮಂದಿ ಸಾಕ್ಷಿದಾರರ ಹೇಳಿಕೆಗಳು ದಾಖಲಾಗಿವೆ. ರಾಜ್ ಕುಂದ್ರಾ, ರಯಾನ್ ಥೋರ್ಪ್, ಪ್ರದೀಪ್ ಭಕ್ಷಿ ಹಾಗೂ ಇನ್ನೊಬ್ಬರ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಲ್ಲಿಸಲಾಗಿರುವ ಎರಡನೇ ಚಾರ್ಜ್ ಶೀಟ್ ಇದಾಗಿದೆ. 3000ಕ್ಕೂ ಹೆಚ್ಚು ಪುಟಗಳ ದೋಷಾರೋಪ ಪಟ್ಟಿಯನ್ನು ಪೊಲೀಸರು ಈ ಹಿಂದೆ ಕೋರ್ಟ್ ಗೆ ಸಲ್ಲಿಸಿದ್ದರು. ಈ ವೇಳೆ ನಟಿ ಗೆಹನಾ ವಸಿಷ್ಠ ಸೇರಿದಂತೆ ಹಲವರನ್ನು ಈ ಸಂಬಂಧ ಬಂಧಿಸಲಾಗಿತ್ತು.
ಅಶ್ಲೀಲ ಚಿತ್ರ ತಯಾರಿ ಸಂಬಂಧ ಜುಲೈ 19ರಂದು ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ರಾಜ್ ಕುಂದ್ರಾ ಅವರ ಲ್ಯಾಪ್‌ಟಾಪ್, ಮೊಬೈಲ್, ಹಾರ್ಡ್‌ಡಿಸ್ಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ನಡೆಸಿದ್ದರು.
ರಾಜ್ ಕುಂದ್ರಾ ಬಂಧನದ ಬಳಿಕ ಹಲವು ನಟಿಯರು ಕುಂದ್ರಾ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಮಾಡಿದ್ದರು. ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪತ್ನಿ ಶಿಲ್ಪಾ ಶೆಟ್ಟಿ ಪಾತ್ರವಿದೆ ಎನ್ನಲಾಗಿತ್ತಾದರೂ ಮುಂಬೈ ಪೊಲೀಸರು ಶಿಲ್ಪಾ ಶೆಟ್ಟಿಯನ್ನು ಆರೋಪ ಪಟ್ಟಿಗೆ ಸೇರಿಸಿಲ್ಲ.
____

Be the first to comment