ಪ್ರಸಿದ್ಧ ಮಾಡೆಲ್ ಬಲಿ ಪಡೆದ ಕ್ಯಾನ್ಸರ್

ಪ್ರಸಿದ್ಧ ಮಾಡೆಲ್ ಮತ್ತು ನಟಿ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್ ​ಗೆ ಬಲಿಯಾಗಿದ್ದಾರೆ.

32 ವರ್ಷದ ಪೂನಂ ಪಾಂಡೆ ರಿಯಾಲಿಟಿ ಶೋ, ಮಾಡೆಲಿಂಗ್, ಆಲ್ಬಂ ವಿಡಿಯೋಗಳ ಮೂಲಕ ಪ್ರಸಿದ್ಧಿ ಗಳಿಸಿದ್ದರು. ಅವರ ನಿಧನ ವಾರ್ತೆ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ.

ಪೂನಂ ಪಾಂಡೆ ಕೆಲವು ತಿಂಗಳುಗಳಿಂದ ಗರ್ಭಕಂಠ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ ಬೆಳಗ್ಗೆ ಉತ್ತರಪ್ರದೇಶದ ತಮ್ಮ ಕಾನ್ಪುರ ನಿವಾಸದಲ್ಲಿ ನಿಧನರಾದರು.

ಪೂನಂ ನಿಧನದ ಬಗ್ಗೆ ಅವರ ಮ್ಯಾನೇಜರ್‌ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಪ್ರಕಟಿಸಿದ್ದಾರೆ. ‘ಈ ದಿನದ ಬೆಳಗನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪೂನಂ ಪಾಂಡೆ ಗರ್ಭಕಂಠ ಕ್ಯಾನ್ಸರ್‌ನಿಂದ ನಮ್ಮನ್ನು ಅಗಲಿದರು ಎಂದು ಹೇಳಲು ದುಃಖವಾಗುತ್ತಿದೆ. ಜೀವನದಲ್ಲಿ ಪ್ರೀತಿ, ವಿನಯದಿಂದ ವರ್ತಿಸಿದ್ದ ಅವರ ಖಾಸಗಿ ಬದುಕಿನ ಬಗ್ಗೆ ಮಾತನಾಡಬಾರದು ಎಂದು ಮನವಿ ಮಾಡುತ್ತೇವೆ’ ಎಂದು ಮ್ಯಾನೇಜರ್‌ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಬೋಲ್ಡ್‌ ಫೋಟೊ, ಬೋಲ್ಡ್‌ ನಟನೆ,  ವಿವಾದಾತ್ಮಕ ಹೇಳಿಕೆಗಳಿಂದ ಪೂನಂ ಪಾಂಡೆ ಜನಪ್ರಿಯರಾಗಿದ್ದರು. ಬಿಹಾರದಲ್ಲಿ ಜನಿಸಿದ ಪೂನಂ ಓದಿದ್ದು ಮುಂಬೈನಲ್ಲಿ. ಮಾಡೆಲಿಂಗ್‌ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಅವರು 2013ರಲ್ಲಿ ಹಿಂದಿಯ ನಶಾ ಸಿನಿಮಾದ ಮೂಲಕ ಬಾಲಿವುಡ್‌ ಪ್ರವೇಶಿಸಿದರು.ನಂತರ ಅವರು ತೆಲುಗು, ತಮಿಳು ಸಿನಿಮಾಗಳಲ್ಲೂ ನಟಿಸಿದ್ದರು. ಕನ್ನಡದ ‘ಲವ್‌ ಈಸ್‌ ಪಾಯ್ಸನ್‌’ ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.

2011ರಲ್ಲಿ ಭಾರತ ಕ್ರಿಕೆಟ್‌ ತಂಡವು ವಿಶ್ವಕಪ್‌ ಗೆದ್ದರೆ ತಂಡದ ಎದುರು ನಾನು ಸಂಪೂರ್ಣವಾಗಿ ಬೆತ್ತಲಾಗುವೆ ಎಂದು ಹೇಳುವ ಮೂಲಕ ಪೂನಂ ಪಾಂಡೆ ಸುದ್ದಿಯಾಗಿದ್ದರು. ಬಳಿಕವೂ ಅವರು ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!