ಗುಮ್ಮಟಗಳ ನಗರ ಎಂದೇ ಹೆಸರಾದ ಬಿಜಾಪುರವ(ವಿಜಯಪುರ)ದಲ್ಲಿ ರಾಖಾ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಬಿಜಾಪುರದ ಹಲವಾರು ವಿದ್ಯಾಸಂಸ್ಥೆಗಳ ಮಾಲೀಕರೂ ಆದ ಡಾ.ಕೆ.ಬಿ.ನಾಗೂರ್(ಬಾಬು) ಅವರ ನಿರ್ಮಾಣದ ಚಿತ್ರ ಇದಾಗಿದ್ದು, ಸಾಹಿತಿ, ಸಂಭಾಷಣೆಗಾರ ಮಳವಳ್ಳಿ ಸಾಯಿಕೃಷ್ಣ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶ್ರೀಮಂತ ಖ್ಯಾತಿಯ ನಟ ಕ್ರಾಂತಿ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಅಲ್ಲದೆ ಚಿತ್ರದ ನಾಯಕನಾಗಿ ಅಭಿನಯಿಸುತ್ತಿದ್ದಾರೆ.
ಮಾಧ್ಯಮಗಳು ಬಿಜಾಪುರದ ಶೂಟಿಂಗ್ ಲೊಕೇಶನ್ ಗೆ ಹೋದಾಗ ಎಂ.ಬಿ. ಪಾಟೀಲ್ ರಸ್ತೆಯ ಬಂಗಲೆಯೊಂದರಲ್ಲಿ ರಾಖಾ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಚಿತ್ರದಲ್ಲಿ ಅದು ಶಾಸಕನ ಮನೆ, ನಾಯಕನ ತಂದೆ ಶಾಸಕನ ಬಳಿ ಅಂಗಲಾಚಿ ಬೇಡಿಕೊಳ್ಳುವ ದೃಶ್ಯವದು. ಇಲ್ಲಿ ಶಾಸಕನಾಗಿ ಗಿರೀಶ್ ಜತ್ತಿ ಹಾಗೂ ತಂದೆಯಾಗಿ ಮಂಜುನಾಥ್ ಭಟ್ ಭಾಗವಹಿಸಿದ್ದರು.
ನಂತರ ನಿರ್ಮಾಪಕ ಕೆ.ಬಿ.ನಾಗೂರ್ ಅವರ ಆಯುರ್ವೇದಿಕ್ ಕಾಲೇಜು ಕ್ಯಾಂಪಸ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ ಡಾ.ನಾಗೂರ್, ಕಳೆದ 14ರಿಂದ ಬಿಜಾಪುರದಲ್ಲಿ ಚಿತ್ರೀಕರಣ ಶುರುವಾಗಿದ್ದು, 13 ದಿನಗಳಿಂದಲೂ ನಡೆಯುತ್ತಿರೋ ಶೂಟಿಂಗ್ ನಲ್ಲಿ ಭಾಗವಹಿಸಿದ್ದ ಕಲಾವಿದರೆಲ್ಲ ಖುಷಿಯಾಗಿ ಪಾಲ್ಗೊಂಡಿದ್ದಾರೆಂದು ಹೇಳಿದರು. ನಿಮ್ಮದು ವಿದ್ಯಾಕ್ಷೇತ್ರ, ಸಿನಿಮಾ ಬಗ್ಗೆ ನಿಮಗೆ ಆಸಕ್ತಿ ಹೇಗೆ ಮೂಡಿತು ಎಂಬ ಪ್ರಶ್ನೆಗೆ ಉತ್ತರಿಸಿದ ನಾಗೂರ್, ನನ್ನ ತಂದೆ ಸ್ವಾತಂತ್ರ ಹೋರಾಟಗಾರರು ಅಲ್ಲದೆ ಶಾಸಕರೂ ಆಗಿದ್ದರು. ಜೊತೆಗೆ ಕಲೆಯ ಬಗ್ಗೆ ಆಸಕ್ತಿ ಹೊಂದಿದ್ದ ಅವರು ನಾಟಕ ಅಲ್ಲದೆ 2-3 ಸಿನಿಮಾಗಳಲ್ಲೂ ಅಭಿನಯಿಸಿದ್ದರು. ಅಲ್ಲದೆ ಕ್ರಾಂತಿ ರೈತರ ಕಥೆ ಇರುವ ಶ್ರಿಮಂತ ಚಿತ್ರ ಮಾಡಿದ್ದರು. ಇದೆಲ್ಲವೂ ನಾನೊಂದು ಸಿನಿಮಾ ಮಾಡಲು ಪ್ರೇರೇಪಿಸಿತು. ಜೊತೆಗೆ ಬಿಜಾಪುರದ ಸ್ನೇಹಿತರೆಲ್ಲ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ತಂದೆ- ಮಕ್ಕಳ ಸಂಬಂಧ ಹೇಗಿತ್ತು, ಈಗ ಹೇಗಿದೆ ಅಂತ ಹೇಳೋ ಚಿತ್ರವಿದು.ಜತೆಗೆ ಒಳ್ಳೇ ನಿರ್ದೇಶಕರೂ ಸಿಕ್ಕಿದ್ದಾರೆ. ಒಟ್ಟಿನಲ್ಲಿ ನಮ್ಮ ಬಿಜಾಪುರಕ್ಕೆ ಒಳ್ಳೆ ಹೆಸರು ಬರಬೇಕು ಎಂದು ಹೇಳಿದರು.
ನಂತರ ನಿರ್ದೇಶಕ ಮಳವಳ್ಳಿ ಸಾಯಿಕೃಷ್ಣ ಮಾತನಾಡಿ ಡೈಲಾಗ್ ಬರೆಸಲೆಂದು ಬಂದವರು ಡೈರೆಕ್ಷನ್ ಜಬಾಭ್ದಾರಿ ಒಪ್ಪಿಸಿದರು. ತಂದೆ ತನ್ನ ಮಕ್ಕಳನ್ನು ಹೇಗೆಲ್ಲಾ ಪೋಷಣೆ ಮಾಡ್ತಾರೆ, ಆದರೆ, ಅದೇ ಮಕ್ಕಳು ತಮ್ಮ ಪೋಷಕರನ್ನು ಹೇಗೆ ನೋಡಿಕೊಳ್ತಾರೆ ಅನ್ನೋದು ಚಿತ್ರದಲ್ಲಿದೆ.
ಇಲ್ಲಿ ಕಳೆದ ಹದಿಮೂರು ದಿನಗಳಿಂದ ನಾಯಕನ ಇಂಟ್ರಡಕ್ಷನ್, ಹೀರೋ ಅಡ್ಡ ಶಾಸಕರ ಮನೆ ಸೇರಿದಂತೆ ಚಿತ್ರದ ಹಲವಾರು ಪ್ರಮುಖ ದೃಶ್ಯಗಳ. ಶೂಟಿಂಗ್ ನಡೆಸಿದ್ದೇವೆ. ನಾಯಕನ ತಾಯಿಯಾಗಿ ಹಿರಿಯನಟಿ ಹರಿಣಿ, ತಂದೆಯಾಗಿ ಮಂಜುನಾಥ ಭಟ್, ಶಾಸಕನಾಗಿ ಗಿರೀಶ್ ಜತ್ತಿ ಭಾಗವಹಿಸಿದ್ದರು. ಹಿರಿಯ ನಟಿ ಹರಿಣಿ ಅವರ ಜೊತೆ ಕೆಲಸ ಮಾಡಿದ್ದು ಖುಷಿ ಆಯ್ತು. ತಾಯಿ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ಬಾಗಲಕೋಟೆಯ ದೇವಸ್ಥಾನದಲ್ಲಿ ಶೂಟಿಂಗ್ ಮಾಡಿದ್ದೇವೆ. ಇಲ್ಲಿನ ಜಾಗಗಳು ಬೆಂಗಳೂರಿನ ಯಾವ ಲೊಕೇಶನ್ ಗೂ ಕಮ್ಮಿಯಿಲ್ಲ. ಎರಡನೇ ಹಂತದಲ್ಲಿ ಬೆಂಗಳೂರಿನಲ್ಲಿ ಚಿತ್ರೀಕರಣ ಮುಂದುವರೆಸುತ್ತೇವೆ. ಫ್ಯಾಮಿಲಿ ಸೆಂಟಿಮೆಂಟ್ ಜೊತೆಗೆ ಮಾಸ್ ಗೂ ಚಿತ್ರದಲ್ಲಿ ಹೆಚ್ಚಿನ ಅವಕಾಶವಿದೆ. ನಿರ್ಮಾಪಕ ಡಾ.ನಾಗೂರ್ ಅವರು ಲಾಭ ನಷ್ಟಗಳ ಚಿಂತೆ ಮಾಡದೆ ಸದಭಿರುಚಿಯ ಚಿತ್ರ ನೀಡಬೇಕೆಂಬ ಉದ್ದೇಶ ಇಟ್ಟುಕೊಂಡು ಈ ಸಿನಿಮಾ ಮಾಡ್ತಿದಾರೆ.
ಮಾಸ್ ಮಾದ ಹಾಗೂ ಟೈಗರ್ ಶಿವು ಚಿತ್ರದ ಸಾಹಸ ಸಂಯೋಜನೆ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ಕಥೆ ಇದಾಗಿದ್ದು, ಒಂದು ಪಾತ್ರವಷ್ಟೇ ಬಿಜಾಪುರದಿಂದ ಬರುತ್ತೆ. ಒಟ್ಟು 40 ದಿನಗಳ ಚಿತ್ರೀಕರಣದ ಶೆಡ್ಯೂಲ್ ಹಾಕಿಕೊಂಡಿದ್ದೇವೆ ಎಂದು ಹೇಳಿದರು.
ನಾಯಕ ಕ್ರಾಂತಿ ಮಾತನಾಡಿ ಇದು ಎರಡನೇ ಚಿತ್ರ. ಮಾಸ್ ಶೇಡ್ ಇರೋ ಪಾತ್ರ ಇದಾಗಿದ್ದು, ತನ್ನ ತಂದೆಗೆ ಶಾಸಕನಿಂದ ಆದ ಅವಮಾನಕ್ಕೆ ಮಗ ಹೇಗೆ ತನ್ನ ಬುದ್ದಿವಂತಿಕೆಯಿಂದ ರಿವೆಂಜ್ ತೆಗೆದುಕೊಳ್ಳುತ್ತಾನೆ ಎನ್ನುವುದೇ ಕಥೆ. ಚಿತ್ರದಲ್ಲಿ ಆಕ್ಷನ್ ಗೆ ಹೆಚ್ಚು ಅವಕಾಶವಿದೆ. ಅನ್ನದಾತ ನಿರ್ಮಾಪಕ ನಾಗೂರರ ಸಿನಿಮಾ ಪ್ರೀತಿ ನಮ್ಮನ್ನು ಮೂಕರನ್ನಾಗಿಸಿದೆ. ಕಥೆ ಕೇಳಿದ ಅವರು ಬಜೆಟ್ ಬಗ್ಗೆ ಯೋಚಿಸದೆ, ಫ್ಯಾಮಿಲಿ ಸಂದೇಶವನ್ನು ಜನರಿಗೆ ತಲುಪಿಸಬೇಕೆಂದು ಈ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದಾರೆ ಎಂದು ಹೇಳಿದರು.
ಸಹ ನಿರ್ಮಾಪಕ ಸುರೇಶ್ ಲೋಣಿ ಮಾತನಾಡಿ ಬಿಜಾಪುರದ ಜನರಿಗೆ ಸಿನಿಮಾ ಬಗ್ಗೆ ಅಷ್ಟಾಗಿ ತಿಳಿದಿಲ್ಲ. ಸಿದ್ದೇಶ್ವರ ಆಶ್ರಮದಲ್ಲಿ ಸ್ವಾಮೀಜಿಯವರ ಜೊತೆ ಶ್ರೀಮಂತ ಚಿತ್ರವನ್ನು ನೋಡಿದ್ದೆವು. ಈ ಸಿನಿಮಾದಿಂದ ಜನರಿಗೆ ಒಳ್ಳೆಯ ಸಂದೇಶ ಮುಟ್ಟಲಿದೆ ಎಂದರು.
ಶಿವಾ ಮೂವೀಸ್ ಮೂಲಕ ಡಾ.ಕೆ.ಬಿ. ನಾಗೂರ್(ಬಾಬು) ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ ನಟಿ ಅಮೃತಾ ಚಿತ್ರದ ನಾಯಕಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ನಂತರ ಛಾಯಾಗ್ರಾಹಕ ಆರ್.ಡಿ. ನಾಗಾರ್ಜುನ, ಕಲಾವಿದರಾದ ಗಿರೀಶ್ ಜತ್ತಿ, ಮಂಜುನಾಥ ಭಟ್, ರಾಜೇಂದ್ರ ಗುಗ್ವಾಡ ಮಾತನಾಡಿದರು. ಎಂ.ಎಸ್.ತ್ಯಾಗರಾಜ್ ಅವರ ಸಂಗೀತ, ಮಾಸ್ ಮಾದ, ಟೈಗರ್ ಶಿವು ಅವರ ಸಾಹಸ ಈ ಚಿತ್ರಕ್ಕಿದೆ.
Be the first to comment