ಡಿ.6ಕ್ಕೆ ಅಪ್ಪು ಕನಸಿನ ಡಾಕ್ಯುಮೆಂಟರಿಯ ಟೈಟಲ್​ ಟೀಸರ್ ಲಾಂಚ್​

ಪುನೀತ್ ರಾಜ್ ಕುಮಾರ್ ಅವರ ಕನಸಾದ ‘ವೈಲ್ಡ್​ ಕರ್ನಾಟಕ’ ಡಾಕ್ಯುಮೆಂಟರಿಯ ಟೈಟಲ್​ ಟೀಸರ್ ಲಾಂಚ್​ ಡಿಸೆಂಬರ್​ 6ಕ್ಕೆ ನಡೆಯಲಿದೆ.

ಈ ಬಗ್ಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಟ್ವೀಟ್ ಮಾಡಿದ್ದಾರೆ. ‘ಅಪ್ಪು ಅವರ ಅಮೋಘವಾದ ಕನಸಿನ ಪಯಣ. ಹಿಂದೆಂದೂ ಕಾಣದ ರೋಮಾಂಚಕ ಅನುಭವ’ ಎಂದು ಟ್ವೀಟ್ ನಲ್ಲಿ ಅವರು ಬರೆದಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರು ಅಮೋಘ ವರ್ಷ ಅವರ ಜೊತೆ ಸೇರಿ ‘ವೈಲ್ಡ್​ ಕರ್ನಾಟಕ’ ಎಂಬ ಡಾಕ್ಯುಮೆಂಟರಿ ಸಿದ್ದಪಡಿಸಿದ್ದರು. ಅದಕ್ಕೆ ಗಂಧದ ಗುಡಿ ಎಂದು ಹೆಸರನ್ನು ಕೂಡ ಇಟ್ಟಿದ್ದರು.​ ಇದನ್ನು ರಾಜ್ಯದ ಹಲವು ಸ್ಥಳಗಳಲ್ಲಿ ಶೂಟ್ ಮಾಡಲಾಗಿತ್ತು. ಇದರಲ್ಲಿ ಪುನೀತ್​ ಕೂಡ ಕಾಣಿಸಿಕೊಂಡಿದ್ದಾರೆ. ಇದರ ಟೈಟಲ್​ ಲಾಂಚ್​ ಡಿ.6ರಂದು ಆಗಲಿದೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಕಳೆದ ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಾಕ್ಯುಮೆಂಟರಿಯ ಟೀಸರ್ ಬಿಡುಗಡೆ ಮಾಡಬೇಕಿತ್ತು. ಆದರೆ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ ಅಕ್ಟೋಬರ್ 29ರಂದು ಹೃದಯಾಘಾತದಿಂದ ನಿಧನರಾದರು.

ಈ ಮುನ್ನ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್  ಅವರು, ” ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ. ನವೆಂಬರ್​ 1ಕ್ಕಾಗಿ ಕಾಯಿರಿ’ ಎಂದು ಟ್ವೀಟ್ ಮಾಡಿದ್ದರು.

ಈಗ ‘ವೈಲ್ಡ್​ ಕರ್ನಾಟಕ’ ಡಾಕ್ಯುಮೆಂಟರಿ ಬಿಡುಗಡೆ ಬಗ್ಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಮಹತ್ವದ ಘೋಷಣೆ ಮಾಡಿದ್ದಾರೆ. ಇದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಈ ಬಗ್ಗೆ ಅಪ್ಪು ಅಭಿಮಾನಿಗಳು ಸಂತಸ ಪಟ್ಟಿದ್ದಾರೆ. ಅಪ್ಪು ಅವರ ಆಸೆ ನೆರವೇರುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!