ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ತಮ್ಮ ತಂದೆ, ಬ್ಯಾಡ್ಮಿಂಟನ್ ಚಾಂಪಿಯನ್ ಪ್ರಕಾಶ್ ಪಡುಕೋಣೆ ಅವರ ಬಯೋಪಿಕ್ ಸಿನಿಮಾ ಮಾಡಲು ಮುಂದಾಗಿದ್ದಾರೆ.
ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದವರು.ಅವರು ಮಾಡಿದ ಸಾಧನೆ, ಕ್ರೀಡಾ ಜಗತ್ತಿಗೆ ನೀಡಿದ ಕೊಡುಗೆ ಬಗ್ಗೆ ಜಗತ್ತಿಗೆ ತಿಳಿಸಬೇಕು ಎಂಬುದು ದೀಪಿಕಾ ಆಸೆ ಆಗಿದೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ದೀಪಿಕಾ ಪಡುಕೋಣೆ, “1983ರಲ್ಲಿ ಭಾರತ ತಂಡ ಕ್ರಿಕೆಟ್ ವಿಶ್ವಕಪ್ ಗೆಲ್ಲುವಕ್ಕಿಂತಲೂ ಮೊದಲು ನನ್ನ ತಂದೆ 1981 ರಲ್ಲೇ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ಶಿಪ್ ಗೆಲ್ಲುವ ಮೂಲಕ ಜಾಗತಿಕ ಕ್ರೀಡಾ ಕ್ಷೇತ್ರದಲ್ಲಿ ಭಾರತವನ್ನು ಗುರುತಿಸುವಂತೆ ಮಾಡಿದ್ದರು. ಆಗಿನ ಕಾಲದಲ್ಲಿ ಕ್ರೀಡಾಪಟುಗಳಿಗೆ ಹೆಚ್ಚಿನ ಸೌಲಭ್ಯಗಳಿರಲಿಲ್ಲ. ಬ್ಯಾಡ್ಮಿಂಟನ್ ಕೋರ್ಟ್ ಇಲ್ಲದೇ ನನ್ನ ತಂದೆ ವಿವಾಹದ ಹಾಲ್ನಲ್ಲಿ ಆಡುತ್ತಿದ್ದರು. ಈಗ ಕ್ರೀಡಾಪಟುಗಳಿಗಿರುವ ಸೌಲಭ್ಯ ಅವರಿಗೆ ಸಿಕ್ಕಿದ್ದರೆ ಅವರು ಕ್ರೀಡೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದ್ದರು. ಅವರಿಗೆ ಯಾವುದೇ ಸವಲತ್ತು, ಹಣ ಸಹ ನೀಡಲಾಗುತ್ತಿರಲಿಲ್ಲ. ಕಷ್ಟಪಟ್ಟು ಹಣ ಹೊಂದಿಸಿಕೊಂಡು ಅವರು ಆಟ ಆಡಿ ದೇಶಕ್ಕೆ ಹೆಸರು ತಂದು ಕೊಟ್ಟರು.ಅವರ ಜೀವನ, ಸಾಧನೆ ಬಗ್ಗೆ ಚಿತ್ರ ನಿರ್ಮಿಸುತ್ತೇನೆ” ಎಂದು ಹೇಳಿದ್ದಾರೆ.
ದೀಪಿಕಾ ಪಡುಕೋಣೆ ‘ಕಾ ಪ್ರೊಡಕ್ಷನ್ಸ್’ ಹೆಸರಿನ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ಈಗಾಗಲೇ ಆಸಿಡ್ ದಾಳಿ ಸಂತ್ರಸ್ತೆಯ ಕತೆಯನ್ನು ಸಿನಿಮಾ ಮಾಡಿದ್ದಾರೆ. ತಂದೆಯ ಜೀವನವನ್ನು ಆಧರಿಸಿದ ಸಿನಿಮಾದಲ್ಲಿ ಯಾರು ನಟಿಸುತ್ತಾರೆ ಎನ್ನುವ ವಿಚಾರ ಇನ್ನಷ್ಟೇ ಅಧಿಕೃತವಾಗಬೇಕಿದೆ.
ದೀಪಿಕಾ ಪಡುಕೋಣೆಯ ಕುಟುಂಬ ಈಗಲೂ ಬೆಂಗಳೂರಿನಲ್ಲಿಯೇ ನೆಲೆಸಿದ್ದು, ಪ್ರಕಾಶ್ ಪಡುಕೋಣೆ, ದೀಪಿಕಾರ ತಾಯಿ ಹಾಗೂ ಸಹೋದರಿ ಬೆಂಗಳೂರಿನ ಇಂದಿರಾ ನಗರದಲ್ಲಿ ವಾಸಿಸುತ್ತಿದ್ದಾರೆ.
ಇತ್ತೀಚೆಗೆ ದೀಪಿಕಾ ನಟನೆಯ ‘ಗೆಹ್ರೈಯಾನ್’ ಚಿತ್ರ ತೆರೆಗೆ ಬಂದಿತ್ತು. ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರದಲ್ಲಿ ದೀಪಿಕಾ ನಟಿಸಿದ್ದು, ಚಿತ್ರ ಬಿಡುಗಡೆಗೆ ತಯಾರಾಗಿದೆ. ಹೃತಿಕ್ ರೋಷನ್ ನಟನೆಯ ‘ಫೈಟರ್’ ಹಾಗೂ ಪ್ರಭಾಸ್-ಅಮಿತಾಭ್ ಬಚ್ಚನ್ ಅಭಿನಯದ ‘ಪ್ರಾಜೆಕ್ಟ್ ಕೆ’ ಚಿತ್ರಕ್ಕೂ ದೀಪಿಕಾ ಹೀರೋಯಿನ್ ಆಗಿದ್ದಾರೆ. ಇಂಗ್ಲಿಷ್ ಸಿನಿಮಾದ ರೀಮೇಕ್ ‘ದಿ ಇಂಟರ್ನ್’ ಸಿನಿಮಾದಲ್ಲಿಯೂ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ.
Be the first to comment