ಸರಿಗಮಪ ರಿಯಾಲಿಟಿ ಶೋನಲ್ಲಿ ಗಾಯಕಿಯಾಗಿ ಮಿಂಚಿದ್ದ ಯುವ ಗಾಯಕಿ ಪೃಥ್ವಿ ಭಟ್ ಮನೆಯವರ ವಿರೋಧದ ನಡುವೆ ಓಡಿ ಹೋಗಿ ವಿವಾಹ ಆಗಿದ್ದಾರೆ.
ಜೀ ವಾಹಿನಿಯಲ್ಲೇ ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಅಭಿಷೇಕ್ ಎನ್ನುವವರ ಜೊತೆ ಪೃಥ್ವಿ ಭಟ್ ಮಾರ್ಚ್ 27ರಂದು ವಿವಾಹವಾಗಿದ್ದಾರೆ. ಇಪ್ಪತ್ತು ದಿನಗಳ ನಂತರ ಗಾಯಕಿಯ ತಂದೆ ಶಿವಪ್ರಸಾದ್ ಮಗಳಿಗೆ ವಶೀಕರಣ ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
”ನನ್ನ ಮಗಳು ಕಳೆದ ತಿಂಗಳು ಇಪ್ಪತ್ತೇಳನೇ ತಾರೀಖಿನಂದು ದೇವಸ್ಥಾನದಲ್ಲಿ ಯಾರನ್ನೋ ಮದುವೆಯಾಗಿ ನಮ್ಮನ್ನು ಬಿಟ್ಟು ಹೋಗಿದ್ದಾಳೆ. ಈಗ ಅವಳು ನಮ್ಮ ಸಂಪರ್ಕದಲ್ಲಿ ಇಲ್ಲ. ಅವಳನ್ನು ಧಾರೆ ಎರೆದು ಮದುವೆ ಮಾಡಿಕೊಟ್ಟಿದ್ದು ಗಿರಿ ನಗರದ ನಿವಾಸಿ ಸಂಗೀತ ಶಿಕ್ಷಕ ನರಹರಿ ದೀಕ್ಷಿತ್.. ಈ ನರಹರಿ ದೀಕ್ಷಿತ್ ಬಂದು ಹೋದ ಮೇಲೆ ಅವಳ ವರ್ತನೆಯಲ್ಲಿ ತುಂಬಾ ಬದಲಾವಣೆ ಆಗಿದೆ. ಒಂದು ರೀತಿ ವಶೀಕರಣ ಆದ ರೀತಿ ಇದ್ದಳು. ನಾನು ಈ ವಿಷಯದಲ್ಲಿ ನಾನು ಸ್ವಲ್ಪ ಸೀರಿಯಸ್ ಆಗಿ ಆಲೋಚನೆ ಮಾಡಬೇಕಿತ್ತು” ಎಂದು ಹೇಳಿದ್ದಾರೆ.
”ನನ್ನ ಮಗಳಿಗೆ ಹವ್ಯಕ ಹುಡುಗನನ್ನೇ ಹುಡುಕಿ ಮದುವೆ ಮಾಡುವ ಕನಸು ಹೊತ್ತಿದ್ದೆ. ಈ ವಿಷಯವನ್ನು ಜೀ ಕನ್ನಡವಾಹಿನಿಯ ಸರಿಗಮಪ ಶೋನಲ್ಲಿ ಜ್ಯೂರಿಯಾಗಿರೋ ಸಂಗೀತ ಶಿಕ್ಷಕ ನರಹರಿ ದೀಕ್ಷಿತ್ ಗೆ ತಿಳಿಸಿದ್ದೆ. ಅವರು ಪೃಥ್ವಿ ಭಟ್ ಪ್ರೇಮಿಸುತ್ತಿರುವ ಹುಡುಗನ ಬಗ್ಗೆ ತಿಳಿಸಿದ್ದರು. ನಾನು ನನ್ನ ಮಗಳನ್ನು ಕೇಳಿದಾಗ ನೀವು ತೋರಿಸಿದ ಹುಡುಗನ ಜೊತೆಯೇ ಮದುವೆ ಆಗುತ್ತೇನೆ ಅಂತ ದೇವರ ಮೇಲೆ ಪ್ರಮಾಣ ಮಾಡಿದ್ದಳು” ಎಂದು ಹೇಳಿದ್ದಾರೆ.
”ಮಗಳನ್ನು ಕೂರಿಸಿಕೊಂಡು ಮಾತಾಡಿದಾಗ ಹುಡುಗನೊಬ್ಬ ನನ್ನ ಹಿಂದೆ ಬಿದ್ದಿರೋದು ನಿಜ. ಆದರೆ ನೀವು ಇಷ್ಟಪಟ್ಟರೆ ಮಾತ್ರ ಮುಂದುವರೆಯುವೆ. ಇಲ್ಲದಿದ್ದರೆ, ನೀವು ತೋರಿಸಿದ ಹುಡುಗನ ಜೊತೆಯೇ ಹೊಸ ಜೀವನಕ್ಕೆ ಕಾಲಿಡುತ್ತೇನೆ ಎಂದು ಪೃಥ್ವಿ ಭಟ್ ತಂದೆ ತಾಯಿಯ ಮೇಲೆ ಪ್ರಮಾಣ ಮಾಡಿದ್ದರಂತೆ. ಆ ಪ್ರಮಾಣ ಮುರಿದುಕೊಂಡು ಮದುವೆ ಆಗಿದ್ದಾರೆ. ಹಾಗಾಗಿ ಆಕೆ ನನ್ನ ಮನೆಗೆ ಬರೋದು ಬೇಡ” ಎಂದು ತಿಳಿಸಿದ್ದಾಗಿ ಪೃಥ್ವಿ ಅವರ ತಂದೆ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಪೃಥ್ವಿ ಭಟ್ ಸ್ಪಷ್ಟನೆ ನೀಡಿದ್ದಾರೆ. ”ಮಾರ್ಚ್ 7ಕ್ಕೆ ದೀಕ್ಷಿತ್ ಸರ್ ಮನೆಗೆ ಬಂದಿದ್ದು, ಈ ವಿಷಯ ಬಗ್ಗೆ ಮಾತ್ನಾಡಿದ್ರು. ಆಗ ನಾನು ಅವರ ಎದುರೇ ಮತ್ತೆ ನಿಮ್ಮಗಳ ಎದುರೇ ನನಗೆ ಅಭಿ ಇಷ್ಟ ಅಂತನೇ ಹೇಳಿದ್ದು. ಅವತ್ತು ನಿಮ್ಮ ಮೇಲಿನ ಭಯಕ್ಕೆ ನಾನು ಸುಮ್ಮನಾದೆ. ಆದರೆ ನನ್ನ ಮನಸಿನಲ್ಲಿ ಅಭಿ ಇದ್ದರು” ಎಂದು ಹೇಳಿದ್ದಾರೆ.
ಆಡಿಯೋವೊಂದನ್ನು ಮಾಡಿ ಹವ್ಯಕ ಗ್ರೂಪ್‌ನಲ್ಲಿ ಪೃಥ್ವಿ ತಂದೆ ಪೋಸ್ಟ್ ಮಾಡಿದ್ದಾರೆ. ಶಿವಪ್ರಸಾದ್ರ ಆಡಿಯೋ ವೈರಲ್ ಆಗ್ತಿದ್ದಂತೆ ಪೃಥ್ವಿ ಭಟ್ ದ್ದು ಎನ್ನಲಾದ ಆಡಿಯೋ ಹರಿದಾಡಿದ್ದು, ತಂದೆಯ ಆರೋಪಕ್ಕೆ ಮಗಳು ಸ್ಪಷ್ಟೀಕರಣ ಕೊಟ್ಟಿದ್ದಾರೆ.
—-

Be the first to comment