ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರ ಮತ್ತೆ ವಿವಾದಕ್ಕೆ ಗುರಿ ಆಗಿದೆ. ಇಂದು ಚಿತ್ರ ಬಿಡುಗಡೆ ಆದರೂ ಕನ್ನಡ ಅವತರಣಿಕೆ ಸಿನಿಪ್ರಿಯರಿಗೆ ಲಭ್ಯವಾಗಿಲ್ಲ ಎಂದು ಸಿನಿಮಾಸಕ್ತರಿಂದ ಆಕ್ರೋಶ ವ್ಯಕ್ತವಾಗಿದೆ.
ಪುಷ್ಪ ಚಿತ್ರದ ಕನ್ನಡ ವರ್ಷನ್ ಬಂದಿಲ್ಲ ಎನ್ನುವ ಮಾತು ಚಿತ್ರಮಂದಿರದ ಮಾಲೀಕರ ಕಡೆಯಿಂದ ಬಂದಿದೆ. ಕನ್ನಡ ಅವತರಣಿಕೆ ಇಲ್ಲದೆ ಇರುವುದನ್ನು ಪ್ರಶ್ನೆ ಮಾಡಲು ಹೋದವರ ಮೇಲೆ ಥಿಯೇಟರ್ ಸಿಬ್ಬಂದಿ ದೌರ್ಜನ್ಯ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಬೆಂಗಳೂರಿನ ಆವಲಹಳ್ಳಿಯ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಬೆಳಗ್ಗೆ 11 ಗಂಟೆಗೆ ಪುಷ್ಪದ ಕನ್ನಡ ವರ್ಷನ್ ರಿಲೀಸ್ ಆಗಬೇಕಿತ್ತು. ಆದರೆ ಕನ್ನಡದಲ್ಲಿ ‘ಪುಷ್ಪ’ ಸಿನಿಮಾ ನೋಡೋಕೆ ಬಂದ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಕನ್ನಡ ಅವತರಣಿಕೆ ಬಂದಿಲ್ಲ. ತೆಲುಗು ನೋಡಿ ಎಂದು ಥಿಯೇಟರ್ ಸಿಬ್ಬಂದಿ ಹೇಳುವ ಜೊತೆಗೆ ದೌರ್ಜನ್ಯ ಮಾಡಿದ್ದಾರೆ ಎಂದು ಪ್ರೇಕ್ಷಕರು ದೂರಿದ್ದಾರೆ.
“ಕನ್ನಡ ವರ್ಷನ್ ಬಂದಿಲ್ಲ. ಬೇಕಾದರೆ ತೆಲುಗು ನೋಡಿ ಎಂದು ಅವಾಜ್ ಹಾಕಿದ್ದಾರೆ. ಒಬ್ಬನಿಗೆ ಹೊಡೆಯಲಾಗಿದೆ. ನನ್ನ ಕಾಲರ್ ಪಟ್ಟಿ ಹಿಡಿದು ಇಲ್ಲಿಂದ ಹೊರಟು ಹೋಗಿ, ಹಣ ಹಿಂದಿರುಗಿಸುತ್ತೇವೆ ಎಂದರು. ನಾವು ಕನ್ನಡದಲ್ಲಿ ಸಿನಿಮಾ ನೋಡೋಕೆ ಬಂದಿದ್ದೇವೆ. ಅದನ್ನು ತೋರಿಸಬೇಕಾಗಿತ್ತು” ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.
ಕರ್ನಾಟಕದ ಹೆಚ್ಚು ಚಿತ್ರಮಂದಿರಗಳಲ್ಲಿ ಕನ್ನಡ ವರ್ಷನ್ಗಿಂತಲೂ ತೆಲುಗು ವರ್ಷನ್ ಅನ್ನು ಬಿಡುಗಡೆ ಮಾಡಲಾಗಿರುವುದು ಕನ್ನಡ ಪ್ರೇಕ್ಷಕರ ಕೋಪಕ್ಕೆ ಈಗಾಗಲೇ ಕಾರಣ ಆಗಿದೆ. ಹಲವರು ಪುಷ್ಪ’ ಚಿತ್ರವನ್ನು ಬಹಿಷ್ಕರಿಸುವಂತೆ ಒತ್ತಾಯ ಮಾಡಿದ್ದಾರೆ. ಟ್ವಿಟರ್ನಲ್ಲಿ #BoycottPushpaInKarnataka ಹ್ಯಾಶ್ ಟ್ಯಾಗ್ ಟ್ರೆಂಡ್ ಆಗುತ್ತಿದೆ.
“ನಾವು ಪುಷ್ಪ ಚಿತ್ರಕ್ಕೆ ಬೆಂಬಲ ನೀಡಿದ್ದಕ್ಕೆ ಕಾರಣ ಕನ್ನಡ. ಆದರೆ ಈಗ ತೆಲುಗು ವರ್ಷನ್ ರಾಜ್ಯದಲ್ಲಿ ರಾರಾಜಿಸುತ್ತಿದೆ’ ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ರಶ್ಮಿಕ ಮಂದಣ್ಣ ಅವರು ಕನ್ನಡ ಭಾಷೆಯಲ್ಲಿ ಡಬ್ಬಿಂಗ್ ಮಾಡದ ಬಗ್ಗೆ ಈ ಹಿಂದೆ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ರಶ್ಮಿಕಾ ಮಂದಣ್ಣ ಅವರು ಪತ್ರಿಕಾಗೋಷ್ಠಿಯಲ್ಲಿ, ಸಮಯದ ಅಭಾವದ ಕಾರಣ ಕನ್ನಡದಲ್ಲಿ ಡಬ್ಬಿಂಗ್ ಮಾಡಿಲ್ಲ. ಮುಂದಿನ ಭಾಗದಲ್ಲಿ ನಾನೇ ಡಬ್ಬಿಂಗ್ ಮಾಡುತ್ತೇನೆ ಎಂದು ಹೇಳಿದ್ದರು.
ಪುಷ್ಪ ಚಿತ್ರಕ್ಕೆ ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಕನ್ನಡದ ನಟ ಡಾಲಿ ಧನಂಜಯ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ತೆಲುಗಿನಲ್ಲಿ ನಿರ್ಮಾಣವಾಗಿದ್ದು ಕನ್ನಡ, ಹಿಂದಿ, ಮಲಯಾಳಂ, ತಮಿಳು ಭಾಷೆಗಳಿಗೆ ಡಬ್ ಆಗಿ ಇಂದು ತೆರೆ ಕಂಡಿದೆ.
___
Be the first to comment