ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಕೋವಿಡ್ ನಿಯಮಾವಳಿಯಿಂದ ಕನ್ನಡ ಚಿತ್ರರಂಗ ಆತಂಕಕ್ಕೆ ಒಳಗಾಗಿದೆ.
ಡಿಸೆಂಬರ್ 28 ರಿಂದ ಜನವರಿ 7ರವರೆಗೆ 10 ದಿನಗಳ ಕಾಲ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಸರಕಾರ ಈಗಾಗಲೇ ಹೇಳಿದೆ. ಹೊಟೇಲ್, ಪಬ್, ಕ್ಲಬ್‌ಗಳಿಗೆ ಶೇ.50ರಷ್ಟು ನಿರ್ಬಂಧ ವಿಧಿಸಲಾಗಿದೆ. ಚಿತ್ರಮಂದಿರಗಳಿಗೂ ಈ ನಿಯಮ ಮುಂದೆ ಅನ್ವಯ ಆಗಬಹುದೇ ಎನ್ನುವ ಆತಂಕ ಚಿತ್ರರಂಗವನ್ನು ಕಾಡಿದೆ.
ಈಗಾಗಲೇ ನೈಟ್ ಕರ್ಪ್ಯೂ ಬಗ್ಗೆ ಸರಕಾರ ಪ್ರಸ್ತಾಪ ಮಾಡಿದ್ದು, ಥಿಯೇಟರ್ ಗಳಲ್ಲಿ ಅನಿವಾರ್ಯವಾಗಿ ನೈಟ್ ಶೋಗಳನ್ನು ಕ್ಯಾನ್ಸಲ್ ಮಾಡಬೇಕಾಗಿ ಬಂದಿದೆ. ಹೊಸ ನಿಯಮದ ಪ್ರಕಾರ, ಡಿಸೆಂಬರ್ 28 ರಿಂದ 10 ದಿನಗಳ ಕಾಲ ನೈಟ್ ಶೋಗಳು ಕ್ಯಾನ್ಸಲ್ ಆಗಬೇಕಿದೆ. ಮುಂದಿನ ದಿನಗಳಲ್ಲಿ ಶೇ. 50 ಸೀಟು ಸಾಮರ್ಥ್ಯ ಜಾರಿ ಮಾಡುವ ಬಗ್ಗೆ ಚಿತ್ರ ನಿರ್ಮಾಪಕರಲ್ಲಿ ಭಯ ಆವರಿಸಿದೆ.
ಮುಂದಿನ ದಿನಗಳಲ್ಲಿ ಸಾಲು ಸಾಲು ಕನ್ನಡ ಸಿನಿಮಾಗಳು ಬಿಡುಗಡೆಯಾಗಲಿದ್ದು, ನಿರ್ಮಾಪಕರಿಗೆ ಆತಂಕ ಹೆಚ್ಚಿದೆ. ಕಳೆದ ವಾರ ಬಿಡುಗಡೆಯಾದ ಬಡವ ರಾಸ್ಕಲ್ ಹಾಗೂ ರೈಡರ್ ಚಿತ್ರಗಳು ಚಿತ್ರಮಂದಿರದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿವೆ.
ಡಿಸೆಂಬರ್ 31ರಂದು ರಚಿತಾ ರಾಮ್ ,ಅಜಯ್ ರಾವ್ ನಟನೆಯ ‘ಲವ್ ಯು ರಚ್ಚು’, ಪ್ರಜ್ವಲ್ ದೇವರಾಜ್ ನಟನೆಯ ‘ಅರ್ಜುನ್ ಗೌಡ’, ದಿಗಂತ್ ನಟನೆಯ ‘ಹುಟ್ಟುಹಬ್ಬದ ಶುಭಾಶಯಗಳು’ , ಯೋಗಿ ನಟನೆಯ ಒಂಬತ್ತನೇ ದಿಕ್ಕು ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ.
ಚಿತ್ರಗಳ ಗಳಿಕೆಯ ದೃಷ್ಟಿಯಿಂದ ಸರ್ಕಾರದ ನಿಯಮಾವಳಿಯಲ್ಲಿ ಯಾವುದೇ ಬದಲಾವಣೆ ಆಗದೆ ಇರಲಿ ಎಂದು ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರು ಆಶಿಸಿದ್ದಾರೆ.
___
Be the first to comment