ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕನಸಾದ ‘ಗಂಧದ ಗುಡಿ’ ಡಾಕ್ಯುಮೆಂಟರಿಯ ಟೈಟಲ್ ಟೀಸರ್ ಇಂದು ಲಾಂಚ್ ಆಗಿದೆ. ವನ್ಯಮೃಗ, ಕಾಡು ಕುರಿತ ಈ ಡಾಕ್ಯುಮೆಂಟರಿ 2022 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಅಕಾಲಿಕವಾಗಿ ಅಗಲಿದ ಪುನೀತ್ ಅವರ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಹೆಜ್ಜೆ ಇಟ್ಟಿದ್ದಾರೆ. ಇಂದು ‘ವೈಲ್ಡ್ ಕರ್ನಾಟಕ’ ಡಾಕ್ಯುಮೆಂಟರಿಯ ಟೈಟಲ್ ಅನಾವರಣ ಮಾಡಿದ್ದಾರೆ.
ಟೀಸರ್ ನಲ್ಲಿ ಅಪ್ಪು ಅವರು ಕರ್ನಾಟಕದ ಅರಣ್ಯದ ಒಳಗೆ ಹೋಗಿ ಕೈಗೊಂಡಿರುವ ಸಾಹಸಗಳು ಅನಾವರಣ ಆಗಿದೆ. ಇವರ ಜೊತೆ ನಿರ್ದೇಶಕ ಅಮೋಘವರ್ಷ ಜೊತೆಯಾಗಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಗಮನ ಸೆಳೆಯುತ್ತದೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಇದನ್ನು ನಿರ್ಮಾಣ ಮಾಡಿದ್ದಾರೆ. ಡಿಒಪಿ ಪ್ರತೀಕ್ ಶೆಟ್ಟಿ ಅವರದ್ದು ಆಗಿದೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಕಳೆದ ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಾಕ್ಯುಮೆಂಟರಿಯ ಟೀಸರ್ ಬಿಡುಗಡೆ ಮಾಡಬೇಕಿತ್ತು. ಆದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕ್ಟೋಬರ್ 29ರಂದು ಹೃದಯಾಘಾತದಿಂದ ನಿಧನರಾದರು.
ಈ ಮುನ್ನ ಅವರು, ” ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ. ನವೆಂಬರ್ 1ಕ್ಕಾಗಿ ಕಾಯಿರಿ’ ಎಂದು ಟ್ವೀಟ್ ಮಾಡಿದ್ದರು.
ಪುನೀತ್ ರಾಜ್ ಕುಮಾರ್ ಅವರು ತಮ್ಮ ಕನಸಿನ ವೈಲ್ಡ್ ಕರ್ನಾಟಕ’ ಡಾಕ್ಯುಮೆಂಟರಿಯನ್ನು ಅಮೋಘ ವರ್ಷ ಅವರ ಜೊತೆ ಸೇರಿ ಸಿದ್ದಪಡಿಸಿದ್ದರು. ಆಗಲೇ ಅದಕ್ಕೆ ಗಂಧದ ಗುಡಿ ಎಂದು ಹೆಸರನ್ನು ಕೂಡ ಇಟ್ಟಿದ್ದರು. ಇದನ್ನು ರಾಜ್ಯದ ಹಲವು ಸ್ಥಳಗಳಲ್ಲಿ ಶೂಟ್ ಮಾಡಲಾಗಿತ್ತು. ಇದರಲ್ಲಿ ಪುನೀತ್ ಕೂಡ ಕಾಣಿಸಿಕೊಂಡಿದ್ದಾರೆ.
ಈಗ ಡಾಕ್ಯುಮೆಂಟರಿ ಟೈಟಲ್ ಬಿಡುಗಡೆ ಆಗಿರುವುದು ಅಪ್ಪು ಅಭಿಮಾನಿಗಳಿಗೆ ಸಂತಸ ತಂದಿದೆ. ಅಭಿಮಾನಿಗಳು ಅಪ್ಪು ಅವರ ಆಸೆ ನೇರವೇರುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಡಾಕ್ಯುಮೆಂಟರಿಯನ್ನು ದೊಡ್ಡ ತೆರೆಯ ಮೇಲೆ ನೋಡಲು ಅಭಿಮಾನಿಗಳು, ವನ್ಯಜೀವಿ ಪ್ರೇಮಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ.
__
Be the first to comment