“ಪುರುಷೋತ್ತಮ’ ಚಿತ್ರದ ಧ್ವನಿಸಾಂದ್ರಿಕೆ ಬಿಡುಗಡೆ

ಬಾಡಿ ಬಿಲ್ಡರ್ ಆಗಿ ಹೆಸರು ಮಾಡಿರುವ ಜಿಮ್‌ ರವಿ ಮೊದಲ ಬಾರಿಗೆ ನಾಯಕ ನಟರಾಗಿ ನಟಿಸಿರುವ “ಪುರುಷೋತ್ತಮ’ ಚಿತ್ರದ ಧ್ವನಿಸಾಂದ್ರಿಕೆ ಅದ್ದೂರಿಯಾಗಿ ಬಿಡುಗಡೆಯಾಯಿತು.

ಧ್ವನಿಸಾಂದ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಮ್ ರವಿ, “ನಾಯಕನಿಂದ ಒದೆ ತಿನ್ನಿಸಿಕೊಳ್ಳುವ ದೃಶ್ಯಗಳನ್ನು ನೋಡುತ್ತಿದ್ದ ಜನರು ನೀವು ಯಾವಾಗ ಹೀರೋ ಆಗೋದು ಎಂದು ಹಲವು ವರ್ಷದಿಂದ ಕೇಳುತ್ತಿದ್ದರು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಚಿತ್ರದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಅಂಶವಿದೆ. ಚಿತ್ರದಲ್ಲಿ ಸಾಮಾನ್ಯವಾಗಿ ಹೆಂಡತಿಯನ್ನು ಬೈಯ್ಯುವ ಹಾಡುಗ‌ಳಿರುತ್ತವೆ. ಆದರೆ ನಮ್ಮ ಸಿನಿಮಾದಲ್ಲಿ ಹೆಂಡತಿಯ ಗುಣಗಾನ ಮಾಡುವ ಹಾಡಿದ್ದು, ಇದು ತುಂಬಾ ಚೆನ್ನಾಗಿ ಮೂಡಿಬಂದಿದೆ. ಚಿತ್ರವನ್ನು ಶೀಘ್ರ ಬಿಡುಗಡೆ ಮಾಡಲಾಗುವುದು” ಎಂದು ತಿಳಿಸಿದರು.

“ಆಡಿಯೋ ಹಕ್ಕನ್ನು ಮಾರಲು ಹೋದಾಗ ಕಹಿ ಅನುಭವಗಳು ಆಗಿವೆ. ಹೀಗಾಗಿ ಜಿಮ್ ರವಿ ಅಫೀಶಿಯಲ್ ಯೂಟ್ಯೂಬ್‌ದಲ್ಲಿ ಹಾಡುಗಳನ್ನು ಬಿಡುಗಡೆ ಮಾಡಿದ್ದೇನೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಾಯಕಿ ಅಪೂರ್ವ, ಸಂಗೀತ ಸಂಯೋಜಕ ಶ್ರೀಧರ್‌ ಸಂಭ್ರಮ್, ನಟಿ ನಿವೇದಿತಾ, ನೃತ್ಯ ನಿರ್ದೇಶಕ ಕಲೈ, ಛಾಯಾಗ್ರಾಹಕ ಕುಮಾರ್ ತಮ್ಮ ಸಂತಸವನ್ನು ಹಂಚಿಕೊಂಡರು.

ಈ ವೇಳೆ ಅರಗಣಿ ಸಂಸ್ಥೆಯ ಮಾಲೀಕ ಟಿ.ವೆಂಕಟೇಶ್, ಒಗ್ಗರಣೆ ಡಬ್ಬಿ ಮುರಳಿ, ಕಾರ್ಪೋರೇಟರ್ ಮೋಹನ್‌ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಕಳೆದ 3 ದಶಕದಿಂದ 70 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಜಿಮ್‌ ತರಬೇತಿ ನೀಡಿರುವ ರವಿ, “ರವೀಸ್‌ ಜಿಮ್‌ ಪ್ರೊಡಕ್ಷನ್ಸ್‌’ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದು ಪುರುಷೋತ್ತಮ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಚಿತ್ರದ ಎಲ್ಲಾ ಕೆಲಸಗಳು ಮುಗಿದಿದ್ದು, ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ.
ಎಸ್‌.ವಿ ಅಮರನಾಥ್‌ ಅವರು “ಪುರುಷೋತ್ತಮ’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವ ಜೊತೆಗೆ ನಿರ್ದೇಶನ ಮಾಡಿದ್ದಾರೆ. ಶ್ರೀಧರ್‌ ವಿ. ಸಂಭ್ರಮ್‌ ಸಂಗೀತ ಸಂಯೋಜಿಸಿದ್ದಾರೆ. ನಾಯಕಿ ಆಗಿ ಅಪೂರ್ವ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ.

 

 

 

 

 

Be the first to comment

Leave a Reply

Your email address will not be published. Required fields are marked *

Translate »
error: Content is protected !!