ನಿರ್ದೇಶಕ ದಯಾಳ್ ಪದ್ಮನಾಭನ್ ‘ಆ ಕರಾಳ ರಾತ್ರಿ’ ಚಿತ್ರವನ್ನು ತೆರೆಗೆ ತಂದಿದ್ದರು. ‘ಆ ಕರಾಳ ರಾತ್ರಿ’ ನಿರೀಕ್ಷೆಯಂತೆ ಪ್ರೇಕ್ಷಕರ ಗಮನ ಸೆಳೆದು, ಎಲ್ಲಾ ಕಡೆಗಳಿಂದಲೂ ಮೆಚ್ಚುಗೆ ಪಡೆದುಕೊಂಡಿತ್ತು. ಇದೇ ಖುಷಿಯಲ್ಲಿರುವ ದಯಾಳ್ ಆ್ಯಂಡ್ ಟೀಮ್ ಶೀಘ್ರದಲ್ಲಿಯೇ ‘ಪುಟ 109’ ಎಂಬ ಮತ್ತೊಂದು ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ.
ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ಚಿತ್ರತಂಡ, ಚಿತ್ರದ ವಿಶೇಷತೆಗಳ ಬಗ್ಗೆ ಮಾತನಾಡಲು ಪತ್ರಕರ್ತರ ಮುಂದೆ ಬಂದಿತ್ತು. ಸಾಮಾನ್ಯವಾಗಿ ಸಿನಿಮಾವೊಂದು ರಿಲೀಸ್ ಆಗಿ ಸಕ್ಸಸ್ ನಂತರ ಚಿತ್ರತಂಡದವರು ಖುಷಿಯಾಗಿರುತ್ತಾರೆ. ಆದರೆ, ದಯಾಳ್ ಆ್ಯಂಡ್ ಟೀಮ್ ರಿಲೀಸ್ಗೂ ಮುನ್ನವೇ ಖುಷಿಯಾಗಿತ್ತು. ಅದಕ್ಕೆ ಕಾರಣ ‘ಪುಟ 109’ ಸಿನಿಮಾಕ್ಕೆ ಸಿಗುತ್ತಿರುವ ಬಿಗ್ ರೆಸ್ಪಾನ್ಸ್ ಅಂತೆ..! ಈಗಾಗಲೇ ಚಿತ್ರವನ್ನು ವೀಕ್ಷಿಸಿರುವ ನಟ ಸುದೀಪ್, ತೆಲುಗು ಹಾಗೂ ತಮಿಳಿನಲ್ಲಿ ಈ ಚಿತ್ರ ಮಾಡಲು ಆಸಕ್ತಿ ತೋರಿಸಿದ್ದಾರಂತೆ. ಇದರಿಂದ ಸಹಜವಾಗಿಯೇ ನಮಗೆ ಖುಷಿಯಾಗಿದೆ. ಸಿನಿಮಾ ಮೇಲಿನ ವಿಶ್ವಾಸ ಹೆಚ್ಚಿದೆ ಎನ್ನುತ್ತದೆ ಚಿತ್ರತಂಡ.
‘ಪುಟ 109’ ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾವಾಗಿದ್ದು ಒಂದು ಸುತ್ತ ಸಾಗುತ್ತದೆ. ಪುಸ್ತಕದ ಪುಟ 109 ಕಾಣೆಯಾಗಿರುವ ಮೂಲಕ ಕಥೆಗೆ ಹೊಸ ತಿರುವು ಸಿಗಲಿದೆ. ಚಿತ್ರದಲ್ಲಿ ಜೆ.ಕೆ, ನವೀನ್ ಕೃಷ್ಣ ಮತ್ತು ವೈಷ್ಣವಿ ಅವರ ಪಾತ್ರಗಳೆ ಹೈಲೈಟ್. ಚಿತ್ರದಲ್ಲಿ ಒಟ್ಟು 25 ಸನ್ನಿವೇಶಗಳಿದ್ದು, 28 ನಿಮಿಷದಲ್ಲಿ 24 ಸನ್ನಿವೇಶಗಳು ಬಂದು ಹೋದರೆ ಚಿತ್ರದ ಒಂದು ಸನ್ನಿವೇಶ ಬರೋಬ್ಬರಿ 62 ನಿಮಿಷ ನಡೆಯುತ್ತದೆ. 90 ನಿಮಿಷದಲ್ಲಿ ಇಡೀ ಸಿನಿಮಾವನ್ನು ಪ್ರೇಕ್ಷಕರ ಮುಂದೆ ಕಟ್ಟಿಕೊಡಲಾಗಿದೆ ಎಂಬ ಮಾಹಿತಿ ನೀಡುತ್ತಾರೆ ನಿರ್ದೇಶಕ ದಯಾಳ್.
ಕರಾಳ ರಾತ್ರಿ ಚಿತ್ರಕ್ಕೆ ಲೊಕೇಶನ್ ನೋಡಲು ಮೂಡಿಗೆರೆಗೆ ಹೋಗಿದ್ದ ಚಿತ್ರತಂಡ, ಅಲ್ಲಿನ ಬಂಗಲೆ ಒಂದನ್ನು ನೋಡಿ, ಇದು ಅರವಿಂದ್ ಬರೆದ ಕಥೆಗೆ ಸೂಕ್ತವಾಗುತ್ತದೆ ಎಂದು ನಿರ್ಧರಿಸಿ ಚಿತ್ರಕತೆ ಸಿದ್ಧಪಡಿಸಿಕೊಂಡಿತಂತೆ. ಇಡೀ ಸಿನಿಮಾವನ್ನು ಕೇವಲ 10 ದಿನದಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ನವೀನ್ ಕೃಷ್ಣ ಸಂಭಾಷಣೆ ಇದ್ದು, ಕ್ರೇಜಿಮೈಂಡ್ಸ್ ಶ್ರೀ ಸಂಕಲನ, ಗಣೇಶ್ ನಾರಾಯಣ್ ಸಂಗೀತವಿದೆ. ಚಿತ್ರತಂಡದ ಪ್ಲಾನ್ ಪ್ರಕಾರ ನಡೆದರೆ, ಅಕ್ಟೋಬರ್ ಅಂತ್ಯದೊಳಗೆ ‘ಪುಟ 109’ ತೆರೆಗೆ ಬರಲಿದೆ.
Pingback: DevOps outsourcing