Prajarajya Movie Review : ರಾಜಕೀಯ ಪ್ರಜ್ಞೆ ಮೂಡಿಸುವ ‘ಪ್ರಜಾ ರಾಜ್ಯ’

ಚಿತ್ರ : ಪ್ರಜಾರಾಜ್ಯ

ನಿರ್ದೇಶಕ:ವಿಜಯ್ ಭಾರ್ಗವ್
ನಿರ್ಮಾಪಕ: ಡಾ.ವರದರಾಜು
ತಾರಾಗಣ : ದೇವರಾಜ್, ನಾಗಾಭರಣ, ಡಾ.ವರದರಾಜು ಡಿ.ಎನ್, ಅಚ್ಯತಕುಮಾರ್, ವಿಜಯ್ ಭಾರ್ಗವ, ಸುಧಾ ಬೆಳವಾಡಿ, ದಿವ್ಯ ಗೌಡ, ಸುಧಾರಾಣಿ, ಸಂಪತ್ ಮೈತ್ರೇಯ, ಚಿಕ್ಕಹೆಜ್ಜಾಜಿ ಮಹದೇವ್.

ರೇಟಿಂಗ್ : 3.5/5

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಕಳೆದರೂ ಇನ್ನೂ ಪ್ರಜಾಪ್ರಭುತ್ವದ ಮಹತ್ವ ಜನಸಾಮಾನ್ಯರಿಗೆ ಅರಿವಾಗಿಲ್ಲ. ಈ ಬಗ್ಗೆ ಅರಿವು ಮೂಡಿಸುವ ರಾಜಕೀಯ ಪ್ರಜ್ಞೆಯ ಚಿತ್ರ ಪ್ರಜಾರಾಜ್ಯ.

ಒಟ್ಟು 5 ಪಾತ್ರಗಳು ಸಿನಿಮಾದಲ್ಲಿ ಕಥೆ ಹೇಳುತ್ತವೆ. ಇಂಡಸ್ಟ್ರಿ ಮಾಲೀಕ ಭೀಮರಾವ್ (ಅಚುತ್ ಕುಮಾರ್) ಕಷ್ಟದಲ್ಲಿದ್ದರೂ ಉದ್ಯೋಗಗಳಿಗೆ ಸಂಬಳ, ಬ್ಯಾಂಕ್ ಲೋನ್, ಜಿ.ಎಸ್.ಟಿ. ಕಟ್ಟಿದರೂ ಒಂದಷ್ಟು ಸಮಸ್ಯೆಗೆ ಸಿಲುಕಿ ಮುಂದೆ ಸಂಸ್ಥೆ ಮುಚ್ಚ ಬೇಕಾದ ಸ್ಥಿತಿಗೆ ಬರುತ್ತದೆ. ಪ್ರತಿಭಾವಂತ, ಹೆಚ್ಚು ಓದಿಕೊಂಡಿರುವ ವ್ಯಕ್ತಿ ಆದರೂ ತನ್ನ ಅರ್ಹತೆಗೆ ತಕ್ಕ ಕೆಲಸ ಸಿಗದೆ, ಸಿಕ್ಕ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ದರ್ಮೆಂಧರ್ (ವರದರಾಜು) ಪಾತ್ರ ಸತ್ಯ, ನ್ಯಾಯದ ಪರ ನಿಲ್ಲುತ್ತದೆ.

ಅರ್ಜುನ(ವಿಜಯ್ ಭಾರ್ಗವ್) ತನ್ನ ಸ್ನೇಹಿತನಿಗೆ ಪೆಟ್ಟು ಬಿದ್ದಾಗ ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯ ಸಿಗದೆ ಖಾಸಗಿ ಆಸ್ಪತ್ರೆಯಲ್ಲಿ ಚಿಕತ್ಸೆ ಕೊಡಿಸುತ್ತಾನೆ. ಮುಂದೆ ಹಳ್ಳಿಗೆ ಹೋಗಿ ರೈತನಾಗಲು ನಿರ್ಧರಿಸುವ ಪಾತ್ರ ಇದು.ಮುಂದೆ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದ ಕಾರಣ ನ್ಯಾಯ ಕೇಳಲು ಹೋರಾಡುವ ಸನ್ನಿವೇಶ ಉಂಟಾಗುತ್ತದೆ.

ಇನ್ನೊಂದು ಪಾತ್ರ (ಸಂಪತ್ ಮೈತ್ರೇಯ) ತನ್ನ ಕಷ್ಟದಲ್ಲೂ ಮಗಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲು ಸಾಲ ಮಾಡಿ ಖಾಸಗಿ ಶಾಲೆಗೆ ಸೇರಿಸುತ್ತಾನೆ. ಪ್ರೈವೇಟ್ ಶಾಲೆಯ ಡೊನೇಷನ್ ಕಾಟಕ್ಕೆ ನರಳುವ ಸನ್ನಿವೇಶ ಉಂಟಾಗುತ್ತದೆ.

ಈ ಎಲ್ಲರೂ ತಮಗೆ ಪರಿಹಾರ ಸಿಗಬೇಕೆಂದು ಲಾಯರ್ (ಸುಧಾರಾಣಿ) ಮೂಲಕ ಹೋರಾಟಗಾರ ಜಯ ಪ್ರಕಾಶ್ (ದೇವರಾಜ್) ಬೇಟಿ ಮಾಡುತ್ತಾರೆ. ಜಯ ಪ್ರಕಾಶ್ ಎಲ್ಲರನ್ನೂ ಒಗ್ಗೂಡಿಸಿ ಕರ್ನಾಟಕ ಸ್ವಾಭಿಮಾನ ಪಕ್ಷ ಕಟ್ಟಿ ಚುನಾವಣೆಯಲ್ಲಿ ಬಹುಮತದೊಂದಿಗೆ ಜನರ ವಿಶ್ವಾಸ ಪಡೆದು ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾನೆ. ಇಲ್ಲಿಂದ ಅಧಿಕಾರ ಪಡೆದ ನಾಯಕರ ಪಾತ್ರದ ಮತ್ತೊಂದು ದಿಕ್ಕು ತೆರೆದುಕೊಳ್ಳುತ್ತದೆ.

ಹೊಸ ನಾಯಕರುಏನು ಮಾಡುತ್ತಾರೆ? ಜನರಿಗೆ ಕೊಟ್ಟ ಆಶ್ವಾಸನೆ ಈಡೇರಿಸುತ್ತಾರಾ? ಇದಕ್ಕೆ ಉತ್ತರ ಆಗಿ ಚಿತ್ರ ನೋಡಬೇಕು.

ಜನರಲ್ಲಿ ಜಾಗೃತಿ ಮೂಡಿಸುವ ಚಿತ್ರವನ್ನು ಪ್ರೇಕ್ಷಕರಿಗೆ ನೀಡುವಲ್ಲಿ ನಿರ್ಮಾಪಕರಾದ ಡಾ. ವರದರಾಜು. ಡಿ. ಎನ್ ಯಶಸ್ವಿಯಾಗಿದ್ದಾರೆ. ಅವರು ಚಿತ್ರಕ್ಕೆ ಕಥೆ, ಚಿತ್ರಕಥೆ , ಸಂಭಾಷಣೆ ಬರೆದು ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸಿ ಗಮನ ಸೆಳೆದಿದ್ದಾರೆ.

ನಿರ್ದೇಶಕ ವಿಜಯ್ ಭಾರ್ಗವ್ ಪ್ರಥಮ ಪ್ರಯತ್ನದಲ್ಲಿ ಒಂದು ಉತ್ತಮ ಚಿತ್ರವನ್ನು ಮಾಡಿದ್ದಾರೆ. ಪ್ರಜಾಪ್ರಭುತ್ವದ ತಿಳುವಳಿಕೆ, ಹಕ್ಕು, ಮತದ ಮಹತ್ವ ಬಗ್ಗೆ ಅರಿವು ಮೂಡಿಸಿದ್ದಾರೆ.

ಚಿತ್ರಕ್ಕೆ ವಿಜೇತ್ ಮಂಜಯ್ಯ ಸಂಗೀತ ಪೂರಕವಾಗಿದೆ. ರಾಕೇಶ್. ಸಿ. ತಿಲಕ್ ಕ್ಯಾಮರಾ ಕೈಚಳಕ ಉತ್ತಮವಾಗಿದೆ. ಹೋರಾಟಗಾರರ ಪಾತ್ರದಲ್ಲಿ ದೇವರಾಜ್ , ಲಾಯರ್ ಪಾತ್ರದಲ್ಲಿ ಸುಧಾರಾಣಿ, ನಾಯಕನ ತಂದೆಯ ಪಾತ್ರದಲ್ಲಿ ನಾಗಭರಣ, ತಾಯಿಯ ಪಾತ್ರದಲ್ಲಿ ಸುಧಾ ಬೆಳವಾಡಿ, ವಿಜಯ್ ಭಾರ್ಗವ್ , ಡಾ.ವರದರಾಜು , ಅಚ್ಯತಕುಮಾರ್, ದಿವ್ಯ ಗೌಡ, ಸಂಪತ್ ಮೈತ್ರೇಯ, ಚಿಕ್ಕಹೆಜ್ಜಾಜಿ ಮಹದೇವ್ ಎಲ್ಲರೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ರಾಜಕೀಯ ಪ್ರಜ್ಞೆ ಬೆಳೆಸುವ ಈ ಚಿತ್ರವನ್ನು ಪ್ರತಿಯೊಬ್ಬ ನಾಗರಿಕರು ನೋಡಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ, ರಾಜಕೀಯ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳಬಹುದು.
______

Be the first to comment

Leave a Reply

Your email address will not be published. Required fields are marked *

Translate »
error: Content is protected !!