ಮನುರಂಜನ್ ನಾಯಕರಾಗಿ ನಟಿಸುತ್ತಿರುವ ‘ಪ್ರಾರಂಭ’ ಸಿನಿಮಾದ ಹಾಡುಗಳ ಬಿಡುಗಡೆಯನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಬಿಡುಗಡೆ ಮಾಡಿದ್ದಾರೆ.
“ಇದು ತೆಲುಗಿನ ‘ಅರ್ಜುನ್ ರೆಡ್ಡಿ’ ಚಿತ್ರದ ರಿಮೇಕ್ ಎಂದು ಸುದ್ದಿಯಾಗ್ತಿದೆ. ಖಂಡಿತವಾಗಿ ಇದು ಅದು ಅಲ್ಲ” ಎಂದು ಸ್ಪಷ್ಟ ಪಡಿಸುವ ಮೂಲಕ ಮಾತು ಆರಂಭಿಸಿದರು ಮನುರಂಜನ್.
ಚಿತ್ರದಲ್ಲಿ ನನ್ನನ್ನು ಎರಡು ಮೂರು ಶೇಡ್ ಗಳಲ್ಲಿ ತೋರಿಸಿದ್ದಾರೆ. ಈ ಹಿಂದಿನ ಚಿತ್ರಗಳಿಗಿಂತ ಹೊಸ ಇಮೇಜ್ ಇರುವುದರಿಂದ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ ಎಂದು ಮನುರಂಜನ್ ಹೇಳಿದರು. ನಾಯಕಿ ಕೀರ್ತಿ ಕಲ್ಕೆರೆ ಮಾತನಾಡಿ ಇದು ನನಗೆ ಮೊದಲನೆಯ ಚಿತ್ರ. ರವಿಚಂದ್ರನ್ ಸರ್ ಅವರು ಬಂದು ನಮ್ಮ ಚಿತ್ರದ ಆಡಿಯೋ ಬಿಡುಗಡೆಗೊಳಿಸುತ್ತಿರುವುದು ತುಂಬ ಖುಷಿಯಾಗಿದೆ ಎಂದರು.
ನಾನು ಈಗಾಗಲೇ ಸಿನಿಮಾ ನೋಡಿದ್ದೇನೆ. ಎರಡು ಗಂಟೆ ಹನ್ನೆರಡು ನಿಮಿಷ ಕಾಲಾವಧಿಯ ಸಿನಿಮಾ ಇದು. ತುಂಬ ಚೆನ್ನಾಗಿ ಮೂಡಿ ಬಂದಿದೆ ಎಂದು ಸಹೋದರನಾಗಿ ಬಂದು ಶುಭಕೋರಿದರು ವಿಕ್ರಮ್ ರವಿಚಂದ್ರನ್. ನಿರ್ದೇಶಕ ಮನು ಕಲ್ಯಾಡಿ ಮಾತನಾಡಿ, “ಸಾಮಾನ್ಯವಾಗಿ ಪ್ರೇಮಕತೆ ಇರುವ ಸಿನಿಮಾಗಳು ಲವ್ ಸಕ್ಸಸ್ ಅಥವಾ ಫೆಯಿಲ್ಯೂರ್ ಆಗುವಲ್ಲಿಗೆ ಮುಗಿಯುತ್ತವೆ. ಆದರೆ ಈ ಸಿನಿಮಾದಲ್ಲಿ ಲವ್ ಫೆಯಿಲ್ಯೂರ್ ಆದ ಬಳಿಕ ನಾಯಕನ ಬದುಕು ಹೇಗೆ ಸಾಗುತ್ತದೆ ಎನ್ನುವುದನ್ನು ತೋರಿಸುತ್ತದೆ” ಎಂದರು.
ಚಿತ್ರಕ್ಕೆ ಸಂಗೀತ ನೀಡಿರುವ ಪ್ರಜ್ವಲ್ ಮಾತನಾಡಿ “ಈ ಹಿಂದೆ ಉಪ್ಪು ಹುಳಿ ಖಾರ ” ಚಿತ್ರಕ್ಕೆ ಸಂಗೀತ ನೀಡಿದ್ದೆ. ಆದರೆ ಇಲ್ಲಿ ಹೆಚ್ಚು ಹಾಡುಗಳಿವೆ. ಮಾತ್ರವಲ್ಲ ವೈವಿಧ್ಯಮಯವಾಗಿದೆ. ಹೇಗಿದೆ ಎಂದು ನೀವೇ ಹೇಳಬೇಕು” ಎಂದರು. ಚಿತ್ರದ ಎಲ್ಲ ಹಾಡುಗಳನ್ನು ರಚಿಸಿರುವ ಸಂತೋಷ್ ನಾಯ್ಕ್ “ನಾನು ಸಾಕಷ್ಟು ವರ್ಷಗಳಿಂದ ಹಾಡು ಬರೆಯುತ್ತಿದ್ದೇನೆ. ಆದರೆ ನನಗೆ ಮೊದಲ ಕಮರ್ಷಿಯಲ್ ಹಿಟ್ ಸಿಕ್ಕಿದ್ದು ರವಿಚಂದ್ರನ್ ಅವರ ಸಿನಿಮಾದಲ್ಲಿ. ಹೆಬ್ಬುಲಿ ಚಿತ್ರದಲ್ಲಿ ಅವರೊಂದಿಗೆ ಸುದೀಪ್ ಹಾಡುವಂತೆ ರಚಿಸಿದ್ದ ಎಣ್ಣೆ ಬೇಕು ಅಣ್ಣ ಹಾಡು ಜನಪ್ರಿಯವಾಗಿತ್ತು ಎಂದು ನೆನಪಿಸಿಕೊಂಡರು.
ಚಿತ್ರದ ಛಾಯಾಗ್ರಾಹಕ ಸುರೇಶ್ ಬಾಬು ಮಾತನಾಡಿ “ನಾನು ರವಿಚಂದ್ರನ್ ಅವರೊಂದಿಗೆ ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ. ಶಾಂತಿಕ್ರಾಂತಿ ಚಿತ್ರದಲ್ಲಿ ಲೈಟ್ ಬಾಯ್ ಆಗಿದ್ದೆ. ಇಂದು ಅವರ ಎದುರು ನಿಂತು ಮಾತನಾಡೋಕೆ ಆತಂಕ ಇದೆ” ಎಂದರು. ನಿರ್ಮಾಪಕ ಜಗದೀಶ್ ಕಲ್ಯಾಡಿ ಇದು ತಮ್ಮ ನಿರ್ಮಾಣದ ಪ್ರಥಮ ಚಿತ್ರ ಎಂದರು. ಚಿತ್ರದ ಆಡಿಯೋ ಹಕ್ಕನ್ನು ಖರೀದಿಸಿರುವ ಆನಂದ್ ಆಡಿಯೋ ಶ್ಯಾಮ್ ಮಾತನಾಡಿ, “ಫಸ್ಟ್ ಸಿನಿಮಾ ನಿಮಗೆ ಬೆಸ್ಟ್ ಸಿನಿಮಾ ಆಗಿ ಮೂಡಿ ಬರಲಿ” ಎಂದರು.
Pingback: anonymous
Pingback: Best Roof Guy Waldorf MD