ರಾಜ್ಯ ಸರ್ಕಾರದ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಹಿರಿಯ ನಟ ಪ್ರಕಾಶ್ ರಾಜ್ ತಿರಸ್ಕರಿಸಿದ್ದಾರೆ.
ರಂಗಭೂಮಿ ಕ್ಷೇತ್ರದ ಸಾಧಕರಿಗೆ ಪ್ರತಿ ವರ್ಷ ಅಕಾಡೆಮಿಯಿಂದ ಪ್ರಶಸ್ತಿ ನೀಡಲಾಗುತ್ತದೆ. ಕಳೆದ ಎರಡು ಸಾಲುಗಳಲ್ಲಿ ಪ್ರಶಸ್ತಿ ನೀಡಿರಲಿಲ್ಲ. 2022-23, 2023-24 ಮತ್ತು 2024-25ನೇ ಸಾಲಿಗೆ ಮೂವರಿಗೆ ಜೀವಮಾನ ಸಾಧನೆಗಾಗಿ ಗೌರವ ಪ್ರಶಸ್ತಿ, ಒಟ್ಟು 75 ವಾರ್ಷಿಕ ಪ್ರಶಸ್ತಿ ಮತ್ತು 15 ದತ್ತಿನಿಧಿ ಪ್ರಶಸ್ತಿಗೆ ರಂಗ ಸಾಧಕರನ್ನು ಆಯ್ಕೆ ಮಾಡಲಾಗಿದೆ. ರಾಜ್ಯಾದ್ಯಂತ ವೃತ್ತಿ ರಂಗಭೂಮಿಯ 30ಕ್ಕೂ ಹೆಚ್ಚು ಕಲಾವಿದರಿಗೆ ವಾರ್ಷಿಕ ಮತ್ತು ದತ್ತಿ ಪ್ರಶಸ್ತಿ ನೀಡಲಾಗುತ್ತಿದೆ.
ರಾಜ್ಯ ಸರ್ಕಾರ ಪ್ರಕಾಶ್ ರಾಜ್ ಸೇರಿದಂತೆ 93 ಹಿರಿಯ ಕಲಾವಿದರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಉಮಾಶ್ರಿ, ನಾಟಕಕಾರ ಎಚ್‌ಹೆಸ್ ಶಿವಪ್ರಕಾಶ್ , ರಂಗ ಸಂಘಟಕ ಕೋಟಗಾನಹಳ್ಳಿ ರಾಮಯ್ಯಗೆ ಕರ್ನಾಟಕ ಅಕಾಡಮೆ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ಘೋಷಿಸಿದೆ.
ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಘೋಷಣೆ ಬೆನ್ನಲ್ಲೇ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ನಟ ಪ್ರಕಾಶ್ ರಾಜ್, ”ನನ್ನ ಮನಃ ಸಾಕ್ಷಿ ಒಪ್ಪುತ್ತಿಲ್ಲ, ಕ್ಷಮಿಸಿ. ನಾನು ಈಗಷ್ಟೆ ರಂಗಭೂಮಿಗೆ ಮರಳಿದ್ದೇನೆ. ಮಾಡಬೇಕಾದ ಕೆಲಸ ಬೆಟ್ಟದಷ್ಟಿದೆ. ನನಗಿಂತಲೂ ಅರ್ಹರು ರಂಗಭೂಮಿಯಲ್ಲಿ ಇರುವುದರಿಂದ ಈ ಪುರಸ್ಕಾರವನ್ನು ಸ್ವೀಕರಿಸಲು ನನ್ನ ಮನಃಸಾಕ್ಷಿ ಒಪ್ಪುತ್ತಿಲ್ಲ. ಕ್ಷಮಿಸಿ ಅಭಿನಂದಿಸಿದ ಸಹೃದಯರಿಗೆ ಧನ್ಯವಾದಗಳು” ಎಂದು ತಿಳಿಸಿದ್ದಾರೆ.
ಪ್ರಕಾಶ್ ರಾಜ್ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ತನಗಿಂತಲೂ ಅರ್ಹರಿಗೆ ಮೊದಲು ಈ ಪ್ರಶಸ್ತಿ ಸಲ್ಲಬೇಕು ಅನ್ನೋ ನಿರ್ಧಾರವನ್ನು ಜನ ಸ್ವಾಗತಿಸಿದ್ದಾರೆ.
Be the first to comment