‘ಕ್ರೇಜಿ ಸ್ಟಾರ್’ ರವಿಚಂದ್ರನ್ ‘ಪ್ರೇಮ ಲೋಕ 2’ ಚಿತ್ರವನ್ನು ಮೇ 30ರಂದು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರಾರಂಭಿಸುವುದಾಗಿ ಹೇಳಿದ್ದಾರೆ.
ಪ್ರೇಮ ಲೋಕ 2’ ಚಿತ್ರ ಮಾಡುವುದಾಗಿ ರವಿಚಂದ್ರನ್ ಕಳೆದ ಕೆಲವು ವರ್ಷಗಳಲ್ಲಿ ಹೇಳುತ್ತಲೇ ಇದ್ದಾರೆ. 2024ರಲ್ಲಿ ಪ್ರಾರಂಭಿಸುವುದಾಗಿ ಅವರು ಹಿಂಟ್ ಕೊಟ್ಟಿದ್ದರು. ಆದರೆ ಯಾವ ವಿಷಯವನ್ನೂ ಅವರು ಬಹಿರಂಗಗೊಳಿಸಿರಲಿಲ್ಲ. ಈಗ ಅವರು ಮೊದಲ ಬಾರಿಗೆ ಈ ಚಿತ್ರದ ಕುರಿತು ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ನಡೆದ ‘ಕನಕಗಿರಿ ಉತ್ಸವ’ದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ ರವಿಚಂದ್ರನ್, ‘ಪ್ರೇಮಲೋಕ 2’ ಚಿತ್ರದ ಕುರಿತು ಒಂದಿಷ್ಟು ಅಪ್ಡೇಟ್ಗಳನ್ನು ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಅವರ ದೊಡ್ಡ ಮಗ ಮನೋರಂಜನ್ ನಾಯಕನಾಗಿ ನಟಿಸಿದರೆ, ಚಿಕ್ಕ ಮಗ ವಿಕ್ರಮ್ ಒಂದು ಚಿಕ್ಕ ಪಾತ್ರ ಮಾಡುತ್ತಾರಂತೆ. ರವಿಚಂದ್ರನ್ ಅವರು ತಂದೆಯ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
”‘ಪ್ರೇಮ ಲೋಕ 2’ ಚಿತ್ರದಲ್ಲಿ 20ರಿಂದ 25 ಹಾಡುಗಳು, ಪ್ರೀತಿ ಇರುತ್ತದೆ. ನನಗೆ ಪ್ರೀತಿ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಅದೊಂದೇ ಗೊತ್ತಿರೋದು ನನಗೆ” ಎಂದು ರವಿಚಂದ್ರನ್ ಹೇಳಿದ್ದಾರೆ.
‘’ಪ್ರೇಮ ಲೋಕ’ ರವಿಚಂದ್ರನ್ ಸಿನಿಮಾ ಅಲ್ಲ, ಅದು ಈಶ್ವರಿ ಸಂಸ್ಥೆಯದ್ದು. ಅದು ಜನರದ್ದು. ಆ ಗೆಲುವು ಜನರದ್ದು. ಮತ್ತೆ ಇನ್ನೊಂದು ‘ಪ್ರೇಮ ಲೋಕ’ವನ್ನು ಸೃಷ್ಟಿ ಮಾಡಬೇಕು ಎಂಬ ಆಸೆ ನನಗೆ. ಆ ಪ್ರೇಮ ಲೋಕದಲ್ಲಿ ನೀವೆಲ್ಲಾ ಇರಬೇಕು’ ಎಂದು ರವಿಚಂದ್ರನ್ ಹೇಳಿಕೊಂಡಿದ್ದಾರೆ.
ರವಿಚಂದ್ರನ್ ಅವರು ‘ರವಿ ಬೋಪಣ್ಣ’ ಚಿತ್ರದ ನಂತರ ಯಾವೊಂದು ಚಿತ್ರವನ್ನು ನಿರ್ದೇಶಿಸಿಲ್ಲ. ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ಈ ಚಿತ್ರದ ದೊಡ್ಡ ಮಟ್ಟದಲ್ಲಿ ಸೋಲು ಕಂಡಿತ್ತು.
Be the first to comment