ಲವ್ಲೀ ಸ್ಟಾರ್ ಪ್ರೇಮ್ ನಟನೆಯ ‘ಪ್ರೇಮಂ ಪೂಜ್ಯಂ’ ಚಿತ್ರ ಈಗಾಗಲೇ ಸೆನ್ಸಾರ್ ಆಗಿದ್ದು, ನವೆಂಬರ್ 12ರಂದು ಕರ್ನಾಟಕ ಅಲ್ಲದೇ, ಹೊರ ರಾಜ್ಯ, ವಿದೇಶಗಳಲ್ಲೂ ಚಿತ್ರ ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸಿದೆ.
ಚಿತ್ರವನ್ನು ಡಾ. ರಾಘವೇಂದ್ರ ಅವರು ನಿರ್ದೇಶನ ಮಾಡಿದ್ದು, ಚಿತ್ರದ ಪ್ರಚಾರ ಕಾರ್ಯಕ್ಕಾಗಿ ರಾಜ್ಯದ ಕಾಲೇಜುಗಳಿಗೆ ಭೇಟಿ ನೀಡಲು ಯೋಜನೆ ರೂಪಿಸಲಾಗಿದೆ.
ಹುಬ್ಬಳ್ಳಿ, ಗದಗ, ಧಾರವಾಡ, ಬೆಳಗಾವಿಯ ಕಾಲೇಜುಗಳಿಗೆ ಚಿತ್ರತಂಡ ಭೇಟಿ ನೀಡಲಿದೆ. ಬಳಿಕ ಮೈಸೂರು, ಹಾಸನ, ಮಂಡ್ಯ ಮುಂತಾದ ಕಡೆ ತೆರಳಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. “ಪ್ರೇಮಂ ಪೂಜ್ಯಂ ಚಿತ್ರದಲ್ಲಿ ವಿಶೇಷ ಲವ್ ಸ್ಟೋರಿ ಇದೆ. ಲವ್ ಸ್ಟೋರಿಯಲ್ಲಿ ಹಿಂಸೆ, ದ್ವೇಷ ಇರುವುದು ಸಹಜ. ಆದರೆ ನಮ್ಮ ಸಿನಿಮಾದಲ್ಲಿ ಆ ರೀತಿ ಇಲ್ಲ. ನಾಯಕ ತನ್ನ ಪ್ರೀತಿಯನ್ನು ಹೇಗೆ ಕಾಪಾಡಿಕೊಂಡು ಹೋಗುತ್ತಾನೆ ಎನ್ನುವ ಅಂಶ ಇದೆ. ಹೀಗೂ ಪ್ರೀತಿಸಬಹುದಾ ಅನಿಸುವುದು ಒಂದೆಡೆ ಆದರೆ, ಹೀಗೆ ಪ್ರೀತಿಸಬೇಕು ಎಂದೂ ಅನ್ನಿಸುತ್ತದೆ. ಈ ಪ್ರೀತಿ ಸ್ನೇಹಿತರ ನಡುವೆ ಇರಬಹುದು. ಅಥವಾ ಅಪ್ಪ, ಅಮ್ಮ, ಹೆಂಡತಿ ಜೊತೆ ಆಗಿರಬಹುದು. ಹೀಗೆ ಯಾವ ಬಂಧದಲ್ಲಿ ಎಂಥ ಪ್ರೀತಿ ಇರಬೇಕು ಎನ್ನುವ ಅರಿವನ್ನು ಈ ಚಿತ್ರ ಮೂಡಿಸುತ್ತದೆ” ಎನ್ನುತ್ತಾರೆ ನಿರ್ದೇಶಕ ರಾಘವೇಂದ್ರ.
“ಸಿನಿಮಾದಲ್ಲಿ ಹೊಸ ನಟಿ ಬೃಂದಾ ಆಚಾರ್ಯ, ಐಂದ್ರಿತಾ ರೇ ಮುಖ್ಯಪಾತ್ರಗಳಲ್ಲಿದ್ದಾರೆ. ತ್ರಿಕೋನ ಪ್ರೇಮಕಥೆ ಸಿನಿಮಾದಲ್ಲಿದೆ. ನಿರೀಕ್ಷೆಗಳಿಲ್ಲದೆ ಹೋದಾಗ ಯಾವುದೇ ಸಂಬಂಧದಲ್ಲಿ ನೆಮ್ಮದಿ, ಸಂತೋಷಗಳಿರುತ್ತವೆ ಎನ್ನುವುದನ್ನು ಚಿತ್ರದಲ್ಲಿ ಹೇಳಿದ್ದೇವೆ” ಎಂದು ಡಾ. ರಾಘವೇಂದ್ರ ಹೇಳಿದ್ದಾರೆ.
ರಾಘವೇಂದ್ರ ಬಿ.ಎಸ್ ಅವರು ಚಿತ್ರ ನಿರ್ದೇಶಿಸುವುದರ ಜೊತೆಗೆ, ಕಥೆ, ಚಿತ್ರಕಥೆಯನ್ನು ಬರೆದಿದ್ದಾರೆ. ಚಿತ್ರಕ್ಕೆ ಸಂಗೀತ ಸಂಯೋಜನೆಯನ್ನೂ ಅವರು ಮಾಡಿರುವುದು ವಿಶೇಷ. ಸಂಗೀತಮಯ ಚಿತ್ರ ಆಗಿರುವ ‘ಪ್ರೇಮಂ ಪೂಜ್ಯಂ’ ಚಿತ್ರಕ್ಕೆ ಹರಿಹರನ್ , ಮೋಹಿತ್ ಚೌಹಾಣ್, ವಿಜಯ್ ಪ್ರಕಾಶ್, ಸೋನು ನಿಗಮ್, ಅರ್ಮಾನ್ ಮಲಿಕ್ ಸೇರಿದಂತೆ ಹಲವು ಗಾಯಕರು ಹಾಡಿದ್ದಾರೆ. ಚಿತ್ರದಲ್ಲಿ ಒಟ್ಟು 12 ಹಾಡುಗಳು ಇದ್ದು, ಈಗಾಗಲೇ ಇವು ಜನರ ಮೆಚ್ಚುಗೆಗೆ ಪಾತ್ರವಾಗಿವೆ.
ಪ್ರೇಕ್ಷಕರ ಮುಂದೆ ಬರಲು ಚಿತ್ರ ತಯಾರಾಗಿದ್ದು, ಅದಕ್ಕಾಗಿ ಚಿತ್ರತಂಡ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ.
———————
Be the first to comment