ಅನುಭವಿಗಳು ಮತ್ತೊಂದು ಅನುಭವಕ್ಕೆ ಹಪಾಹಪಿಸುವ, ಅನಾನುಭವಿಗಳು ಅನುಭವಿಗಳಂತೆ ವರ್ತಿಸುವ, ಸಂಬಂಧಗಳನ್ನ ಬೆಸೆಯುವ, ಗಟ್ಟಿಗೊಳಿಸುವ, ತಪ್ಪನ್ನು ತಿದ್ದುವ ಸಿನಿಮಾ ‘ಪ್ರೀಮಿಯರ್ ಪದ್ಮಿನಿ’. ಒಂದು ಗಂಡು ಒಂದು ಹೆಣ್ಣಿನ ನಡುವೆ ಸಲುಗೆ ಇದ್ದ ಮಾತ್ರಕ್ಕೆ `ಅದು ಅದೇ’ ಅಂದುಕೊಳ್ಳುವವರಿಗೆ ಈ ಸಿನಿಮಾ ಮುಖಕ್ಕೆ ಹೊಡೆದಂತಿದೆ. ಅಂಥದೊಂದು ಕೆಟ್ಟ ಆಲೋಚನೆ ಇಟ್ಟುಕೊಂಡು ಸಂಬಂಧ ಬೆಳೆಸುವವರಿಗೆ ಅದು ಸಸಿ ಇದ್ದಾಗಲೇ ಚಿವುಟಿ ಹಾಕುತ್ತೆ.
ಆಕಸ್ಮಿಕವಾಗಿ ಪರಿಚಯವಾದ ವ್ಯಕ್ತಿ ಅಣ್ಣನಷ್ಟೇ ಕೇರ್ ಮಾಡ್ತಾನೆ, ರಕ್ಷಣೆ ಕೊಡ್ತಾನೆ. ಸ್ನೇಹಿತನಾಗಿ ಸಲಹೆ ಕೊಡ್ತಾನೆ, ಕಷ್ಟದ ಸಂದರ್ಭದಲ್ಲಿ ಬೆನ್ನಿಗೆ ನಿಲ್ತಾನೆ. ಅಂತಹ ಸಂಬಂಧವನ್ನು ಅನುಮಾನದ ದೃಷ್ಟಿಯಿಂದ ನೋಡುವ ಪೋಷಕರು ಇಲ್ಲಿ ವಿಲನ್. ಹೆತ್ತ ಮಗಳನ್ನೇ ಅತ್ಯಾಚಾರ ಗೈಯುವ ತಂದೆಯೇ ವಿಕೃತ ಕಾಮಿ, ಪರಮಪಾಪಿ. ಇಂತಹ ದೊಡ್ಡ ನೋವನ್ನು ನುಂಗಿಕೊಂಡು ”ಬದುಕು ಎಲ್ಲದಕ್ಕಿಂತ ದೊಡ್ಡದು. ಬೇರೆಯವರ ತಪ್ಪಿಗೆ ಬೆಲೆ ಕೊಡ್ತಾ ಹೋದ್ರೆ ನಮ್ಮ ಬದುಕಿಗೆ ಬೆಲೆಯೇ ಇರುವುದಿಲ್ಲ. ಕೆಟ್ಟ ನೆನಪುಗಳು ಹೆಣ ಇದ್ದಹಾಗೆ, ಹೊತ್ತುಕೊಂಡಷ್ಟುಭಾರ ಸುಟ್ಟು ಬಿಡಬೇಕು” ಎಂದು ಒಂದೇ ಒಂದು ದೃಶ್ಯದಲ್ಲಿ ಡೈಲಾಗ್ ಹೇಳಿ ಇಡೀ ಜೀವನದ ಸಾರವನ್ನೇ ತಿಳಿಸುವ ‘ಪದ್ಮಿನಿ’ ಈ ಚಿತ್ರದ ಹಿರೋಯಿನ್. ಎರಡು ಗಂಟೆ ಸಿನಿಮಾದಲ್ಲಿ ನಿರ್ದೇಶಕ ರಮೇಶ್ ಇಂದಿರಾ ಭಿನ್ನವಾಗಿ ಮನಮುಟ್ಟುವಂತೆ ಕಥೆಯನ್ನ ಹೇಳಿದ್ದಾರೆ. ಜಗ್ಗೇಶ್ ‘ನವರಸ ನಾಯಕ’ ಎಂಬ ತಮ್ಮ ಬಿರುದಿಗೆ ತಕ್ಕಂತೆ ನಟಿಸಿದ್ದಾರೆ. ಅವರ ಮಗನ ಪಾತ್ರದಲ್ಲಿ ನಟಿಸಿರುವ ಯುವ ನಟ ವಿವೇಕ್ ಸಿಂಹ ತುಂಬಾ ಇಷ್ಟ ಆಗ್ತಾರೆ. ಹೀರೋ ಮೆಟಿರಿಯಲ್ ಅನಿಸ್ತು. ಹಳೆಯ `ಪ್ರೀಮಿಯರ್ ಪದ್ಮಿನಿ’ ಕಾರು ಹತ್ತಿ ಹೊರಟವರಿಗೆ ಹೊಸತನದ ಜರ್ನಿಯ ಅನುಭವವಾಗುತ್ತೆ. ಮಿಸ್ ಮಾಡದೇ ನೋಡಿ. ವ್ಯಯಿಸಿದ ಸಮಯ ಮತ್ತು ಹಣಕ್ಕೆ ಮೋಸವಿಲ್ಲ.
-ಜಯಪ್ರಕಾಶ್
Pingback: dumps + pin shop