ಏಕ್ ಲವ್ ಯಾ ಸಿನಿಮಾ ರಿಲೀಸ್ ಆದ ದಿನವೇ ಪೈರಸಿ ಆಗಿತ್ತು. ಚಿತ್ರದ ಥಿಯೇಟರ್ ಪ್ರಿಂಟ್ ಟೆಲಿಗ್ರಾಮ್ ಹಾಗೂ ಕೆಲ ಪೈರಸಿ ತಾಣಗಳಲ್ಲಿ ಹರಿದಾಡಿದೆ ಎಂದು ನಿರ್ದೇಶಕ ಪ್ರೇಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಚಾರವನ್ನು ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ತೆಗೆದುಕೊಂಡು ಹೋಗುವುದಾಗಿ ಪ್ರೇಮ್ ಹೇಳಿಕೆ ನೀಡಿದ್ದಾರೆ.
ಮುಂದಿನ ವಾರ ಸಿಎಂ ಭೇಟಿ ಮಾಡ್ತೀನಿ. ಅವರಿಗೆ ಲೆಟರ್ ಕೊಟ್ಟು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡ್ತೀನಿ. ನನ್ನ ಸಿನಿಮಾ ಅಂತಲ್ಲ. ಎಲ್ಲ ಚಿತ್ರಕ್ಕೂ ಇದೇ ತೊಂದರೆ ಕಾಡುತ್ತಿದೆ ಎಂದು ಪ್ರೇಮ್ ದೂರಿದ್ದಾರೆ.
ಈ ಹಿಂದೆ ಪ್ರೇಮ್ ಅವರು ಕನ್ನಡ ಸಿನಿಮಾಗಳಿಗೆ ಮಲ್ಟಿಪ್ಲೆಕ್ಸ್ಗಳಲ್ಲಿ ಹೆಚ್ಚು ಸೌಂಡ್ ಕೊಡುವುದಿಲ್ಲ ಎಂದು ಆರೋಪ ಮಾಡಿ ಫಿಲ್ಮ್ ಚೇಂಬರ್ ಮೊರೆ ಹೋಗಿದ್ದರು. ಮಲ್ಟಿಪ್ಲೆಕ್ಸ್ ಗಳಲ್ಲಿ ತೆಲುಗು, ತಮಿಳು, ಇಂಗ್ಲೀಷ್ ಸಿನಿಮಾಗಳಿಗೆ 7 ಸೌಂಡ್ ಪಾಯಿಂಟ್ ಇರುತ್ತದೆ. ಆದರೆ ಕನ್ನಡ ಸಿನಿಮಾಗೆ ಕೇವಲ 4 ಸೌಂಡ್ ಪಾಯಿಂಟ್ ಮಾತ್ರ ಇಡುತ್ತಾರೆ.ಸೌಂಡ್‌ನಲ್ಲಿ ವ್ಯತಾಸ ಮಾಡಿದರೆ ಸಿನಿಮಾ ನೋಡಲು ಮಜಾ ಸಿಗುವುದಿಲ್ಲ. ವಿಲನ್ ಸಮಯದಲ್ಲೂ ಹೀಗೆ ಆಗಿತ್ತು ಎಂದು ಜೋಗಿ ಪ್ರೇಮ್ ಆರೋಪ ಮಾಡಿದ್ದರು.
ಫೆಬ್ರವರಿ 24ಕ್ಕೆ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಸಿನಿಮಾ ರಿಲೀಸ್ ಆಗಿದೆ. ‘ಏಕ್ ಲವ್ ಯಾ’ ಸಿನಿಮಾದ ಹಾಡು ಹಾಗೂ ಬ್ಯಾಕ್‌ಗ್ರೌಂಡ್ ಮ್ಯೂಸಿಕ್‌ಗಾಗಿ ಒಂದೂವರೆ ಕೋಟಿಯಷ್ಟು ಹಣವನ್ನು ಖರ್ಚು ಮಾಡಲಾಗಿದೆ. ಇಷ್ಟೆಲ್ಲಾ ಖರ್ಚು ಮಾಡಿದರೂ ಮಲ್ಟಿಪ್ಲೆಕ್ಸ್‌ನಲ್ಲಿ ಸೌಂಡ್ ಯಾಕೆ ಕೊಡುವುದಿಲ್ಲ? ಎಂದು ಪ್ರೇಮ್ ಪ್ರಶ್ನೆ ಮಾಡಿದ್ದರು.
‘ಏಕ್ ಲವ್ ಯಾ’ ಸಿನಿಮಾದಲ್ಲಿ ರಾಣಾ ಹಾಗೂ ರಚಿತಾ ರಾಮ್, ಗ್ರೀಷ್ಮಾ ನಾಣಯ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಕ್ಷಿತಾ ಅವರು ಚಿತ್ರ ನಿರ್ಮಾಣ ಮಾಡಿದ್ದಾರೆ.
__
Be the first to comment