ರೈತಹೋರಾಟದ ಕಥೆ “ಕೊಳಗ”

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ರೈತ ಹೋರಾಟದ ಕಥನಗಳು ತೆರೆಮೇಲೆ ಮೂಡಿಬಂದಿವೆ. ಆ ಸಾಲಿಗೆ ಮತ್ತೊಂದು ಚಿತ್ರ ಹೊಸದಾಗಿ ಸೇರ್ಪಡೆಯಾಗುತ್ತಿದೆ. ಅದರ ಹೆಸರು ಕೊಳಗ. ನಾ.ಡಿಸೋಜಾ ಅವರ ಕಾದಂಬರಿ ಆಧರಿಸಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಪ್ರಸನ್ನ ಗೂರಲಕೆರೆ ಸಂಭಾಷಣೆ ರಚಿಸಿ ನಿರ್ದೇಶನ ಮಾಡುತ್ತಿದ್ದಾರೆ.

ನಿರ್ದೇಶಕರ ಪತ್ನಿ ಶ್ರೀಮತಿ ನಿಶಿತಾಗೌಡ ಚಿತ್ರಕಥೆ ಹೆಣೆಯುವುದರ ಜೊತೆಗೆ ಚಿತ್ರದ ನಾಯಕಿಯಾಗೂ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮುಹೂರ್ತ ಕಾರ್ಯಕ್ರಮ ಬೆಂಗಳೂರಿನ ರಾಜರಾಜೇಶ್ವರಿ ನಗರದ ಶ್ರೀ ನಿಮಿಶಾಂಭ ದೇವಸ್ಥಾನದಲ್ಲಿ ನೆರವೇರಿತು. ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್, ಆಯುರ್ವೇದ ವೈದ್ಯರಾದ ಡಾ.ಅಶೋಕ್, ನಿರ್ದೇಶಕ ಎಸ್.ನಾರಾಯಣ್, ಕೂಡ್ಲು ರಾಮಕೃಷ್ಣ, ಅವಿನಾಶ್ ಯು ಶೆಟ್ಟಿ ಹಾಗೂ ಇತರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಿತ್ರತಂಡಕ್ಕೆ ಶುಭ ಹಾರೈಸಿದರು.

ಈ ಚಿತ್ರದಲ್ಲಿ ಪ್ರಮುಖವಾಗಿ ಆರೇಳು ಪಾತ್ರಗಳಿವೆ. ಅದರಲ್ಲೂ ಮೂರು ಪಾತ್ರಗಳು ಇಡೀ ಕಥೆಯ ಕೇಂದ್ರಬಿಂದುವಾಗಿವೆ. ಚಿತ್ರದಲ್ಲಿ ನಟ ಆದಿಲೋಕೇಶ್ ಒಬ್ಬ ಸ್ವಾಮೀಜಿಯ ಪಾತ್ರ ನಿರ್ವಹಿಸುತ್ತಿದ್ದಾರೆ, ಇನ್ನುಳಿದಂತೆ ನಿಶಿತಾಗೌಡ ಹಾಗೂ ನಟ ಕಿಶೋರ್ ಮುಖ್ಯ ಭೂಮಿಕೆಯಲ್ಲಿರುತ್ತಾರೆ. ಈ ಸಂದರ್ಭದಲ್ಲಿ ಎಸ್.ನಾರಾಯಣ್ ಅವರು ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಚಿತ್ರದ ಕಥೆಯ ಕುರಿತಂತೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ಕೊಳಗ ಎನ್ನುವುದು ಹಿಂದಿನ ಕಾಲದಲ್ಲಿ ರೈತಾಪಿ ಜನರು ತಮ್ಮ ಧಾನ್ಯಗಳನ್ನು ಅಳೆಯಲು ಉಪಯೋಗಿಸುತ್ತಿದ್ದ ಒಂದು ಅಳತೆಗೋಲು. ರೈತಾಪಿವರ್ಗ ಹಾಗೂ ಭೂಮಾಲೀಕರ ನಡುವೆ ನಡೆಯುವ ಘರ್ಷಣೆಯೇ ಈ ಕಥೆ.

ಒಂದು ಮಹತ್ತರ ಬದಲಾವಣೆಗೆ ಕೊಳಗ ಹೇಗೆ ಕಾರಣವಾಯಿತೆಂದು ಈ ಕಥೆಯಲ್ಲಿ ಹೇಳಲಾಗಿದೆ ಈ ಚಿತ್ರ ನಾಡಿನ ಜನರಲ್ಲಿ ಒಂದು ಬದಲಾವಣೆ ತರಲಿ ಎಂದು ಶುಭ ಹಾರೈಸಿದರು. ನಂತರ ಮಾತನಾಡಿದ ನಿರ್ದೇಶಕ ಕೂಡ್ಲು ರಾಮಕೃಷ್ಣ ನಾನು ಈವರೆಗೆ 30 ಚಿತ್ರಗಳನ್ನು ನಿರ್ದೇಶಿಸಿದ್ದು ಅದರಲ್ಲಿ 15 ಕಾದಂಬರಿ ಆಧಾರಿತ ಚಿತ್ರಗಳೇ ಆಗಿವೆ. ಆದರೆ ನಾ.ಡಿಸೋಜರ ಕಥೆ ಮಾಡಲಾಗಲಿಲ್ಲವಲ್ಲ ಎಂಬ ಬೇಸರವಿದೆ.

ಈ ಹಿಂದೆ ಕಾಗೋಡು ಸತ್ಯಾಗ್ರಹದ ಬಗ್ಗೆ ಗಿರೀಶ್ ಕಾಸರವಳ್ಳಿ ಅವರು ಒಂದು ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದರು. ಈಗ ಪ್ರಸನ್ನ ಚಲನಚಿತ್ರವನ್ನೇ ಮಾಡುತ್ತಿದ್ದಾರೆ. ಇದು ಆರ್ಡಿನರಿ ಕಾನ್ಸೆಪ್ಟ್ ಅಲ್ಲ, ಪ್ರಸನ್ನ ಏನು ಅಂದುಕೊಂಡಿದ್ದಾರೋ ಅದರಲ್ಲಿ ಯಶ ಸಾಧಿಸಲಿ ಎಂದು ಹೇಳಿದರು.

ನಿರ್ದೇಶಕ ಪ್ರಸನ್ನ ಮಾತನಾಡುತ್ತ ಇಪ್ಪತ್ತು ವರ್ಷಗಳ ಕಾಲ ನಡೆದಂಥ ದೊಡ್ಡ ರೈತ ಹೋರಾಟದ ಕಥನ ಇದು. ನನ್ನ ತಾತ ಕಾಗೋಡು ಹೋರಾಟದಲ್ಲಿ ಭಾಗಿಯಾಗಿದ್ದರು. ಆಗಿನಿಂದಲೂ ಆ ವಿಚಾರಗಳು ನನ್ನ ಮನದಲ್ಲಿದ್ದವು.

ಆಗಿನ ಕಾಲದಲ್ಲಿ ರೈತ ತನ್ನ ಭೂಮಿಯ ಮೇಲೆ ಭಾವನಾತ್ಮಕ ಸಂಬಂಧ ಇಟ್ಟುಕೊಂಡಿದ್ದ, ಇತ್ತೀಚಿನ ದಿನಗಳಲ್ಲಿ ಅದು ಕಡಿಮೆಯಾಗುತ್ತಿದೆ. ಅದನ್ನು ಬೆಳೆಸುವ ಪ್ರಯತ್ನವಾಗಿಯ ಈ ಚಿತ್ರ ಮಾಡುತ್ತಿದ್ದೇನೆ, ಈಗಾಗಲೇ ಚಿತ್ರಕ್ಕಾಗಿ ಒಂದಷ್ಟು ತಯಾರಿ ಮಾಡಿಕೊಂಡಿದ್ದೇನೆ.

ನಾನೀ ಪ್ರಾಜೆಕ್ಟ್ ಮಾಡಬೇಕು ಅಂದುಕೊಂಡಾಗಿನಿಂದ ಅದೇ ನನ್ನನ್ನು ಜೊತೆಗೆ ಕರೆದುಕೊಂಡು ಹೋಗ್ತಾ ಇದೆ. ನೀನಸಂ ಮಂಜು, ಅವಿನಾಶ್ ಸೇರಿದಂತೆ ಇನ್ನೂ ಹಲವರ ಸಲಹೆ, ಸಹಕಾರ ಈ ಚಿತ್ರಕ್ಕಿದೆ ಎಂದು ಹೇಳಿದರು. ಈ ಚಿತ್ರಕ್ಕೆ ರಾಜಗುರು ಅವರ ಸಂಗೀತ ಸಂಯೋಜನೆ, ಸುಜಿತ್ ನಾಯಕ್ ಅವರ ಸಂಕಲನವಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!