ಭರ್ತಿ11 ವರ್ಷಗಳ ನಂತರ ಪುನೀತ್ ರಾಜ್ ಕುಮಾರ್ ಮತ್ತು ಜಾಕೋಬ್ ವರ್ಗೀಸ್ ಮತ್ತೆ ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಬ್ಯಾನರ್ ನಲ್ಲಿ ಸಿನಿಮಾ ತಯಾರಾಗಲಿದೆ. ಪುನೀತ್ ಅವರ ಕೈಯಲ್ಲಿರುವ ಎಲ್ಲಾ ಸಿನಿಮಾಗಳ ಶೂಟಿಂಗ್ ಮುಗಿದ ನಂತರ ಹೊಸ ಸಿನಿಮಾಕ್ಕೆ ಈ ಜೋಡಿ ಕೈ ಹಾಕಲಿದೆ ಎಂದು ತಿಳಿದು ಬಂದಿದೆ.
ಹೊಸ ಸಿನಿಮಾ ತಯಾರಿ ಸಂಬಂಧ ಇಬ್ಬರು ಚರ್ಚಿಸಿದ್ದಾರೆ. ನಿರ್ದೇಶಕ ಜಾಕೋಬ್ ವರ್ಗೀಸ್ ಕಲಾವಿದರು ಮತ್ತು ತಾಂತ್ರಿಕ ಸಿಬ್ಬಂದಿ ಆಯ್ಕೆಯಲ್ಲಿ ನಿರತರಾಗಿದ್ದಾರೆ. 2022ರ ಫೆಬ್ರವರಿಯಲ್ಲಿ ಶೂಟಿಂಗ್ ಆರಂಭಿಸಲು ಚಿತ್ರತಂಡ ಯೋಜಿಸಿದ್ದು, ಶೀಘ್ರದಲ್ಲೇ ಟೈಟಲ್ ಘೋಷಿಸಲಾಗುವುದು ಎಂದು ತಿಳಿದು ಬಂದಿದೆ.
ಸದ್ಯ ಪುನೀತ್ ರಾಜ್ ಕುಮಾರ್ ಅವರು ಚೇತನ್ ಕುಮಾರ್ ಅವರ ಜೇಮ್ಸ್, ಪವನ್ ಕುಮಾರ್ ಅವರ ದ್ವಿತ್ವದಲ್ಲಿ ನಟಿಸುತ್ತಿದ್ದಾರೆ. ಅವರು ದಿನಕರ್ ತೂಗುದೀಪ್ ಹಾಗೂ ಸಂತೋಷ್ ಆನಂದರಾಮ್ ನಿರ್ದೇಶನದ ಸಿನಿಮಾಗಳಿಗೆ ಸಹಿ ಹಾಕಿದ್ದಾರೆ.
2010 ರಲ್ಲಿ ತೆರೆಕಂಡ ಪೃಥ್ವಿ ಸಿನಿಮಾವನ್ನು ಜಾಕೋಬ್ ವರ್ಗೀಸ್ ನಿರ್ದೇಶಿಸಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಗಣಿ ಮಾಫಿಯಾ ವಿರುದ್ಧ ಹೋರಾಡುವ ಜಿಲ್ಲಾಧಿಕಾರಿ ಆಗಿ ನಟನೆ ಮಾಡಿದ್ದರು. ಈ ಚಿತ್ರ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು.
Be the first to comment