ದರ್ಶನ್ ವಿರುದ್ಧ ರೌಡಿ ಶೀಟ್ ಓಪನ್?

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ದರ್ಶನ್ ವಿರುದ್ಧ ರೌಡಿ ಶೀಟ್ ತೆರೆಯಲು ಹಿರಿಯ ಪೊಲೀಸರೊಟ್ಟಿಗೆ ಚರ್ಚಿಸಿ ನಿರ್ಣಯಿಸುವುದಾಗಿ  ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ದರ್ಶನ್ ವಿರುದ್ಧ ದಾಖಲಾಗಿರುವ ಈ ಹಿಂದಿನ ಪ್ರಕರಣಗಳು, ದರ್ಶನ್​ರ ಸಾಮಾಜಿಕ ವ್ಯಕ್ತಿತ್ವ  ಪರಿಗಣಿಸಿ ರೌಡಿ ಶೀಟ್ ತೆರೆಯುವ ಬೇಕೆನ್ನುವ ಒತ್ತಾಯ ಕೇಳಿ ಬರುತ್ತಿದೆ. ಯಾವುದೇ ವ್ಯಕ್ತಿ ವಿರುದ್ಧ ರೌಡಿ ಶೀಟ್ ತೆರೆಯಲು ಪೊಲೀಸರು ಅನುಸರಿಸಬೇಕಾದ ಮಾನದಂಡಗಳೇನು? ರೌಡಿ ಶೀಟ್ ತೆರೆದರೆ ದರ್ಶನ್ ಎದುರಿಸಬೇಕಾದ ಸಮಸ್ಯೆಗಳ ಮಾಹಿತಿ ಇಲ್ಲಿದೆ.

ಪೊಲೀಸರು ಕೆಲವು ಮಾನದಂಡಗಳನ್ನು ಪಾಲಿಸಿಯೇ ರೌಡಿ ಶೀಟ್ ತೆರೆಯಬೇಕಾಗಿರುತ್ತದೆ. ವ್ಯಕ್ತಿಯೊಬ್ಬ ಸರಣಿ ಅಪರಾಧ ಪ್ರಕ್ರಿಯೆಗಳಲ್ಲಿ ಭಾಗಿಯಾಗಿದ್ದರೆ, ಆತ ಮಾಡಿದ್ದಾನೆ ಎನ್ನಲಾಗುತ್ತಿರುವ ಕೃತ್ಯಗಳಿಗೆ ಪೊಟಿನ್ಶಿಯಲ್ ಎವಿಡೆನ್ಸ್​ಗಳಿದ್ದರೆ, ಗಲಭೆ, ಹಲ್ಲೆ ಇನ್ನಿತರೆ ಮಾದರಿಯ ದೂರುಗಳು ದಾಖಲಾಗಿ ಎನ್​ಸಿಆರ್​ಗಳು ದಾಖಲಾಗಿದ್ದರೆ, ಆ ವ್ಯಕ್ತಿ ಸಮಾಜಕ್ಕೆ ಮಾರಕ ಎಂದು ಗುರುತಿಸಿ ಆತನ ವಿರುದ್ಧ ಪೊಲೀಸರು ರೌಡಿ ಶೀಟ್ ತೆರೆಯಬಹುದು.

ವ್ಯಕ್ತಿಯೊಬ್ಬ ಈ ಹಿಂದೆ ಮಾಡಿದ ಅಪರಾಧಗಳು ನ್ಯಾಯಾಲಯದಲ್ಲಿ ಸಾಭೀತಾಗದೇ ಇದ್ದಾಗಲೂ ಆತನ ಮೇಲಿರುವ ಆರೋಪಗಳು, ದೂರುಗಳನ್ನು ಆಧರಿಸಿ  ಪೊಲೀಸರು ರೌಡಿ ಶೀಟ್ ತೆರೆಯಬಹುದು. ಸಾಮಾನ್ಯವಾಗಿ, ದರೋಡೆ, ಕೊಲೆ,  ಹಲ್ಲೆ, ಅಪಹರಣ, ಅತ್ಯಾಚಾರ ಇಂಥ ಪ್ರಕರಣಗಳಲ್ಲಿ ಹೆಸರು ಕೇಳಿ ಬರುವ ವ್ಯಕ್ತಿಗಳ ವಿರುದ್ಧ ಪೊಲೀಸರು ರೌಡಿ ಶೀಟ್ ತೆರೆಯುತ್ತಾರೆ. ಕೇವಲ ಎನ್​ಸಿಆರ್ ನ್ನು ಆಧರಿಸಿಯೂ ರೌಡಿ ಶೀಟ್ ತೆರೆದ ಉದಾಹರಣೆಗಳು ರಾಜ್ಯದಲ್ಲಿವೆ.

”ದರ್ಶನ್ ಮೇಲೆ ಈಗಾಗಲೇ ಹಲ್ಲೆ ಪ್ರಕರಣ ದಾಖಲಾಗಿದೆ. ಕಾನೂನು ಮೀರಿ ವರ್ತಿಸಿದ ಘಟನೆಗಳು ಹಲವು ಬಾರಿ ವರದಿಯಾಗಿವೆ. ಅವರ ಸಹಚರರ ಕೆಲವರ ಮೇಲೂ ಕೆಲವು ಕ್ರಿಮಿನಲ್ ಮೊಕದ್ದಮೆಗಳಿವೆ. ಅವರು ಮಾಧ್ಯಮಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ನೀಡಿರುವ ರೌಡಿತನದ ಹೇಳಿಕೆಗಳು, ಹಿಂಸೆಗೆ ಪ್ರೇರೇಪಿಸುವ, ಹಿಂಸೆಗೆ ಇಳಿಯಬಲ್ಲೆ ಎಂಬರ್ಥ ನೀಡಿ ಆಡಿರುವ ಮಾತುಗಳನ್ನು ಪರಿಗಣಿಸಬಹುದು. ದರ್ಶನ್ ಮೇಲೆ ಸರಣಿ ಆರೋಪಗಳು ಕೇಳಿ ಬರುತ್ತಿರುವ ಕಾರಣ ಅವರನ್ನು ಸೀರಿಯಲ್ ಅಫೆಂಡರ್ ಎಂದು ಪರಿಗಣಿಸಿ ರೌಡಿ ಶೀಟ್ ತೆರೆಯಬಹುದು” ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಪೊಲೀಸ್ ಅಧಿಕಾರಿಯೊಬ್ಬರು.

ರೌಡಿಶೀಟ್ ತೆರೆದ ವ್ಯಕ್ತಿಯನ್ನು ಸಮಾಜಕ್ಕೆ ಮಾರಕ ಎಂದು ಪೊಲೀಸ್ ವ್ಯವಸ್ಥೆ ಗುರುತಿಸುತ್ತದೆ. ಕೆಲವು ಸಾಮಾಜಿಕ ನಿರ್ಬಂಧಗಳನ್ನು ರೌಡಿ ಶೀಟರ್ ಎದುರಿಸಬೇಕಾಗುತ್ತದೆ. ಆತನ ಎಲ್ಲ ರೀತಿಯ ಚಲನ ವಲನಗಳ ಮೇಲೆ ನಿಗಾ ಇಟ್ಟಿರುತ್ತದೆ. ಆತನ ಸಹಚರರ ಮೇಲೂ ನಿಗಾ ಇಟ್ಟಿರಲಾಗುತ್ತದೆ. ಆತನ ಬ್ಯಾಂಕ್ ಖಾತೆಗಳ ಮೇಲೂ ನಿಗಾ ಇಡಲಾಗಿರುತ್ತದೆ. ಆತ ವಾಸಿಸುವ ಪ್ರದೇಶದಲ್ಲಿ ಯಾವುದೇ ಜಾತ್ರೆ, ಚುನಾವಣೆ ಇತರೆ ಪ್ರಮುಖ ಕಾರ್ಯಕ್ರಮಗಳು ನಡೆಯುವುದಿದ್ದರೆ ಆತನನ್ನು ವಶಕ್ಕೆ ಪಡೆದು ಗಡಿಪಾರು ಮಾಡಲಾಗುತ್ತದೆ. ಪಾಸ್ ಪೋರ್ಟ್ ಜಪ್ತಿಯಾಗುತ್ತದೆ. ಕಾರಣವನ್ನು ನೀಡಿ  ವಿದೇಶಕ್ಕೆ ತೆರಳಬೇಕಾಗುತ್ತದೆ. ಪೊಲೀಸರು ನಡೆಸುವ ರೌಡಿ ಪೆರೆಡ್​ಗೆ ಹಾಜರಾಗಬೇಕಾಗುತ್ತದೆ. ಕೋಮು ಗಲಭೆ, ರಾಜಕೀಯ ಗಲಭೆಗಳಾದಾಗ ಪೊಲೀಸರು ಮೊದಲಿಗೆ ರೌಡಿ ಶೀಟರ್​ಗಳನ್ನು ವಶಕ್ಕೆ ಪಡೆದು ವಿಚಾರಿಸುತ್ತಾರೆ.

ಒಮ್ಮೆ ಒಬ್ಬ ವ್ಯಕ್ತಿಯ ಮೇಲೆ ರೌಡಿ ಶೀಟ್ ತೆರೆದರೆ ಕನಿಷ್ಟ 4 ವರ್ಷಗಳ ಕಾಲ ಅದು ಹಾಗೆಯೇ ಇರುತ್ತದೆ. ರೌಡಿ ಶೀಟರ್​ನ ಚಲನ ವಲನ ಗಮನಿಸಿ ಆತನ ವ್ಯಕ್ತಿತ್ವದಲ್ಲಿ ಸುಧಾರಣೆ ಆಗಿದೆ ಎಂದು ಪೊಲೀಸರಿಗೆ ಅನಿಸಿದರೆ ಅವರು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗೆ ವರದಿ ನೀಡುತ್ತಾರೆ. ಯಾವುದೇ ವ್ಯಕ್ತಿಯನ್ನು ರೌಡಿ ಶೀಟ್​ನಿಂದ ತೆಗೆಯುವ ಅಧಿಕಾರ ಎಸ್​ಪಿಗೆ ಮಾತ್ರ  ಇದೆ. ಸ್ಥಳೀಯ ಪೊಲೀಸರು ನೀಡುವ ವರದಿಯನ್ನು ಆಧರಿಸಿ ಎಸ್​ಪಿ ರೌಡಿ ಶೀಟ್ ನ್ನು ತೆಗೆಯುತ್ತಾರೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!