ಪ್ರೇಮ್ ಅವರ ಹೊಸ ಹಾಡು ಬಿಡುಗಡೆಯಾಗಿದೆ. ಕನ್ನಡ ಚಿತ್ರರಂಗದಲ್ಲಿ ಪ್ರೇಮ್ ಅಂದ್ರೆ ಯಾವ ಪ್ರೇಮ್ ಅನ್ನೋ ಪ್ರಶ್ನೆ ಎದುರಾಗಬಹುದು. ಆದರೆ “ಪ್ರೇಮ್ಸ್” ಅಂದ್ರೆ ದೂಸ್ರಾ ಮಾತೇ ಇಲ್ಲ. ಅದು ಅದೇ ಪ್ರೇಮ್ ಅಂತ ಎಲ್ಲರಿಗೂ ಗೊತ್ತಾಗುತ್ತೆ. ಸ್ಯಾಂಡಲ್ ವುಡ್ ನಲ್ಲಿ ಅವರು ಸೃಷ್ಠಿಸಿರುವ ಹವಾ ಅಂಥದ್ದು.
prem’s❤
ಪ್ರೇಮ್ ಅವರು ಎಷ್ಟು ಒಳ್ಳೆ ನಿರ್ದೇಶಕರೋ ಅಷ್ಟೇ ಒಳ್ಳೇ ಗಾಯಕ ಅಂತಲೂ ಪ್ರೂವ್ ಮಾಡಿದ್ದಾರೆ. ಅವರು ಎಕ್ಸ್ ಕ್ಯೂಸ್ ಮಿ ಚಿತ್ರದ ಬ್ರಹ್ಮ ವಿಷ್ಣು ಶಿವ ಹಾಡು ಹಾಡುತ್ತಿದ್ದಾರೆ ಅಂದಾಗ, “ಅಯ್ಯೋ, ಸಿಕ್ಕ ಸಿಕ್ಕವರೆಲ್ಲಾ ಗಾಯಕರಾಗಿಬಿಟ್ರು” ಅಂತ ಮೂಗು ಮುರಿದವರೇ ಹೆಚ್ಚು. ಆದರೆ ಹಾಡು ಕೇಳಿದ ಮೇಲೆ ಅದೇ ಮಂದಿ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದ್ದು ಈಗ ಇತಿಹಾಸ. ಅವರು ತಮ್ಮ ಮೊದಲ ಹಾಡು ಹಾಡಿದಾಗಲೂ ಇದು ನನ್ನ ಮೊದಲ ಹಾಡು ಎನ್ನುವ ಯಾವ ಎಕ್ಸ್ ಕ್ಯೂಸ್ ಕೇಳದೇ ಮೊದಲ ಹಾಡಲ್ಲೇ ಜಯಭೇರಿ ಬಾರಿಸಿದ್ದರು ಪ್ರೇಮ್. ಇನ್ನು ಜೋಗಿ ಚಿತ್ರದ ಬೇಡುವನು ವರವನ್ನು ಸೇರಿದಂತೆ ಪ್ರೇಮ್ ಅನೇಕ ಹಾಡುಗಳನ್ನು ಹಾಡಿದ್ದಾರೆ. ಅವು ಹಿಟ್, ಸೂಪರ್ ಹಿಟ್ ಎಲ್ಲವೂ ಆಗಿವೆ. ಆದರೆ ಅವರ ಬೇಸಿಕ್ ಸಮಸ್ಯೆ ಮಾತ್ರ ಹಾಗೇ ಉಳಿದಿದೆ ಅನ್ನಿಸೋದು ಅವರ ಲೇಟೆಸ್ಟ್ ಚಿತ್ರ ಏಕ್ ಲವ್ ಯಾ ಚಿತ್ರದ “ಹೇಳು ಯಾಕೆ” ಹಾಡನ್ನು ಕೇಳಿದಾಗ. ಎಂದಿನಂತೆ ಈ ಹಾಡಿನ ಸಂಗೀತ, ಸಾಹಿತ್ಯ ಎಲ್ಲವೂ ಚೆಂದ. ಜೊತೆಗೆ ಪ್ರೇಮ್ ಅವರ ಕಂಠ ಕೂಡ ಎಂದಿನಂತೆ ರಾ ಎಮೋಷನ್ಸ್ ತುಂಬಿ ಪ್ರಾಮಾಣಿಕ ಮತ್ತು ಅಮಾಯಕ ಪ್ರೀತಿಯನ್ನು ಹೊರಹಾಕುತ್ತದೆ. ಆದರೆ ಅವರ ಆ ಕಾರ ಹ ಕಾರದ ಸಮಸ್ಯೆ ಮಾತ್ರ ಹಾಗೇ ಉಳಿದುಕೊಂಡಿದೆ.
ಹಾಗಾಗಿ ಹಾಡು ಕೇಳಿದ ಕನ್ನಡದ ಕೇಳುಗರು “ಒತ್ತಿಲ್ಲದ” ಕಡೆ ಒತ್ತು ಯಾಕೆ?, “ಇಂದಿಂದೆ” ಬಂದಿದ್ದು, ನಿನ್ನೆ-ಇಂದಿನ ಸಮಸ್ಯೆ ಏನೂ ಅಲ್ಲ, ಪ್ರೇಮ್ ಅಂದ್ರೆ “ಇಂಗೇನೇ”, ಎಲ್ಲಾರ “ಆಗೆ” ನೀವಂತೂ ಅಲ್ಲ ಅಂತ ಗೊತ್ತು ಆದ್ರೆ, “ಹಾಣೆಯ” ಇಟ್ಟು ಹೇಳಿ, ಈ ಸಮಸ್ಯೆ ಇನ್ನೂ ಯಾಕೆ ಬಗೆಹರಿದಿಲ್ಲ, “ಏಳು” ಯಾಕೆ, ಅಂತ ಪ್ರಶ್ನೆ ಮಾಡುತ್ತಿದ್ದಾರೆ.
ಅವರ ಪ್ರಶ್ನೆಯಲ್ಲಿ ತಪ್ಪೇನೂ ಇಲ್ಲ ಬಿಡಿ, ಒಂದು ಲೇಖನ ಆಗಲಿ, ಸಿನಿಮಾ ಡೈಲಾಗ್ ಆಗಲಿ, ಕಥೆಯೇ ಆಗಲಿ, ಅದು ಎಷ್ಟೇ ಚೆನ್ನಾಗಿದೆ ಅನ್ನಿಸಿದರೂ ಅದರಲ್ಲಿ ವ್ಯಾಕರಣ ದೋಷಗಳು ಇದ್ದರೆ ಅದು ಕೇಳುಗನ ಮತ್ತು ಓದುಗನ ಮನಸ್ಸಲ್ಲಿ ಒಂದು ಗೌರವದ ಭಾವನೆ ಹುಟ್ಟು ಹಾಕುವಲ್ಲಿ ಸೊರಗುತ್ತದೆ. ಈ ಹಾಡಿನ ವಿಷಯದಲ್ಲೂ ಅಷ್ಟೇ.
ಪ್ರೇಮ್ ಅವರು ಮಂಡ್ಯ ಮೂಲದಿಂದ ಬಂದವರು, ಅಲ್ಲಿನ ಭಾಷೆ ಹಾಗಿದೆ, ಅವರು ತೀರಾ ವಿದ್ಯಾವಂತರಲ್ಲ ಅನ್ನುವ ಮಾತುಗಳು ಕೇವಲ ನಮ್ಮ ಸಮಾಧಾನಕ್ಕೆ, ಪ್ರೇಮ್ ಅವರ ಮೇಲಿರುವ ನಮ್ಮ ಪ್ರೀತಿಗೆ ಹೇಳಿಕೊಳ್ಳಬಹುದು ಅಷ್ಟೇ. ಯಾಕಂದ್ರೆ ನೆನಪಿರಲಿ ಅಣ್ಣಾವ್ರು ಓದಿದ್ದು ಮೂರನೇ ಕ್ಲಾಸು. ಆದರೆ, ಅವರ ಕನ್ನಡ, ಅವರ ಉಚ್ಛಾರದ ಬಗ್ಗೆ ಯಾರೂ ಯಾರಿಗೂ ಹೇಳಬೇಕಾಗಿಲ್ಲ. ಕನ್ನಡಿಗರ ಪಾಲಿಗೆ ಅವರು ಸ್ಕೂಲ್ ಮಾಸ್ಟರ್.
ಒಟ್ಟಾರೆಯಾಗಿ ಪ್ರೇಮ್ ಅವರ ಹೊಸ ಹಾಡನ್ನು ಕೇಳಿದ ಮೇಲೆ ಅನ್ನಿಸಿದ್ದು, ಪ್ರೇಮ್ ಅವರಿಗೆ ಹಾಡುವ ಸಮಯದಲ್ಲಿ ಅವರ ತಪ್ಪು ಗೊತ್ತಾಗದಿರಬಹುದು, ಆದರೆ ಅವರೇನೂ ಯಾರಿಗೂ ಗೊತ್ತಾಗದ ಹಾಗೆ ಸೀಕ್ರೆಟ್ ಆದ ಜಾಗದಲ್ಲಿ ಹೋಗಿ ರೆಕಾರ್ಡಿಂಗ್ ಮಾಡಿಕೊಂಡು ಬರೊಲ್ಲ ತಾನೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸೇರಿದಂತೆ, ರೆಕಾರ್ಡಿಂಗ್ ಸಮಯದಲ್ಲಿ ಅವರ ಸುತ್ತ ಮುತ್ತ ಇರೋ ಜನ ಅವರ ತಪ್ಪನ್ನು ಯಾಕೆ ತಿದ್ದೊಲ್ಲ ಅನ್ನೋದೇ ಇಲ್ಲಿನ ಪ್ರಶ್ನೆ. ಆ ಧೈರ್ಯ ಯಾರಿಗೂ ಇಲ್ವಾ ಅಥವಾ ಪ್ರೇಮ್ ಹಾಡು ಹೀಗೆ ಇದ್ರೆ ಚೆನ್ನ ಎಂಬ ಅನಿಸಿಕೆ ಅವರದ್ದಾ ಗೊತ್ತಿಲ್ಲ. ಆದರೆ ಇಲ್ಲಿ ಒಂದು ಮಾತು. ಜೋಗಿ ಚಿತ್ರದ ಮಾದೇಶನ ಪಾತ್ರಕ್ಕೆ ಹಾಡುವಾಗ ಅ ಕಾರ ಹ ಕಾರ ತಪ್ಪಾದ್ರೆ ಅದನ್ನು ಅರ್ಥ ಮಾಡಿಕೊಳ್ಳಬಹುದು. ಯಾಕಂದ್ರೆ ಆ ಪಾತ್ರವೇ ಒಬ್ಬ ಅವಿದ್ಯಾವಂತನದ್ದು. ಆದರೆ ಒಬ್ಬ ಯಂಗ್ ಮಾಡರ್ನ್ ಕಾಲೇಜು ಹುಡುಗನ ಪಾತ್ರ ಹಾಡುವ ಹಾಡಿನಲ್ಲಿ ಇಂಥ ತಪ್ಪುಗಳಾದ್ರೆ ಅದು ಖಂಡಿತಾ ಅಭಾಸ ಆಗುತ್ತದೆ.
ಒಟ್ಟಿನಲ್ಲಿ ಪ್ರೇಮ್ ಅವರ ಅ ಕಾರ ಹ ಕಾರದ ಉಚ್ಛಾರಣೆಯ ಬಗ್ಗೆ ಹೀಗೆ ಜನ ಆಹಾಕಾರ ಸೃಷ್ಠಿಸುತ್ತಾ ಇರೋದನ್ನ, ಖಾರವಾದ ಪ್ರತಿಕ್ರಿಯೆ ಎಂದುಕೊಳ್ಳದೆ, ಪ್ರೇಮ್ ಅವರು ಮುಂದಿನ ಬಾರಿ ತಮ್ಮನ್ನು ತಾವು ಸರಿಪಡಿಸಿಕೊಳ್ಳಲಿ ಎಂಬುದು ಎಲ್ಲ ಕನ್ನಡ ಸಿನಿಪ್ರೇಮಿಗಳ ಆಶಯ.
Be the first to comment