ಪೊಲೀಸ್ ವರ್ಸಸ್ ಪೊಲೀಸ್; ಶೀತಲ ಸಮರಕ್ಕೆ ಸಜ್ಜಾದ ವಸಿಷ್ಠ ಮತ್ತು ಕಿಶೋರ್

ಮಲ್ಲೇಶ್ವರದ ಮಹಾಗಣಪತಿ ದೇವಸ್ಥಾನದಲ್ಲಿ ಮುಹೂರ್ತ: ಜನವರಿಯಲ್ಲಿ ಶೂಟಿಂಗ್

ವಸಿಷ್ಟ ಸಿಂಹ ಮತ್ತು ಕಿಶೋರ್ ಮುಖ್ಯ ಭೂಮಿಕೆ ನಿಭಾಯಿಸಲಿರುವ ಚಿತ್ರದ ಮುಹೂರ್ತ ಶುಭ ಶುಕ್ರವಾರ ಮಲ್ಲೇಶ್ವರದ ಮಹಾಗಣಪತಿ ದೇವಸ್ಥಾನದಲ್ಲಿ ನೆರವೇರಿದೆ. ಜನರತ್ನ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಇನ್ನೂ ಶೀರ್ಷಿಕೆ ಅಂತಿಮವಾದ ಈ ಚಿತ್ರವನ್ನು ವೃತ್ತಿಯಲ್ಲಿ ರಿಯಲ್ ಎಸ್ಟೆಟ್ ಉದ್ಯಮಿಯಾಗಿರುವ ಜನಾರ್ಧನ್ ಎಂಬುವವರು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ನಿರ್ಮಾಪಕ ಜರ್ನಾಧನ್ ಅವರ ಸಹೋದರಿ ಲತಾ ಶಿವಣ್ಣ ಆಗಮಿಸಿ ಕ್ಲಾಪ್ ಮಾಡಿದರೆ, ನಿರ್ಮಾಪಕರ ಪುತ್ರಿ ಸ್ವೀಕೃತಿ ಕ್ಯಾಮರಾಕ್ಕೆ ಚಾಲನೆ ನೀಡಿದರು.

ಈಗಾಗಲೇ ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ವಚನ್, ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿದೇಶಕನಾಗಿ ಎಂಟ್ರಿ ಪಡೆಯುತ್ತಿದ್ದಾರೆ. ಚಿತ್ರದ ಬಗ್ಗೆ ಮಾಹಿತಿ ನೀಡುವ ಅವರು. ‘ಪವನ್ ಕುಮಾರ್ ಅವರೊಂದಿಗೆ ಲೂಸಿಯಾ ಸಿನಿಮಾದಲ್ಲಿ ಕೆಲಸ ಮಾಡಿದ್ದೆ. ಆವತ್ತೇ ಈ ಕಥೆಯ ಬಗ್ಗೆ ಛಾಯಾಗ್ರಾಹಕ ನವೀನ್ ಕುಮಾರ್ ಅವರೊಂದಿಗೆ ಚರ್ಚಿಸಿದ್ದೆ. ಅವರು ವಸಿಸ್ಟ ಅವರನ್ನು ಭೇಟಿ ಮಾಡಿಸಿದ್ದರು. ಅವರಿಂದಲೂ ಒಪ್ಪಿಗೆ ಸಿಕ್ಕ ಮೇಲೆ ಜನಾರ್ಧನ ಅವರ ಪರಿಚಯವಾಯಿತು. ಇದೀಗ ಸಿನಿಮಾ ಸೆಟ್ಟೇರಿದೆ’ ಎಂದು ಸಿನಿಮಾ ಸೆಟ್ಟೇರಿದ ಕಥೆ ಹೇಳಿಕೊಂಡರು ನಿರ್ದೇಶನ ವಚನ್.

‘ಈ ಚಿತ್ರದಲ್ಲಿ ಇಬ್ಬರು ಹೀರೋಗಳು. ವಸಿಷ್ಟ ಸಿಂಹ ಮತ್ತು ಕಿಶೋರ್. ಇಬ್ಬರೂ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ತನಿಖೆಯ ಹಾದಿಯಲ್ಲಿ ಸಾಗುವ ಈ ಸಿನಿಮಾದಲ್ಲಿ ಇಬ್ಬರ ನಡುವೆ ಶೀತಲ ಸಮರ ನಡೆಯುತ್ತದೆ. ನೈಜ ಘಟನೆಗಳನ್ನು ಮಿಶ್ರಣ ಮಾಡಿ ಸಾಗುವ ಈ ಚಿತ್ರದಲ್ಲಿ ಎರಡೂ ಪಾತ್ರಗಳು ಅಷ್ಟೇ ತೂಕದ್ದಾಗಿರಲಿದೆ. ಈ ಸಂಬಂಧ ಒಂದಷ್ಟು ಪೊಲೀಸ್ ಅಧಿಕಾರಿಗಳನ್ನೂ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿದ್ದೇನೆ. ಜನವರಿಯಲ್ಲಿಯೇ ಈ ಸಿನಿಮಾ ಶುರುವಾಗಬೇಕಿತ್ತು. ಕರೊನಾ ಹಿನ್ನೆಲೆಯಲ್ಲಿ ಸಾಧ್ಯವಾಗಲಿಲ್ಲ. ಇದೀಗ ಮುಹೂರ್ತ ಮುಗಿದಿದ್ದು, ಸಂಕ್ರಾಂತಿ ಬಳಿಕ ಚಿತ್ರೀಕರಣ ಬಿರುಸಿನಿಂದ ಶುರುವಾಗಲಿದೆ ಎಂದರು ವಚನ್.

ನಟ ವಸಿಷ್ಟ ಸಿಂಹ ಮಾತನಾಡಿ, ‘ಎಲ್ಲ ಸ್ನೇಹಿತ ಬಳಗ ಸೇರಿ ಒಂದೊಳ್ಳೆ ಪ್ರಾಡಕ್ಟ್ ಮಾಡಬೇಕೆಂದು ಹೊರಟಿದ್ದೇವೆ. ಚೆನ್ನಾಗಿ ಮೂಡಿಬರಲಿದೆ ಎಂಬ ಭರವಸೆ ಇದೆ. ಇಬ್ಬರ ನಡುವಿನ ಶೀತಲ ಯುದ್ಧ ಕುತೂಹಲ ಮೂಡಿಸುತ್ತದೆ. ನರೇಷನ್ ಕೇಳಿದಾಗಲೇ ಚೆನ್ನಾಗಿದೆ ಎಂದೆನಿಸಿತ್ತು. ಹಾಗಾಗಿ ಸಿನಿಮಾ ಒಪ್ಪಿಕೊಂಡೆ. ಸ್ನೇಹಿತ ಜನಾರ್ಧನ್ ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಅವರೊಂದಿಗೆ ದಯವಿಟ್ಟು ಗಮನಿಸಿ ಮಾಡಿದ್ದೆ. ಇದೀಗ ಮತ್ತೆ ಜತೆಯಾಗಿದ್ದೇವೆ. ಓಟಿಟಿ ವೇದಿಕೆ ಸ್ಟ್ರಾಂಗ್ ಆಗಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಸಲ್ಲುವ ಸ್ಕ್ರಿಪ್ಟ್ ರೆಡಿಯಾಗುತ್ತಿದೆ. ನೈಜತೆಗೆ ಹೆಚ್ಚು ಗಮನ ಹರಿಸಿದ್ದೇವೆ ಎಂಬುದು ವಸಿಷ್ಟ ಮಾತು.

ಡಿಸೆಂಬರ್ ಮೊದಲ ವಾರದಲ್ಲಿ ಬೆಂಗಳೂರು, ತುಮಕೂರು, ಮೈಸೂರು, ಮಡಿಕೇರಿ ಸುತ್ತಮುತ್ತ ಮತ್ತು ವಿದೇಶಗಳಲ್ಲಿಯೂ ಶೂಟಿಂಗ್ ಮಾಡಿಕೊಳ್ಳುವುದು ತಂಡದ ಪ್ಲ್ಯಾನ್. ಇತ್ತೀಚಿಗೆ ಸಾಕಷ್ಟು ಸಿನಿಮಾ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿರುವ ಹಾಸ್ಯ ನಟ ಚಿಕ್ಕಣ್ಣ, ಈ ಸಿನಿಮಾದಲ್ಲಿಯೂ ವಿಶೇಷ ಪಾತ್ರವೊಂದನ್ನು ನಿಭಾಯಿಸಲಿದ್ದಾರೆ. ಬ್ಯಾಂಡ್ ಸೆಟ್ ಯುವಕನಾಗಿ ಧರ್ಮಣ್ಣ ನಟಿಸಲಿದ್ದು, ಈ ರೀತಿಯ ಪಾತ್ರ ಸಿಕ್ಕಿದ್ದು ಖುಷಿ ನೀಡಿದೆ ಎಂದರು. ನಾಯಕಿ ಆಯ್ಕೆಯೂ ನಡೆಯುತ್ತಿದ್ದು, ನಾಲ್ಕು ಹಾಡುಗಳಿಗೆ ಅನೂಪ್ ಸೀಳಿನ್ ಸಂಗೀತ ನೀಡಲಿದ್ದಾರೆ. ಮಾಸ್ತಿ ಸಂಭಾಷಣೆ ಬರೆದರೆ, ನವೀನ್ ಕುಮಾರ್ ಛಾಯಾಗ್ರಹಣ ಮತ್ತು ಹರೀಶ್ ಕೊಮ್ಮೆ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಸತೀಶ್ ಕಲಾ ನಿರ್ದೇಶನ, ಅರ್ಜುನ್ ಸಾಹಸ ನಿರ್ದೇಶನ, ಹರ್ಷಾಲಿ ಸುಧೀಂದ್ರ ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ಆಗಿದ್ದಾರೆ.

ಇನ್ನು ಪಾತ್ರವರ್ಗದಲ್ಲಿ ವಸಿಷ್ಠ ಮತ್ತು ಕಿಶೋರ್ ಜತೆಗೆ ಸುಮನ್, ಧರ್ಮಣ್ಣ ಕಡೂರು, ಪ್ರಕಾಶ್ ತುಮ್ಮಿನಾಡು,ಸಿದ್ಲಿಂಗು ಶ್ರೀಧರ್, ರೋಚಿತ್, ಕಾಂಇಡಿ ಕಿಲಾಡಿಗಳು ಖ್ಯಾತಿಯ ಸೂರ್ಯ ಮತ್ತು ಮುತ್ತುರಾಜ್ ತಾರಾಬಳಗದಲ್ಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!