ಚಿತ್ರ ವಿಮರ್ಶೆ : ಪೊಗರು ಖದರು ಒಗರು

ನಿರ್ದೇಶನ: ನಂದ ಕಿಶೋರ್‌

ನಿರ್ಮಾಣ: ಬಿ ಕೆ ಗಂಗಾಧರ್‌

ಸಂಗೀತ: ಚಂದನ್‌ ಶೆಟ್ಟಿ

ಛಾಯಾಗ್ರಾಹಣ: ವಿಜಯ್‌ ಮಿಲ್ಟನ್‌ …

ತಾರಾಗಣ: ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ, ರಾಘವೇಂದ್ರ ರಾಜ್‌ಕುಮಾರ್‌, ಮಯೂರಿ, ಪವಿತ್ರಾ ಲೋಕೇಶ್‌, ರವಿಶಂಕರ್‌, ಚಿಕಣ್ಣ

ಬಿಸಿನಿಮಾಸ್ ರೇಟಿಂಗ್ : 2.5/5

ಚಿತ್ರ ವಿಮರ್ಶೆ : ಪೊಗರು ಖದರು ಒಗರು

ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ಕಾಣುತ್ತಿರುವ ಸ್ಟಾರ್ ನಟ ಅಂದ್ರೆ ಧ್ರುವ ಸರ್ಜಾ. ಈ ಧ್ರುವ ನಕ್ಷತ್ರ ಇದ್ರೆ ಸಾಕು ಸಿನಿಮಾ ಹಿಟ್ ಅನ್ನೋ ನಂಬಿಕೆ ಹಲವು ನಿರ್ಮಾಪಕರದ್ದು. ಅದೇ ನಂಬಿಕೆಯಲ್ಲಿ ಪೊಗರು ಚಿತ್ರವನ್ನೂ ಮಾಡಿದ್ದಾರೆ ನಿರ್ಮಾಪಕ ಗಂಗಾಧರ್. ಅವರು ನಿರ್ದೇಶನದ ಹೊಣೆ ಹೊರಿಸಿರೋದು ನಂದಕಿಶೋರ್ ಅವರ ಮೇಲೆ. ಸಾಲು ಸಾಲು ರಿಮೇಕ್ ಚಿತ್ರಗಳನ್ನು ನಿರ್ದೇಶಿಸಿರೋ ಅವರು ಅಲ್ಲೊಂದು ಇಲ್ಲೊಂದು ಸ್ವಮೇಕ್ ಚಿತ್ರ ಮಾಡಿದಾಗಲೆಲ್ಲ ಸೋಲನ್ನೇ ಅನುಭವಿಸಿದ್ದಾರೆ. ಪೊಗರು ಅದಕ್ಕೆ ಲೇಟೆಸ್ಟ್ ಉದಾಹರಣೆ ಎನ್ನಬಹುದು.
ಅದ್ದೂರಿತನ ಇದ್ರೆ ಸಾಕು ಸಿನಿಮಾ ಗೆಲ್ಲುತ್ತೆ ಅಂತ ನಂಬಿರುವ ಚಿತ್ರತಂಡಗಳಲ್ಲಿ ಪೊಗರು ತಂಡ ಕೂಡಾ ಒಂದು. ಚಿತ್ರದ ನಾಯಕ ಅವನ ಗೆಟಪ್ ಗೆ ತಕ್ಕಂತೆ ಉಢಾಳ. ಹಾಗಾಗಿ ಪೊಗರಿನ ಡೈಲಾಗ್ ಗಳು ಮತ್ತು ದೃಶ್ಯಗಳು ಚಿತ್ರದಲ್ಲಿ ಢಾಳಾಗಿ, ಹೇರಳವಾಗಿ, ಧಾರಾಳವಾಗಿ ಕಾಣಿಸುತ್ತವೆ. ಆದರೆ ಪ್ರೇಕ್ಷಕ ನಿರಾಳ ಆಗುವುದು ಮಾತ್ರ ಚಿತ್ರ ಮುಗಿದಾಗ ಎನ್ನುವಷ್ಟು ರೇಜಿಗೆ ಹುಟ್ಟಿಸುವ ಮಟ್ಟಕ್ಕೆ ಸಿನಿಮಾದ ಕ್ವಾಲಿಟಿಯ ಗೋಜಿಗೆ ಹೋಗದೆ ನಾಯಕನನ್ನು ಒಂದು ರೇಂಜಿಗೆ ತಗೊಂಡು ಹೋಗಲು ಮಾತ್ರ ಪ್ರಯತ್ನ ಪಟ್ಟಿದ್ದಾರೆ ನಿರ್ದೇಶಕ ನಂದಕಿಶೋರ್.
ಚಿತ್ರದ ಕಥೆಯಲ್ಲಿ ಯಾವುದೇ ಹೊಸತನ ಬಿಡಿ, ಕುತೂಹಲಕಾರಿ ಅಂಶಗಳೇ ಇಲ್ಲ. ಅಪ್ಪ ಅಪ್ಪನಿಂದ ದೂರವಾಗಿ ಅನಾಥ ಮಗುವಾದೆ ನಾನು ಎನ್ನುವ ಧ್ರುವ ಸಮಾಜ ವಿರೋಧಿಯಾಗಿ ಕಾಣಿಸಿಕೊಂಡಿದ್ದಾರೆ. ದುಡ್ಡಿಗೋಸ್ಕರ ಏನು ಬೇಕಾದ್ರೂ ಮಾಡುವ ಮನುಷ್ಯನನ್ನು ನೋಡಿದಾಗ ಹೊಸಜೀವನ ಚಿತ್ರದ ಶಂಕರ್ ನಾಗ್ ನೆನಪಾದರೆ ಅಚ್ಚರಿಯಿಲ್ಲ. ನಾಯಕ ಮತ್ತು ಅವನ ಸಂಸಾರ ಮತ್ತು ಫೈಟ್ ಮಾಡುವಾಗ ಅವನು ವಿಲನ್ ಗಳ ಜೊತೆಗೆ ಗಾಳಿಯಲ್ಲಿ ನಡೆಸುವ ಸಂಚಾರ, ಅದರ ಜೊತೆಗೆ ನಾಯಕಿಯ ಜೊತೆಗೆ ಒಂದಿಷ್ಟು ಸಮಾಚಾರ ಇವೇ ಪೊಗರಿನ ಕಥೆಯಲ್ಲಿರೋ ಅಂಶಗಳು.

ಎರಡನೇ ಮದುವೆ ಆಗೋ ನಾಯಕನ ಅಮ್ಮ, ನಾಯಕಿ ರಶ್ಮಿಕಾ ಮಂದಣ್ಣ, ಎರಡನೇ ಅಪ್ಪ ರವಿಶಂಕರ್ ಯಾರೂ ಕೂಡ ನಾಯಕ ಧ್ರುವ ಅವರನ್ನು ಮೀರಿಸುವ ಸಾಹಸಕ್ಕೆ ಕೈಹಾಕೋಲ್ಲ. ಸಾಲಿಡ್ ಬಾಡಿ ಇದ್ರೆ ಸಾಕು ಹೀರೋಯಿಸಂ ತೋರಿಸಬಹುದು ಅಂದುಕೊಂಡಿರುವ ಪಾತ್ರದಲ್ಲಿ ಘನವಾದ ಅಭಿನಯ ಮಾಡಿರುವ ಧ್ರುವ ಎಲ್ಲ ಪಾತ್ರಗಳಿಗೂ ಹೊಂದಿಕೊಳ್ಳುವ ದ್ರವ ಅಂತೂ ಆಗಿಲ್ಲ. ಅವರನ್ನು ಬಿಟ್ಟರೆ ಇಡೀ ಚಿತ್ರದಲ್ಲಿ ಇರೋದು ಬರೀ ಅನಿಲ, ಅಂದ್ರೆ ಗ್ಯಾಸ್ ಅಷ್ಟೇ. ಇನ್ನೊಂದು ವಿಶೇಷ ಅಂದ್ರೆ, ಗಾಂಧಿನಗರ ಅಂದ್ರೆ ಇನ್ನೊಬ್ಬರ ತಲೆ ಮೇಲೆ ಕೈ ಇಡೋದಕ್ಕೆ ಫೇಮಸ್ ಅನ್ನೋ ಮಾತಿಗೆ ಅಪವಾದದಂತೆ ಇನ್ನೊಬ್ಬರ ತಲೆ ಮೇಲೆ ಕಾಲು ಇಟ್ಟು ಡಿಫರೆಂಟ್ ಎನಿಸಿಕೊಂಡಿದ್ದಾರೆ ಧ್ರುವ.

ಆರಂಭದಲ್ಲಿ ತನ್ನ ತೋಳುಗಳ ಬೈಸೆಪ್ಸ್ ತೋರಿಸುತ್ತಾ ಬಿಲ್ಡ್ ಅಪ್ ತೆಗೆದುಕೊಳ್ಳುವ ಧ್ರುವ ಸರ್ಜಾ ಚಿತ್ರದ ಕೊನೆಯಲ್ಲಿ ವಿದೇಶಿ ವಿಲನ್ ಗಳ ತೋಳು ಪ್ರದರ್ಶನದ ಮುಂದೆ ಇದು ತೋಳಲ್ಲ ತೊಲೆ ಎನ್ನುವ ಸಾಧು ಕೋಕಿಲಾ ಅವರಂತೆ ಡಮ್ಮಿ ಪೀಸ್ ಆಗುತ್ತಾರೆ ಅನ್ನೋದಂತೂ ನಿಜ. ಅದ್ಯಾವ ಘನಂದಾರಿ ಪಾತ್ರ ಅಂತ ಅದಕ್ಕೆ ಧನಂಜಯ ಅವರನ್ನು ಪಾತ್ರಧಾರಿಯಾಗಿಸಿದರೋ ಗೊತ್ತಿಲ್ಲ. ಇದಕ್ಕೆ ಉತ್ತರವನ್ನು ಆ ಡಾಲಿ ಮಹದೇವನೇ ಹೇಳಬೇಕು. ರಾಘವೇಂದ್ರ ರಾಜ್ ಕುಮಾರ್ ಅವರನ್ನೂ ಕೂಡ ಬರೀ ಸ್ಟಾರ್ ವ್ಯಾಲ್ಯೂಗಾಗಿ ಸೇರಿಸಿಕೊಳ್ಳಲಾಗಿದೆ. ಚಂದನ್ ಶೆಟ್ಟಿ ಸಂಗೀತದಲ್ಲಿ ಖರಾಬು ಬಿಟ್ರೆ ಉಳಿದ ಹಾಡುಗಳೆಲ್ಲಾ ಖರಾಬು. ಹರಿಕೃಷ್ಣ ಅವರ ಹಿನ್ನೆಲೆ ಸಂಗೀತ ಪೊಗರಿನ ಆರ್ಭಟಕ್ಕೆ ಸಾಕ್ಷಿಯಾಗಿದೆ. ವಿಜಯ್ ಮಿಲ್ಟನ್ ಅವರ ಛಾಯಾಗ್ರಹಣದಲ್ಲಿ ಚಿತ್ರ ಕೊಂಚ ಮಿಂಚುತ್ತದೆ. ಚಿತ್ರದಲ್ಲಿ ಗಮನ ಸೆಳೆಯುವ ಏಕೈಕ ಅಂಶ ಅಂದ್ರೆ ಪ್ರಶಾಂತ್ ರಾಜಪ್ಪ ಅವರ ಸಂಭಾಷಣೆ. ಅದೊಂದು ಇಲ್ಲದಿದ್ದರೆ ಪೊಗರು, ಬಿದಿರಿನ ಬೊಂಬಿಗೆ ಸಿಕ್ಕಿಸಿದ ಬೆದರು ಬೊಂಬೆಯಂತೆ ಕಾಣುತ್ತಿತ್ತು ಅನ್ನೋದಂತೂ ಸತ್ಯ.

@ಬಿಸಿನಿಮಾಸ್

Be the first to comment

Leave a Reply

Your email address will not be published. Required fields are marked *

Translate »
error: Content is protected !!