‘ಜೇಮ್ಸ್’ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ಅಭಿನಯಿಸುವ ಮೂಲಕ ದೊಡ್ಮನೆ ಅಭಿಮಾನಿಗಳಿಗೆ ತೆರೆಯ ಮೇಲೆ ಮೂರು ಸಹೋದರರನ್ನು ನೋಡುವ ಅವಕಾಶ ಸಿಕ್ಕಿದೆ.
ಬಹುನಿರೀಕ್ಷಿತ ಜೇಮ್ಸ್ ಇಂದು ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬದಂದೇ ಬಿಡುಗಡೆ ಆಗಿದೆ. ಚಿತ್ರದಲ್ಲಿ ಮೂವರು ನಟಿಸಿದ್ದರೂ, ಮೂವರು ಅಣ್ಣ-ತಮ್ಮಂದಿರು ಜೊತೆಯಾಗಿ ಒಂದೇ ದೃಶ್ಯದಲ್ಲಿ ತೆರೆ ಮೇಲೆ ಕಾಣಿಸಿಕೊಂಡಿಲ್ಲ.
ಸಿನಿಮಾದಲ್ಲಿ ಇಂಟರ್ವೆಲ್ ಬಳಿಕ ಶಿವಣ್ಣ, ರಾಘಣ್ಣ ಕಾಣಿಸಿಕೊಂಡಿದ್ದಾರೆ. ಶಿವರಾಜ್ ಕುಮಾರ್ ಸೈನ್ಯಾಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಆಶ್ರಮದ ಮುಖ್ಯ ಗುರುವಿನ ಪಾತ್ರದಲ್ಲಿ ರಾಘವೇಂದ್ರ ರಾಜ್ಕುಮಾರ್ ನಟಿಸಿದ್ದಾರೆ. ರಾಘವೇಂದ್ರ ರಾಜ್ಕುಮಾರ್ ಅವರಿಗೆ ಸಿನಿಮಾದಲ್ಲಿ ಹೆಚ್ಚಿನ ಸಂಭಾಷಣೆಗಳಿಲ್ಲ.
ಜೇಮ್ಸ್’ ಸಿನಿಮಾ ಶೂಟಿಂಗ್ ಮಾಡುವಾಗ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್ ಅವರ ಪಾತ್ರ ಇರಲಿಲ್ಲ. ಆದರೆ ಪುನೀತ್ ನಿಧನದ ಬಳಿಕ ಇವರಿಬ್ಬರ ಪಾತ್ರಗಳನ್ನು ಸೃಷ್ಟಿಸಲಾಗಿದೆ. ಕತೆಗೆ ಹೊಂದಿಕೊಳ್ಳುವಂತೆ ಜಾಣತನದಿಂದ ದೃಶ್ಯ ಕಟ್ಟುವಲ್ಲಿ ನಿರ್ದೇಶಕ ಚೇತನ್ ಯಶಸ್ವಿ ಆಗಿದ್ದಾರೆ.
ಅತಿವೃಷ್ಟಿಯಲ್ಲಿ ಸಂತೋಶ್ (ಪುನೀತ್) ಸೇರಿದಂತೆ ಕೆಲವು ಬಾಲಕರು ತಮ್ಮ ಪೋಷಕರನ್ನು ಕಳೆದುಕೊಂಡಿರುತ್ತಾರೆ. ಎಲ್ಲರೂ ಗಂಜಿ ಕೇಂದ್ರದಲ್ಲಿ ವಾಸ್ತವ್ಯ ಹೂಡಿರುತ್ತಾರೆ. ಅತಿವೃಷ್ಟಿಯಲ್ಲಿ ಸಿಲುಕಿದವರಿಗೆ ನೆರವಾಗುವ ಸೈನ್ಯದ ಗುಂಪಿನ ಮುಖ್ಯಸ್ಥನ ಪಾತ್ರದಲ್ಲಿ ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದಾರೆ.
ಶಿವಣ್ಣ ಸಂತ್ರಸ್ತ ಮಕ್ಕಳನ್ನು ಕೂರಿಸಿಕೊಂಡು ಹೇಳುವ “ಯಾರ ಮೇಲೆ ಪ್ರೀತಿ ಹೆಚ್ಚು ಇರುತ್ತೋ, ಅವರನ್ನು ಆ ದೇವರು ಬೇಗ ಕರೆದುಕೊಂಡು ಬಿಡುತ್ತಾರೆ” ಎನ್ನುವ ಸಂಭಾಷಣೆ ಪ್ರೇಕ್ಷಕನ ಹೃದಯ ಕರಗಿಸಿ ಪುನೀತ್ ಹಠಾತ್ ನಿಧನವನ್ನು ನೆನಪು ಮಾಡುತ್ತದೆ.
ಸಿನಿಮಾದಲ್ಲಿ ಮೂವರು ಸಹೋದರರು ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಸಂತಸ ನೀಡುತ್ತಿದೆ.
___

Be the first to comment